ಬೆಂಗಳೂರು: ಚಾಮರಾಜಪೇಟೆಯ ಮೈದಾನ ಬಿಬಿಎಂಪಿ ಸ್ವತ್ತಾಗಿದ್ದು ವಕ್ಫ್ ಬೋರ್ಡ್‌ಗೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲವೆಂದು ಹೇಳಿ ನಾಗರಿಕ ಒಕ್ಕೂಟ ಜುಲೈ 12ರ ಮಂಗಳವಾರ ಕರೆಕೊಟ್ಟಿದ್ದ ಒಂದು ದಿನದ ಚಾಮರಾಜಪೇಟೆ ಬಂದ್ ಯಶಸ್ವಿಯಾಗಿತ್ತು. ಮುಂಜಾನೆ 8ರಿಂದ ಸಂಜೆ 5 ಗಂಟೆ ತನಕ ಅಂಗಡಿ-ಮುಂಗಟ್ಟು, ಶಾಲೆಗಳು ಸೇರಿದಂತೆ ಇತರೆ ಖಾಸಗಿ ಕಚೇರಿಗಳೆಲ್ಲವೂ ಬಂದ್ ಆಗಿದ್ದವು.
ನಿತ್ಯ ವಾಹನದಿಂದ ಗಿಜಿಗುಡುತ್ತಿದ್ದ ಮುಖ್ಯ ರಸ್ತೆಗಳೆಲ್ಲ ಬಿಕೋ ಎನ್ನುತ್ತಿದ್ದವು. ಇತ್ತ ಜನ ಸಂಚಾರವೂ ವಿರಳವಾಗಿತ್ತು. ಮೆಡಿಕಲ್ ಶಾಪ್‌ನಿಂದ ಹಿಡಿದು ತುರ್ತು ಬಳಕೆಗೆ ಬೇಕಿದ್ದ ಹಾಲಿನ ಬೂತ್ ಕೂಡ ಮುಚ್ಚಿದ್ದವು. ಬೀದಿ ಬದಿ ವ್ಯಾಪಾರಿಗಳು, ತಳ್ಳು ಗಾಡಿ ವ್ಯಾಪರಸ್ಥರೆಲ್ಲವೂ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರು.
ಇದೇ ವಾರ ಬೈಕ್ ರ‍್ಯಾಲಿ ಮೂಲಕ ಸರ್ಕಾರದ ಹಾಗೂ ಬಿಬಿಎಂಪಿ ಗಮನ ಸೆಳೆಯುವ ಕಾರ್ಯಕ್ಕೆ ಒಕ್ಕೂಟ ಮುಂದಾಗುತ್ತಿದೆ. ಈ ಸಂಬಂಧ ಚಾಮರಾಜಪೇಟೆ ನಾಗರಿಕ ಒಕ್ಕೂಟದ ಅಧ್ಯಕ್ಷ ರುಕ್ಮಾಂಗದ ಹಾಗೂ ಲಹರಿವೇಲು, ರಾಮೇಗೌಡ ಸುದ್ದಿಗೋಷ್ಠಿ ನಡೆಸಿದರು.
ಇದನ್ನೂ ಓದಿ | ಚಾಮರಾಜಪೇಟೆಯಲ್ಲಿ ಈದ್ಗಾ ಮೈದಾನ ಗಲಾಟೆ ಆಯ್ತು, ಈಗ ಪುತ್ಥಳಿ ವಿಚಾರವಾಗಿ ಗುಂಪು ಘರ್ಷಣೆ!
ಈ ವೇಳೆ ರಾಮೇಗೌಡ ಮಾತನಾಡಿ, ಕರೆ ನೀಡಿದ್ದ ಬಂದ್‌ಗೆ ಶಾಲಾ-ಕಾಲೇಜು, ಸಂಸ್ಥೆ , ಬ್ಯಾಂಕ್ ಸೇರಿ ಎಲ್ಲ ಕಡೆಗಳಿಂದ ಬೆಂಬಲ ವ್ಯಕ್ತವಾಗಿದ್ದು, ಈ ರೀತಿಯಾದಂತಹ ಬೆಂಬಲ ಎಂದೂ ಸಿಕ್ಕಿರಲಿಲ್ಲ. ಮೈದಾನವು ಸರ್ಕಾರಕ್ಕೆ ಸೇರುವುದರ ಜತೆಗೆ ಜಯ ಚಾಮರಾಜೇಂದ್ರ ಒಡೆಯರ್ ಹೆಸರನ್ನು ನಾಮಕರಣ ಮಾಡಬೇಕು. ಈ ಸಂಬಂಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಲಹರಿ ವೇಲು ಈ ಬಗ್ಗೆ ಮಾತನಾಡಿ, ಇಂದಿನ ಬಂದ್‌ಗೆ ನಾಗರಿಕರು ಎಲ್ಲ ರೀತಿಯಾದ ಬೆಂಬಲ ಕೊಟ್ಟು ಸಹಕರಿಸಿದರು. ಈ ಮೈದಾನ ಸರ್ವಜನಾಂಗದ ಶಾಂತಿಯ ತೋಟ ಆಗಬೇಕು. ಇಲ್ಲಿ ಬಕ್ರೀದ್, ಕ್ರಿಸ್ಮಸ್, ಗಣೇಶ, ಶಿವರಾತ್ರಿ ಹಬ್ಬ ಎಲ್ಲ ರೀತಿಯಾದ ಹಬ್ಬ ಆಚರಿಸಲು ಅವಕಾಶ ಕೊಡಬೇಕಿದೆ. ಈ ಸಂಬಂಧ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದೇವೆ. ಗುರುವಾರ ಭೇಟಿಯಾಗಲು ಅವಕಾಶ ಸಿಕ್ಕಿದ್ದು, ಸರ್ಕಾರದ ಆಸ್ತಿಯನ್ನು ಉಳಿಸುವಂತೆ ಮನವಿ ಮಾಡಲಾಗುವುದು ಎಂದರು.
ಚಾಮರಾಜಪೇಟೆ ನಾಗರಿಕರ ಒಕ್ಕೂಟದ ಅಧ್ಯಕ್ಷ ರುಕ್ಮಾಂಗದ ಮಾತನಾಡಿ, ಬಂದ್ ಯಶಸ್ವಿ ಬಗ್ಗೆ ಸಂತಸವಿದ್ದು, ನಮಗೆ ಈದ್ಗಾ ಮೈದಾನದಲ್ಲಿ ಎಲ್ಲ ರೀತಿಯಾದ ಹಬ್ಬಗಳನ್ನು ಆಚರಿಸುವ ಅವಕಾಶವನ್ನು ಕೊಡಬೇಕಿದೆ. ಜಯ ಚಾಮರಾಜೇಂದ್ರ ಒಡೆಯರ್ ಹೆಸರಿನ ಜತೆಗೆ ಪುತ್ಥಳಿ ಅನಾವರಣ ಮಾಡಬೇಕು. ಈ ಆಸ್ತಿ ಸರ್ಕಾರದ್ದು ಎಂದು ದಾಖಲು ಮಾಡಿ ಎಂದರು.
ಮೈದಾನಕ್ಕೆ ನುಗ್ಗಲು ಬಂದವರು ಪೊಲೀಸರ ವಶಕ್ಕೆ
ಚಾಮರಾಜಪೇಟೆ ಮೈದಾನದೊಳಗೆ ಪ್ರವೇಶಿಸಲು ಒಕ್ಕೂಟದ ಸದಸ್ಯರು ಮುಂದಾದರು., ಈ ವೇಳೆ ಪೊಲೀಸರು ನಿರಾಕರಿಸಿದಾಗ, ಇದು ಸಾರ್ವಜನಿಕರ ಮೈದಾನ ನಾವು ಯಾಕೆ ಹೊರಗೆ ಹೋಗಬೇಕೆಂದು ಪಟ್ಟು ಹಿಡಿದರು. ಈ ಮಧ್ಯೆ ಪೊಲೀಸರು ಹಾಗೂ ನಾಗರಿಕರ ನಡುವೆ ವಾಗ್ವಾದ ನಡೆಯಿತು.
ಇತ್ತ ಶ್ರೀರಾಮ ಸೇನೆಯ ಕಾರ್ಯಕರ್ತರು ಜೈ ಶ್ರೀರಾಮ ಎಂದು ಘೋಷಣೆ ಕೂಗುತ್ತಿದ್ದಂತೆ ಪೊಲೀಸರು ಅವರನ್ನೆಲ್ಲ ವಶಕ್ಕೆ ಪಡೆದರು. ವಂದೇ ಮಾತರಂ ಸಂಘಟನೆಯ ಕಾರ್ಯಕರ್ತರು ಮೈದಾನಕ್ಕೆ ನುಗ್ಗಲು ಯತ್ನಿಸಲು ಮುಂದಾದರು. ಶಾಂತಿಯುವಾಗಿ ಪ್ರತಿಭಟನೆ ಮಾಡುವವರನ್ನು ಯಾಕೆ ಬಂಧಿಸುತ್ತಿದ್ದೀರಿ? ನಾವು ದರೋಡೆ ಮಾಡಿದ್ದೀವಾ? ನಮ್ಮ ಜಾಗವನ್ನು ನಾವು ಕೇಳುತ್ತಿದ್ದೀವಿ. ನ್ಯಾಯಯುತವಾಗಿ ಹೋರಾಟ ಮಾಡಬಾರದಾ? ಎಂದು ಪ್ರಶ್ನಿಸಿದರು.
ವಿವಾದ ಶುರುವಾಗಿದ್ದು ಎಲ್ಲಿಂದ?
ಅನೇಕ ವರ್ಷಗಳಿಂದ ಗೊಂದಲ, ವಿವಾದಕ್ಕೆ ಚಾಮರಾಜಪೇಟೆಯ ಮೈದಾನ ಕಾರಣವಾಗುತ್ತಿದ್ದು, ಇನ್ನೇನು ವಿಚಾರ ಬಗೆಹರಿಯುವ ಹಂತಕ್ಕೆ ಬಂದಿದೆ ಎನ್ನುವಾಗಲೇ ಹೊಸ ಹೊಸ ರೂಪದೊಂದಿಗೆ ಮುನ್ನೆಲೆಗೆ ಬರುತ್ತಿದೆ.
ಚಾಮರಾಜಪೇಟೆಯ ಈದ್ಗಾ ಮೈದಾನದ ಮಾಲೀಕತ್ವದ ಸಂಬಂಧ ಕೆಲವು ಹಿಂದುತ್ವ ಸಂಘಟನೆಗಳು ಬಿಬಿಎಂಪಿಯಿಂದ ಸ್ಪಷ್ಟೀಕರಣ ಕೇಳಿದ್ದವು. ಈ ಆಟದ ಮೈದಾನ ಬಿಬಿಎಂಪಿಗೆ ಸೇರಿರುವುದರಿಂದ ಪ್ರಾರ್ಥನೆ ಸಲ್ಲಿಸಲು ನಮಗೂ ಅವಕಾಶ ಕೊಡಿ ಎಂದು ಒತ್ತಾಯಿಸಿದ್ದವು. ಈ ಮಧ್ಯೆ ಬಿಬಿಎಂಪಿ ಆಯುಕ್ತರ ದಿನಕ್ಕೊಂದು ಹೇಳಿಕೆಯಿಂದ ವಿವಾದವೂ ಹೊಸ ತಿರುವು ಪಡೆದುಕೊಂಡಿತು.
ಮಾಲೀಕತ್ವದ ದಾಖಲೆ ಕೊಟ್ಟರೆ ನಾವೇ ಖಾತೆ ಮಾಡಿಕೊಡುವುದಾಗಿ ಹೇಳಿದ್ದ ಬಿಬಿಎಂಪಿ ಆಯುಕ್ತರು ಜನರ ಕೆಂಗಣ್ಣಿಗೆ ಗುರಿಯಾಗಿದ್ದರು. ಆ ಬಳಿಕ ಈ ಮೈದಾನ ಬಿಬಿಎಂಪಿ ಸ್ವತ್ತು ಎಂದು ಸ್ಪಷ್ಟನೆ ಕೊಟ್ಟರು. ಈ ಮಧ್ಯೆ ಬಿಬಿಎಂಪಿ ಆಸ್ತಿ ಎಂದ ಮೇಲೆ ಮೈದಾನದಲ್ಲಿ ಕಾರ್ಯಕ್ರಮಕ್ಕೆ ಎಲ್ಲರಿಗೂ ಅನುಮತಿ ಕೊಡಬೇಕು. ಚಾಮರಾಜಪೇಟೆ ಮೈದಾನ ಸರ್ಕಾರದ ಆಸ್ತಿಯೇ ಹೊರತು ಮುಸಲ್ಮಾನರದ್ದಲ್ಲ ಎಂಬ ಗಲಾಟೆ ಶುರುವಾಯಿತು. ಇತ್ತ ವಕ್ಫ್ ಬೋರ್ಡ್ ನಮ್ಮ ಜಾಗದಲ್ಲಿ ಬೇರೆ ಸಮುದಾಯಗಳ ಆಚರಣೆಗೆ ಅವಕಾಶವಿಲ್ಲವೆಂಬ ಹೇಳಿಕೆ ನೀಡಿದ ಬೆನ್ನಲ್ಲೇ ಹಿಂದುಪರ ಸಂಘಟನೆಗಳು ಹೋರಾಟಕ್ಕೆ ಇಳಿದವು.
ಇದನ್ನೂ ಓದಿ | Chamarajpet Bandh | ಚಾಮರಾಜಪೇಟೆ ಬಂದ್‌ಗೆ ಉತ್ತಮ ಪ್ರತಿಕ್ರಿಯೆ, ಅಂಗಡಿಗಳು ಕ್ಲೋಸ್