ಬೆಂಗಳೂರು: ಅತ್ಯಂತ ಮಹತ್ವದ ತೀರ್ಪೊಂದರಲ್ಲಿ ವಿವಾದಿತ ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ ಅವಕಾಶ ನೀಡಬಹುದು ಎಂದು ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಈ ಮೈದಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರಕಾರದ ವಿವೇಚನೆಗೆ ಬಿಟ್ಟದ್ದು ಎಂದು ಅದು ಹೇಳಿದೆ.
ಚಾಮರಾಜಪೇಟೆ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು, ವರ್ಷದಲ್ಲಿ ಎರಡು ಬಾರಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಮತ್ತು ಉಳಿದಂತೆ ಆಟಕ್ಕೆ ಮಾತ್ರ ಬಳಸಬಹುದು ಎಂಬ ಹೈಕೋರ್ಟ್‌ನ ಏಕ ಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಸಿಜೆ ಅಲೋಕ್ ಅರಾಧೆ ನೇತೃತ್ವದ ಪೀಠ, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರಕಾರದ ವಿವೇಚನೆಗೆ ಬಿಟ್ಟದ್ದು ಎಂದು ಹೇಳಿದೆ.
ಚಾಮರಾಜಪೇಟೆಯ ವಿವಾದಿತ ಮೈದಾನವನ್ನು ಕಂದಾಯ ಆಸ್ತಿ ಎಂದು ಬಿಬಿಎಂಪಿ ಜಂಟಿ ಆಯುಕ್ತರು ಘೋಷಣೆ ಮಾಡಿದ್ದರು. ಈ ಆದೇಶವನ್ನು ಪ್ರಶ್ನಿಸಿ ವಕ್ಫ್ ಮಂಡಳಿ ಹೈಕೋರ್ಟ್ ಮೊರೆ ಹೊಕ್ಕಿತ್ತು. ಗುರುವಾರ ನ್ಯಾ.ಹೇಮಂತ್ ಚಂದನ್‌ಗೌಡರ್ ಅವರ ಪೀಠ ಈ ಅರ್ಜಿಯ ವಿಚಾರಣೆ ನಡೆಸಿತ್ತು. ಮೈದಾನದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳಬೇಕು, ವರ್ಷದಲ್ಲಿ ಎರಡು ಬಾರಿ ಮಾತ್ರ ಪ್ರಾರ್ಥನೆಗೆ ಅವಕಾಶ ನೀಡಬಹುದು. ಉಳಿದಂತೆ ಆಟದ ಮೈದಾನವಾಗಿ ಬಳಸಬಹುದು ಎಂದು ಸ್ಪಷ್ಟಪಡಿಸಿತ್ತು. ಈ ಮಧ್ಯಂತರ ಆದೇಶದ ಪ್ರಕಾರ ಗಣೇಶೋತ್ಸವಕ್ಕೆ ಅವಕಾಶ ಇಲ್ಲ ಎನ್ನುವುದು ಸ್ಪಷ್ಟವಾಗಿತ್ತು. ಇದನ್ನು ಪ್ರಶ್ನಿಸಿ ಶುಕ್ರವಾರ ರಾಜ್ಯ ಸರಕಾರ ಮೇಲ್ಮನವಿ ಸಲ್ಲಿಸಿತ್ತು.
ಸರಕಾರದ ವಾದವೇನು?
ಸರಕಾರದ ಪರವಾಗಿ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವಡಗಿ ಅವರು ಬಿಬಿಎಂಪಿ ಇದು ಕಂದಾಯ ಜಮೀನು ಎಂದು ಘೋಷಿಸಲು ಕಾರಣವಾದ ಅಂಶಗಳನ್ನು ವಿವರಿಸಿದರು.
– ವಕ್ಫ್ ಬೋರ್ಡ್ ಈ ಜಾಗ ತಮಗೆ ಸೇರಿದ್ದು ಎಂದು ಹೇಳಿಕೊಳ್ಳುತ್ತಿದೆ. ಮಾಲೀಕತ್ವದ ದಾಖಲೆ ನೀಡುವಂತೆ ಬಿಬಿಎಂಪಿಗೆ ಮನವಿ ಸಲ್ಲಿಸಿತ್ತು. ಆದರೆ, ಈ ಜಾಗ ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂಬ ಬಗ್ಗೆ ದಾಖಲೆ ಕೊಡಿ ಎಂದು ಕೇಳಲಾಗಿತ್ತು. ನಿಗದಿತ ಸಮಯದೊಳಗೆ ದಾಖಲೆ ಸಲ್ಲಿಕೆ ಆಗದೆ ಇದ್ದುದರಿಂದ ಪಾಲಿಗೆ ತನ್ನಲ್ಲಿದ್ದ ದಾಖಲೆಯ ಆಧಾರದಲ್ಲಿ ಮೈದಾನವು ಕಂದಾಯ ಇಲಾಖೆಗೆ ಸೇರಿದ್ದು ಎಂದು ತೀರ್ಮಾನಿಸಿತು.
– ದಾಖಲೆ ಇಲ್ಲ ಎಂಬ ಕಾರಣಕ್ಕೆ ವಕ್ಫ್ ಮಂಡಳಿಯ ಅರ್ಜಿಯನ್ನು ಬಿಬಿಎಂಪಿ ತಿರಸ್ಕರಿಸಿತ್ತು. ಬಳಿಕ ೧೯೭೧ರ ಗಜೆಟ್ ನೋಟಿಫಿಕೇಶನ್ ಆಧಾರದ ಮೇಲೆ ಜಂಟಿ ಆಕ್ತರು ಇದು ಕಂದಾಯ ಭೂಮಿ ಎಂದು ಆದೇಶಿಸಿದರು.
– ಕಳೆದ 50-60 ವರ್ಷದಲ್ಲಿ ಎಲ್ಲಿಯೂ ಈ ಭೂಮಿ ವಕ್ಫ್ ಬೋರ್ಡ್ ಗೆ ಸಂಬಂಧಿಸಿದ್ದು ಎಂಬ ದಾಖಲೆಗಳಿಲ್ಲ.
– ನಾವು ಎಲ್ಲ ಸಮುದಾಯಗಳನ್ನೂ ಸಮಾನವಾಗಿ ನೋಡಬೇಕಾಗಿದೆ. ಚಾಮರಾಜ ಪೇಟೆ ಮೈದಾನದಲ್ಲಿ ಒಂದು ದಿನದ ಮಟ್ಟಿಗೆ ಗಣೇಶನ ಮೂರ್ತಿ ಕೂರಿಸಲು ಅವಕಾಶ ಕೇಳಿ ಅರ್ಜಿಗಳು ಬರುತ್ತಿವೆ. ಈ ಅರ್ಜಿಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.. ಹೀಗಾಗಿ ಮಧ್ಯಂತರ ಆದೇಶವನ್ನು ರದ್ದು ಮಾಡುವಂತೆ ಮನವಿ ಮಾಡುತ್ತೇನೆ.
ಮಾಲೀಕತ್ವ ನಿರ್ಧಾರ ಏಕಪಕ್ಷೀಯ
ವಕ್ಫ್ ಬೋರ್ಡ್ ಪರ ವಕೀಲ ಜಯಕುಮಾರ್ ಎಸ್. ಪಾಟೀಲ್ ವಾದ
– ಚಾಮರಾಜ ಪೇಟೆಯ ಆಟದ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಘೋಷಣೆ ಮಾಡುವಲ್ಲಿ ಭಾರಿ ಅವಸರ ತೋರಿಸಲಾಯಿತು. ಇದು ಕಂದಾಯ ಇಲಾಖೆಗೆ ಸೇರಿದ ಜಾಗ ಎಂದು ಒಂದು ದಿನ ಪತ್ರಿಕೆಯಲ್ಲಿ ನೋಟಿಸ್ ನೀಡಲಾಯಿತು. ಈ ಬಗ್ಗೆ ಜಂಟಿ ಆಯುಕ್ತರಲ್ಲಿ ಸಮಜಾಯಿಷಿ ಕೇಳಿದಾಗ ಸರಿಯಾದ ಉತ್ತರ ನೀಡಿಲ್ಲ. ಜೂನ್ 20ರಂದು ವಕ್ಫ್ ಬೋರ್ಡ್ ಅರ್ಜಿ ಹಿನ್ನೆಲೆಯಲ್ಲಿ ನೋಟಿಫಿಕೇಷನ್ ಹೊರಡಿಸಲಾಗಿದೆ ಎಂದು ಹೇಳಿಕೊಂಡಿತು. ಅಂತಿಮವಾಗಿ ಮಾಲೀಕತ್ವದ ನಿರ್ಧಾರವನ್ನು ಜಂಟಿ ಆಯುಕ್ತರು ಸ್ವಯಂ ಪ್ರೇರಿತವಾಗಿ ತೆಗೆದುಕೊಂಡಿದ್ದಾರೆ.
– ನಾವು ಸಕಾಲದಲ್ಲಿ ದಾಖಲೆಗಳನ್ನು ನೀಡಿಲ್ಲ ಎಂಬ ಕಾರಣ ನೀಡಿ ಇದು ಕಂದಾಯ ಭೂಮಿ ಎಂದು ಘೋಷಿಸಿದ್ದಾಗಿ ಜಂಟಿ ಆಯುಕ್ತರು ಹೇಳಿದ್ದಾರೆ. ಅಂದರೆ ಕಾಲಮಿತಿ ಮೀರಿದ ಪ್ರಕರಣ ಎಂದು ಜಂಟಿ ಆಯುಕ್ತರು ಹೇಳಿದ್ದಾರೆ.
– ಚಾಮರಾಜ ಪೇಟೆ ಮೈದಾನದ ಮೇಲೆ ಪಾಲಿಕೆಗೆ ಯಾವುದೇ ಮಾಲೀಕತ್ವದ ಅಧಿಕಾರ ಇಲ್ಲ. ಅವರ ಬಳಿಯೂ ಯಾವುದೇ ದಾಖಲೆಗಳು ಇಲ್ಲ. ಈ ಮೈದಾನದ ಜಾಗದಲ್ಲಿ ಸ್ಮಶಾನ ಕೂಡ ಇತ್ತು. ಈ ಮೈದಾನದಲ್ಲಿ ಮಕ್ಕಳು ಆಡುತ್ತಿದ್ದರು. ಮಕ್ಕಳು ಆಟ ಆಡುವ ವಿಚಾರವನ್ನೇ ಬಳಸಿಕೊಂಡು ಪಾಲಿಕೆ ತಮಗೆ ಮಾಲೀಕತ್ವ ಇದೆ ಎಂದು ಹೇಳಿಕೊಳ್ಳುತ್ತಿದೆ.
– ಪಾಲಿಕೆಯೇ ಮೈದಾನದ ಜಾಗ ತಮ್ಮದು ಎಂದು ಆದೇಶ ಮಾಡಿಕೊಂಡಿದೆ. ಈ ಆದೇಶ ಕಾನೂನು ಬದ್ಧವಾಗಿಲ್ಲ ಎಂದು ಅರ್ಜಿ ಸಲ್ಲಿಸಿದ್ದೇವೆ. ಪಾಲಿಕೆ ಅಧಿಕಾರಿಗಳು ಮಾಡಿದ ಆದೇಶವೇ ಅಂತಿಮ ಅಲ್ಲ ಎಂದು ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ.
– ಸುಪ್ರೀಂ ಕೋರ್ಟ್ ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆ ಗೆ ಅವಕಾಶ ನೀಡಿದೆ. ಸುಪ್ರೀಂ ಆದೇಶದ ನಂತರ ಮೈದಾನ ವಕ್ಫ್ ಬೋರ್ಡ್ ಅನುಭೋಗದಲ್ಲಿ ಇದೆ ಎಂದಾಯಿತು. ಸುಪ್ರೀಂ ಕೋರ್ಟ್ ಆದೇಶದ ನಂತರವೂ ಈ ಜಾಗದ ಮಾಲೀಕತ್ವ ದಾಖಲೆಗಳು ಸರ್ಕಾರದ ಬಳಿಯೂ ಇಲ್ಲ.
– ಈ ಜಾಗ 1931 ರಿಂದಲೂ ತಮ್ಮ ವಶದಲ್ಲಿತ್ತು ಅಥವಾ ಅನುಭೋಗದಲ್ಲಿ ಎಂಬ ಬಗ್ಗೆ ಪಾಲಿಕೆ ದಾಖಲೆಗಳಿಲ್ಲ. ಹೀಗಾಗಿ ಏಕಸದಸ್ಯ ಪೀಠ ನೀಡಿದ ಮಧ್ಯಂತರ ಆದೇಶ ಸರಿಯಿದೆ.
– ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯನ್ನು ಸರ್ಕಾರ, ಪಾಲಿಕೆ ಆಚರಿಸಬಹುದು ಎಂದು ಕೋರ್ಟ್ ಹೇಳಿದೆ. ಆದರೆ, ವಕ್ಫ್ ಬೋರ್ಡ್ ಸಹಯೋಗದಲ್ಲಿ ಆಚರಣೆಗೆ ಅವಕಾಶ ನೀಡಬೇಕಿತ್ತು ಎನ್ನುವುದು ನಮ್ಮ ನಿಲುವು.
– ಬಿಬಿಎಂಪಿ ಈ ಜಾಗದಲ್ಲಿ ಯಾವುದೇ ಕಟ್ಟಡ ಇಲ್ಲವೇ ಅಭಿವೃದ್ಧಿ ಕಾರ್ಯ ಕೈಗೊಳ್ಳದಂತೆಯೂ ಆದೇಶ ನೀಡುವಂತೆ ಮನವಿ.
ಇಬ್ಬರಿಗೂ ಅನುಕೂಲವಾಗುವ ತೀರ್ಪು ಕೊಡಿ
ಈ ನಡುವೆ, ಎರಡನೇ ಬಾರಿ ಮನವಿ ಮಾಡಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ಇಲ್ಲಿ ವರ್ಷದಲ್ಲಿ ಎರಡು ದಿನ ಮಾತ್ರ ಪ್ರಾರ್ಥನೆ ನಡೆಯುತ್ತದೆ. ಉಳಿದಂತೆ ಮೈದಾನ ಖಾಲಿ ಇರುತ್ತದೆ. ಹೀಗಾಗಿ ಎರಡೂ ಪಕ್ಷಗಳ ಹಿತದೃಷ್ಟಿಯಿಂದ ಆದೇಶ ನೀಡುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು ಎ.ಜಿ. ನಾವದಗಿ..