ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವುದು ಸರಕಾರದ ವಿವೇಚನೆಗೆ ಬಿಟ್ಟದ್ದು ಎಂದು ರಾಜ್ಯ ಹೈಕೋರ್ಟ್ ಹೇಳಿದ ಬೆನ್ನಿಗೇ ಇದೀಗ ಮೂರು ದಿನಗಳ ಗಣೇಶೋತ್ಸವವನ್ನು ಆಚರಿಸಲು ತಾನು ರೆಡಿ ಎಂದು ಚಾಮರಾಜ ಪೇಟೆ ನಾಗರಿಕ ವೇದಿಕೆ ಒಕ್ಕೂಟ ಘೋಷಿಸಿದೆ.
ಮೈದಾನದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಮತ್ತು ವರ್ಷದಲ್ಲಿ ಎರಡು ಬಾರಿ ಪ್ರಾರ್ಥನೆಗೆ ಮಾತ್ರ ಅವಕಾಶ, ಉಳಿದಂತೆ ಆಟಕ್ಕೆ ಬಳಸಬಹುದು ಎಂಬ ಹೈಕೋರ್ಟ್‌ನ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸರಕಾರ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ದ್ವಿಸದಸ್ಯ ಪೀಠ, ಸರಕಾರದ ವಿವೇಚನೆಗೆ ಬಿಟ್ಟಿದ್ದರಿಂದ ಇಲ್ಲಿ ಗಣೇಶೋತ್ಸವ ಆಚರಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದಂತಾಗಿದೆ.
ತೀರ್ಪನ್ನು ಸ್ವಾಗತಿಸಿರುವ ಚಾಮರಾಜಪೇಟೆ ನಾಗರಿಕ ಒಕ್ಕೂಟ ವೇದಿಕೆಯ ಅಧ್ಯಕ್ಷ ರಾಮೇಗೌಡ ಅವರು, ನಮ್ಮ ಒಕ್ಕೂಟದಿಂದ ಸ್ವಾತಂತ್ರ್ಯ ದಿನಾಚರಣೆ ಮತ್ತು ಗಣೇಶ ಹಬ್ಬ ಆಚರಣೆಗೆ ಅರ್ಜಿ ಕೊಟ್ಟಿದ್ದೆವು. ಸ್ವಾತಂತ್ರ್ಯ ದಿನಾಚರಣೆ ಅರಾಮವಾಗಿ ನಡೆಯಿತು. ಹೈಕೋರ್ಟ್‌ನ ಮಧ್ಯಂತರ ತೀರ್ಪಿನಿಂದ ನಿನ್ನೆ ಸ್ವಲ್ಪ ಮಟ್ಟಿಗೆ ಆತಂಕ ಮೂಡಿತ್ತು. ಆದರೆ, ಮೇಲ್ಮನವಿಗೆ ಅವಕಾಶವಿದೆ ಎಂಬ ಭರವಸೆ ಇತ್ತು. ನಮ್ಮ ನಂಬಿಕೆಗೆ ಬಲ ಸಿಕ್ಕಿದೆ ಎಂದು ಹೇಳಿದ್ದಾರೆ.
ವಕ್ಫ್ ಬೋರ್ಡ್ ಅಧ್ಯಕ್ಷರ ವಜಾಕ್ಕೆ ಅಗ್ರಹ
ಈ ನಡುವೆ, ಸರಕಾರದ ಅಧೀನದಲ್ಲಿರುವ ವಕ್ಫ್ ಬೋರ್ಡ್ ಅಧ್ಯಕ್ಷರೇ ಸರಕಾರದ ನಿಲುವಿನ ವಿರುದ್ದ ಕೋರ್ಟ್‌ಗೆ ಹೋಗಿರುವುದರಿಂದ ಅವರನ್ನು ಹುದ್ದೆಯಿಂದ ವಜಾ ಮಾಡಬೇಕು ಎಂದು ರಾಮೇಗೌಡ ಆಗ್ರಹಿಸಿದರು.
ಮೂರು ದಿನಗಳ ಆಚರಣೆಗೆ ಪ್ಲ್ಯಾನ್
ಮೈದಾನದಲ್ಲಿ ಮೂರು ದಿನಗಳ ಕಾಲ ಗಣೇಶ ಹಬ್ಬ ಆಚರಿಸಲು ಪ್ಲ್ಯಾನ್ ಮಾಡಿದ್ದೇವೆ. ಇದಕ್ಕಾಗಿ ಹೊಸದಾಗಿ ಅನುಮತಿ ಕೇಳಿ ಮನವಿ ಮಾಡುತ್ತೇವೆ. ಮೊದಲ ದಿನ ಪ್ರತಿಷ್ಠಾಪನೆ, ಎರಡನೇ ದಿನ ಹೋಮ, ವಿಶೇಷ ಪೂಜೆ ನಡೆಸುವುದು, ಮೂರನೇ ದಿನ ರಾಜಬೀದಿಯಲ್ಲಿ ಮೆರವಣಿಗೆ ನಡೆಸುವುದು ನಮ್ಮ ಪ್ಲ್ಯಾನ್. ರಾಜ್ಯ ಸರಕಾರ ಇದಕ್ಕೆ ಅನುಮತಿ ನೀಡುವುದು ಖಚಿತವಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು, ಸಂಸದರಾದ ಪಿ.ಸಿ. ಮೋಹನ್ ಅವರು ಒಕ್ಕೂಟಕ್ಕೆ ಬೆಂಬಲವಾಗಿ ನಿಂತಿದ್ದಾರೆ ಎಂದು ರಾಮೇ ಗೌಡ ಹೇಳಿದರು.
ಇದನ್ನೂ ಓದಿ| ಚಾಮರಾಜ ಪೇಟೆ ಮೈದಾನದಲ್ಲಿ ಗಣೇಶ ಹಬ್ಬಕ್ಕೆ ಗ್ರೀನ್ ಸಿಗ್ನಲ್: ಸರಕಾರದ ವಿವೇಚನೆಗೆ ಬಿಟ್ಟದ್ದು ಎಂದ ಹೈಕೋರ್ಟ್