ಹುಬ್ಬಳ್ಳಿ: ಸರಳ ವಾಸ್ತು (Sarla Vastu) ಖ್ಯಾತಿಯ ಚಂದ್ರಶೇಖರ ಗುರೂಜಿ ಅವರ (Chandrashekhar Guruji) ಎದೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಹಂತಕರನ್ನು ನಗರದ ವಿದ್ಯಾನಗರ ಪೊಲೀಸರು ಸೆರೆ ಹಿಡಿದಿದ್ದಾರೆ.
ಮಹಾಂತೇಶ್ ಶಿರೂರು ಹಾಗೂ ಮಂಜುನಾಥ್ ಎನ್ನುವ ಆರೋಪಿಗಳು ಗುರೂಜಿಯನ್ನು ಕೊಲೆಗೈದಿದ್ದಾರೆ. ಕೊಲೆ ನಡೆದ ಕೇವಲ ನಾಲ್ಕು ಗಂಟೆಯಲ್ಲೇ ಹಂತಕರನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಹುಬ್ಬಳ್ಳಿಯಲ್ಲಿ ಕೊಲೆ ಮಾಡಿ ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಸೆರೆಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ನಿಗೂಢ ಸ್ಥಳದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ | ಸರಳ ವಾಸ್ತು ಖ್ಯಾತಿಯ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಹತ್ಯೆ
ಇಲ್ಲಿಯ ಉಣಕಲ್ ಕೆರೆ ಬಳಿ ಇರುವ ಪ್ರೆಸಿಡೆಂಟ್ ಹೋಟೆಲ್‌ನಲ್ಲಿ ಈ ಘಟನೆ ನಡೆದಿದ್ದು, ಗುರೂಜಿ ತಮ್ಮನ್ನು ಭೇಟಿಯಾಗಲು ಬಂದಿದ್ದ ಭಕ್ತರ ವೇಷದಲ್ಲಿದ್ದ ಹಂತಕರನ್ನು ನೋಡಲು ರಿಸೆಪ್ಷನ್‌ಗೆ ಬಂದಾಗ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಅವರು ಸೋಫಾದ ಮೇಲೆ ಕೂರುತ್ತಿದ್ದಂತೆಯೇ ಅವರ ಕಾಲ ಬಳಿ ಬಗ್ಗಿ ಒಬ್ಬ ನಮಸ್ಕರಿಸುತ್ತಾನೆ. ಪಕ್ಕದಲ್ಲಿಯೇ ಚಾಕುವನ್ನು ಪೇಪರ್‌ನಲ್ಲಿ ಮುಚ್ಚಿಟ್ಟುಕೊಂಡಿದ್ದ ಮತ್ತೊಬ್ಬ ಹಂತಕ ಗುರೂಜಿಯ ಎದೆಗೇ ಬಲವಾಗಿ ಚಾಕುವಿನಿಂದ ಇರಿಯುತ್ತಾನೆ. ಅವರು ತಪ್ಪಿಸಿಕೊಳ್ಳಲು ಕಿರುಚುತ್ತಾ ಎದ್ದು ನಿಂತರೂ ಬಿಡದ ಹಂತಕರಿಬ್ಬರೂ ಸೇರಿ ಜಿದ್ದಿಗೆ ಬಿದ್ದವರಂತೆ ಚಾಕುವಿನಿಂದ ಇರಿಯುತ್ತಲೇ ಇರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಗುರೂಜಿ ನೆಲಕ್ಕುರುಳಿದರೂ ಬಿಡದೆ ಅವರನ್ನು ನಿರಂತರವಾಗಿ ಇರಿಯಲಾಗಿದೆ. ಕೇವಲ ೪೦ ಸೆಕೆಂಡುಗಳಲ್ಲಿ ಸುಮಾರು ೬೦ಕ್ಕೂ ಹೆಚ್ಚು ಬಾರಿ ಹಂತಕರು ಇರಿದಿದ್ದಾರೆ. ಹಂತಕರಲ್ಲಿ ಒಬ್ಬ ಮೊದಲಿಗೆ ಓಡಿ ಹೋಗಿದ್ದರೆ, ಇನ್ನೊಬ್ಬ ಇನ್ನಷ್ಟು ಬಾರಿ ಇರಿದು ಅಲ್ಲಿಂದ ಕಾಲ್ಕಿತ್ತಿದ್ದಾನೆ. ಇಬ್ಬರೂ ಹೋಟೆಲ್‌ನಿಂದ ಹೊರ ಹೋಗಿರುವುದು ಕೂಡ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.
ಹಂತಕರು ಹೋಟೆಲ್‌ನ ರಿಸೆಪ್ಷನ್‌ನಲ್ಲಿ ಬಹಳ ಹೊತ್ತಿನಿಂದ ಕಾಯುತ್ತಿದ್ದರು ಎನ್ನಲಾಗಿದೆ. ವಾಸ್ತು ಕೇಳುವ ನೆಪದಲ್ಲಿ ಅವರು ಗುರೂಜಿಯವರನ್ನು ಭೇಟಿಯಾಗಿದ್ದರು.
ಇದನ್ನೂ ಓದಿ | ಮೊದಲು ಚಂದ್ರಶೇಖರ್ ಗುರೂಜಿ ಕಾಲಿಗೆ ಬಿದ್ದರು, ನಂತರ 60 ಬಾರಿ ಇರಿದು ಕೊಂದರು!