Site icon Vistara News

ʻಸರಳ ವಾಸ್ತುʼ ಚಂದ್ರಶೇಖರ ಗುರೂಜಿ ದೇಹಕ್ಕೆ 42 ಇರಿತ, ಕುತ್ತಿಗೆಯಲ್ಲೂ ಗಾಯ

sarala vasthu

ಹುಬ್ಬಳ್ಳಿ: ಹೋಟೆಲ್‌ನಲ್ಲಿ ಹಾಡಹಗಲೇ ಹತ್ಯೆಗೀಡಾಗಿದ್ದ ವಾಸ್ತು ಶಾಸ್ತ್ರಜ್ಞ ಚಂದ್ರಶೇಖರ ಗುರೂಜಿ ಅವರಿಗೆ 42 ಕಡೆ ಇರಿದಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಕಂಡು ಬಂದಿದೆ. ಕಿಮ್ಸ್‌ ವೈದ್ಯರು ಈ ಕುರಿತು ಮಾಹಿತಿ ನೀಡಿದ್ದಾರೆ.

ಉಣಕಲ್‌ ಕೆರೆ ಬಳಿ ಇರುವ ಪ್ರೆಸಿಡೆಂಟ್‌ ಹೋಟೆಲ್‌ನಲ್ಲಿ ಗುರೂಜಿ ಹತ್ಯೆ ನಡೆದಿತ್ತು. ಚಂದ್ರಶೇಖರ ಗುರೂಜಿ ಅವರನ್ನು ಭೇಟಿಯಾಗಲು ಬಂದ ಮಹಾಂತೇಶ್‌ ಹಾಗೂ ಮಂಜುನಾಥ್‌ ಭೀಕರವಾಗಿ ಕೊಲೆ ಮಾಡಿದ್ದರು. ಗುರೂಜಿ ನೆಲಕ್ಕುರುಳಿದರೂ ಬಿಡದೆ ಅವರನ್ನು ನಿರಂತರವಾಗಿ ಇರಿಯಲಾಗಿತ್ತು. ಕೇವಲ ೪೦ ಸೆಕೆಂಡುಗಳಲ್ಲಿ ಹಂತಕರು ನಿರಂತರವಾಗಿ ಇರಿದಿದ್ದರು. ಸುಮಾರು ಅರವತ್ತು ಕಡೆಗಳಲ್ಲಿ ಇರಿದಿರಬಹುದು ಎಂದು ಅಂದಾಜಿಸಲಾಗಿತ್ತು. ಇದೀಗ ಮರಣೋತ್ತರ ಪರೀಕ್ಷೆ ನಡೆಸಿರುವ ಕಿಮ್ಸ್‌ ವೈದ್ಯರು ಈ ಬಗ್ಗೆ ನಿಖರ ಮಾಹಿತಿ ನೀಡಿದ್ದಾರೆ.

ಎರಡು ಬಾರಿ ಕುತ್ತಿಗೆಗೆ ಇರಿದಿರುವುದೂ ಸೇರಿದಂತೆ ದೇಹದಲ್ಲಿ ಒಟ್ಟು 42 ಕಡೆ ಇರಿದಿರುವ ಗುರುತು ಕಂಡು ಬಂದಿದೆ. ತೀವ್ರ ರಕ್ತಸ್ರಾವದಿಂದ ಚಂದ್ರಶೇಖರ ಗುರೂಜಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿ ಕುಟುಂಬದವರಿಗೆ ದೇಹವನ್ನು ಹಸ್ತಾಂತರಿಸಲಾಗಿದೆ.

ಸಂಬಂಧಿಕರ ಆಕ್ರಂದನ

ಚಂದ್ರಶೇಖರ ಗುರೂಜಿ ಅವರ ಅಂತಿಮ ಸಂಸ್ಕಾರವನ್ನು ಸುಳ್ಳ ಬಳಿಯಲ್ಲಿರುವ ಗುರೂಜಿ ಅವರ ಜಮೀನಿನಲ್ಲಿ ನಡೆಸಲು ಕುಟುಂಬದವರು ತೀರ್ಮಾನಿಸಿದ್ದಾರೆ. ಪಾರ್ಥಿವ ಶರೀರವನ್ನು ಕಿಮ್ಸ್‌ ಆಸ್ಪತ್ರೆಯಿಂದ ಸುಳ್ಳವರೆಗೆ ಮೆರವಣಿಗೆ ಮೂಲಕ ಕೊಂಡೊಯ್ಯಲಾಗುವುದು. ಬೆಳಗ್ಗಿನಿಂದಲೇ ಕಿಮ್ಸ್‌ ಆಸ್ಪತ್ರೆ ಸಮೀಪ ಅನೇಕರು ಜಮಾಯಿಸಿದ್ದರು. ಆಸ್ಪತ್ರೆಯಿಂದ ದೇಹವನ್ನು ಹೊರತರುತ್ತಿದ್ದಂತೆಯೇ ಸಂಬಂಧಿಕರ ಹಾಗೂ ಚಂದ್ರಶೇಖರ ಗುರೂಜಿ ಭಕ್ತರ ಆಕ್ರಂದನ ಮುಗಿಲುಮುಟ್ಟಿತ್ತು.

ಲಕ್ಷ್ಮೀ ಹೆಬ್ಬಾಳ್ಕರ್‌ ಖಂಡನೆ

ಬೆಳಗಾವಿ: ಚಂದ್ರಶೇಖರ ಗುರೂಜಿ ಅವರ ಹತ್ಯೆ ಕುರಿತು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಆಘಾತ ವ್ಯಕ್ತಪಡಿಸಿದ್ದಾರೆ. ಚಂದ್ರಶೇಖರ ಗುರೂಜಿ ಹತ್ಯೆಯನ್ನು ಖಂಡಿಸುತ್ತೇನೆ. ಗುರೂಜಿ ಹತ್ಯೆ ಆಶ್ಚರ್ಯದ ಜತೆಗೆ ದಿಗ್ಭ್ರಮೆ ಮೂಡಿಸಿದೆ, ಹಂತಕರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಆಗ್ರಹಿಸುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ | ಗ್ರಾಹಕರ ಹಣ ಎಗರಿಸಿದ, ಗ್ರಾಹಕ ನ್ಯಾಯಾಲಯಕ್ಕೆ ಹೋದ: ಚಂದ್ರಶೇಖರ ಗುರೂಜಿ ಹತ್ಯೆಗೆ ಹೊಸ ಟ್ವಿಸ್ಟ್‌

Exit mobile version