Site icon Vistara News

Chandrayaan 3 : 14 ದಿನಗಳ ಬಳಿಕ ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ಕತೆ ಏನು?

ISRO Scientist Dr BR Guruprasad and Hariprakash konemane and Chandrayaan 3

ಬೆಂಗಳೂರು: ಚಂದ್ರಯಾನ 3 (Chandrayaan 3) ರ ಭಾಗವಾಗಿ ಚಂದ್ರನ ಮೇಲೆ ಆ.23ರಂದು ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ಇಳಿದು ಚಲನೆ ಶುರು ಮಾಡಿದ್ದು, 14 ದಿನಗಳ ಕಾಲ ಕಾರ್ಯನಿರ್ವಹಣೆ ಮಾಡಲಿದೆ. ಇದಾದ ಬಳಿಕ ಅದು ನಿಷ್ಕ್ರಿಯವಾಗಲಿದೆ. ಆದರೆ, ಆ ನಂತರ ಇದು ಒಂದು ವೇಳೆ ಅದು ಸಕ್ರಿಯಗೊಂಡರೆ ಮತ್ತಷ್ಟು ಮಾಹಿತಿಯನ್ನು ಸಂಗ್ರಹ ಮಾಡಬಹುದಾಗಿದೆ ಎಂದು ಹಿರಿಯ ವಿಜ್ಞಾನಿ ಡಾ. ಬಿ.ಆರ್.‌ ಗುರುಪ್ರಸಾದ್ (Dr BR Guruprasad) ಹೇಳಿದರು.

ವಿಸ್ತಾರ ನ್ಯೂಸ್‌ ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ (Hariprakash Konemane)ಅವರು ನಡೆಸಿಕೊಡುವ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ವಿಜ್ಞಾನಿ ಡಾ. ಬಿ.ಆರ್.‌ ಗುರುಪ್ರಸಾದ್, ಚಂದ್ರನ ಮೇಲೆ ಆ.23ರಂದು ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ಇಳಿದು ಚಲನೆ ಶುರು ಮಾಡಿದೆ. ಆ ನಂತರದ 14 ದಿನ ಮಹತ್ವದ್ದಾಗುತ್ತದೆ, ಈ 14 ದಿನಗಳ ಬಳಿಕ ವಿಕ್ರಮ್‌ ಲ್ಯಾಂಡರ್‌ ಮತ್ತು ಪ್ರಜ್ಞಾನ್‌ ರೋವರ್‌ ಕತೆ ಏನಾಗುತ್ತದೆ? ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಆದರೆ, ಅದನ್ನು ನಿರ್ಮಾಣ ಮಾಡಿರುವುದು ಕನಿಷ್ಠ 14 ದಿನಗಳ ಕಾಲ ಕಾರ್ಯನಿರ್ವಹಣೆ ಮಾಡಲಿ ಎಂಬುದಾಗಿದೆ. ಅದಾದ ಮೇಲೆ 14 ದಿನಗಳ ಕಾಲ ಕತ್ತಲೆ ಇದ್ದರೆ ಆ ಒಂದು ಉಷ್ಣತೆಯಲ್ಲಿ ಯಾವುದೇ ಬದುಕುಳಿಯಲು ಸಾಧ್ಯವಿಲ್ಲ. ಆದರೆ, ಬೇರೊಂದು ಬಗೆಯ ಬೈಜಿಕ ಮೂಲಗಳಿದ್ದರೆ (ಬ್ಯಾಟರಿ, ನ್ಯೂಕ್ಲಿಯರ್‌ ಇತ್ಯಾದಿ) ಅದನ್ನು ಎಬ್ಬಿಸಬಹುದು. ಇದು ವಿಜ್ಞಾನಿಗಳಿಗೆ ಇನ್ನೂ ತೀರ್ಮಾನ ಆಗಿಲ್ಲ. ಆಮೇಲೆ ಅದನ್ನು ಎಬ್ಬಿಸಲು ಪ್ರಯತ್ನ ಮಾಡಲಾಗುವುದು. ಒಂದು ವೇಳೆ ಎದ್ದರೆ ಮತ್ತಷ್ಟು ಮಾಹಿತಿಯನ್ನು ಸಂಗ್ರಹ ಮಾಡಬಹುದಾಗಿದೆ ಎಂದು ಡಾ. ಬಿ.ಆರ್.‌ ಗುರುಪ್ರಸಾದ್ ತಿಳಿಸಿದರು.

ಚಂದ್ರನ ದಕ್ಷಿಣ ಧ್ರುವ ತಲುಪಿದ ಜಗತ್ತಿನ ಮೊದಲ ರಾಷ್ಟ್ರ ಭಾರತವಾಗಿದೆ. ಇದಕ್ಕೆ ಹಲವು ವಿಶೇಷತೆಗಳು ಇವೆ. ಅಪೊಲೊ 11ರ ಬಳಿಕ ಇನ್ನೂ ಆರು ನೌಕೆಗಳು ಹೋದವು. ಒಟ್ಟು ಆರು ನೌಕೆಗಳು ಚಂದ್ರನ ಮೇಲೆ ಇಳಿದಿವೆ. ಇದಲ್ಲದೆ, ಚೀನಾ ಮತ್ತು ರಷ್ಯಾದ ನೌಕೆಗಳೂ ಇಳಿದಿವೆ. ಆದರೆ, ಇವೆಲ್ಲವೂ ಇಳಿದಿರುವುದು ಚಂದ್ರನ ಸಮಭಾಜಕ ವೃತ್ತದಲ್ಲಾಗಿದೆ. ಆದರೆ, ಈ ದಕ್ಷಿಣ ದ್ರುವ ಪ್ರದೇಶದಲ್ಲಿ ಬೆಟ್ಟ, ಗುಡ್ಡಗಳು ಬಹಳ ಜಾಸ್ತಿ ಇವೆ. ಇಲ್ಲಿ ಇಳಿಯುವುದು ಅಷ್ಟು ಸುಲಭ ಅಲ್ಲ. ಭಾರತ ಈ ಸಾಧನೆಯನ್ನು ಮಾಡಿದೆ. ಇನ್ನೊಂದು ಸಮಸ್ಯೆಯೆಂದರೆ ಎತ್ತರದ ಪ್ರದೇಶಗಳ ಕೆಳಗೆ ಇರುವ ಕೆಲವು ಗುಂಡಿ ಪ್ರದೇಶಗಳಿಗೆ ಸೂರ್ಯನ ಕಿರಣಗಳು ಬೀಳುವುದಿಲ್ಲ. ಅವು ಹಿಮದಿಂದ ಆವೃತವಾಗಿರುವ ಸಾಧ್ಯತೆ ಹೆಚ್ಚು ಇರುತ್ತದೆ. ಜತೆಗೆ ಈ ಸೌರವ್ಯೂಹದ ವಿಕಾಸವಾದದ ಕುರುಹನ್ನು ಸಾರುವಂತಹ ಕೆಲವು ವಿಚಾರಗಳನ್ನು ಅಲ್ಲಿ ಹೋದರೆ ಸಾಧಿಸಬಹುದು. ಇದಲ್ಲದೆ, ಕೆಲವು ಖನಿಜಗಳು ಸಹ ದೊರಕಬಹುದು. ಹೀಗೆ ಅನೇಕ ಕಾರಣಗಳು ಇವೆ ಎಂದು ಅಲ್ಲಿನ ಮಹತ್ವದ ಬಗ್ಗೆ ಡಾ. ಬಿ.ಆರ್.‌ ಗುರುಪ್ರಸಾದ್ ವಿವರಿಸಿದರು.

ಇದನ್ನೂ ಓದಿ: Chandrayaan 3 : ರಷ್ಯಾ ಚಂದ್ರಯಾನ ಮಿಷನ್‌ ಸೋಲಿಗೇನು ಕಾರಣ? ವಿಜ್ಞಾನಿ ಗುರುಪ್ರಸಾದ್ ಹೇಳಿದ ಕಾರಣಗಳಿವು!

ಜನಸಾಮಾನ್ಯರಿಗೂ ಇದರ ಪ್ರಯೋಜನ ಆಗಲಿದೆ, ಆದರೆ!

ಈ ಚಂದ್ರಯಾನದ ಪ್ರಯೋಜನವು ಜನಸಾಮಾನ್ಯರಿಗೆ ತಕ್ಷಣವೇ ಸಿಗುತ್ತದೆ ಎಂದಲ್ಲ. ಆದರೆ, ಮುಂದಿನ ದಿನಗಳಲ್ಲಿ ಇದರಿಂದ ತಿಳಿಯುವ ಸಂಗತಿಗಳು ಅನೇಕ ಪ್ರಯೋಜನವನ್ನು ತಂದು ಕೊಡುತ್ತದೆ. ಮುಂದಿನ ಪೀಳಿಗೆ ಚಂದ್ರಯಾನ ಕೈಗೊಳ್ಳಲು ಹಾಗೂ ಅಲ್ಲಿನ ಸಂಪನ್ಮೂಲಗಳನ್ನು ಬಳಕೆ ಮಾಡಲು ಪೂರಕ ವಾತಾವರಣವನ್ನು ಇದು ಕಲ್ಪಿಸುತ್ತದೆ ಎಂದು ಡಾ. ಬಿ.ಆರ್.‌ ಗುರುಪ್ರಸಾದ್ ಹೇಳಿದರು.

Exit mobile version