ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ್ (Chandru Death) ಅವರ ಅಂತ್ಯಸಂಸ್ಕಾರವು ಜಂಗಮ ಸಂಪ್ರದಾಯದಂತೆ ನೆರವೇರಿತು. ಈ ಮೂಲಕ ಚಂದ್ರಶೇಖರ್ ಮಣ್ಣಲ್ಲಿ ಮಣ್ಣಾದರು.
ಅಂತಿಮ ಯಾತ್ರೆ ಮೆರವಣಿಗೆಯು ಕುಂದೂರಿನಲ್ಲಿರುವ ರೇಣುಕಾಚಾರ್ಯ ಅವರ ತೋಟಕ್ಕೆ ಪ್ರವೇಶಿಸುತ್ತಿದ್ದಂತೆ ಧಾರ್ಮಿಕ ವಿಧಿವಿಧಾನಗಳನ್ನು ಆರಂಭಿಸಲಾಯಿತು. ಕ್ರಿಯಾಸಮಾಧಿ ಅಂತಿಮ ವಿಧಿ ವಿಧಾನಕ್ಕೆ ಚಾಲನೆ ನೀಡಿ ಪೂಜೆಗಳನ್ನು ನಡೆಸಲಾಯಿತು. ಹೊನ್ನಾಳಿಯ ಹಿರೇಕಲ್ಮಠದ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಜಂಟ್ಲಿ ವಿಶ್ವೇಶ್ವರ ಮಹಾಸ್ವಾಮಿ, ಶ್ರೀ ಗಿರಿಸಿದ್ದೇಶ್ವರ ಮಹಾಸ್ವಾಮಿಗಳು ಹೊಟ್ಯಾಪುರ, ಮುಷ್ಟೂರಿನ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ಪೂಜೆ ನೆರವೇರಿದೆ.
ಮೊದಲು ಎಕ್ಕೆ ಧಾರೆ ಕಾರ್ಯ ನೆರವೇರಿಸುವ ಮೂಲಕ ಚಂದ್ರಶೇಖರ್ ಅವರಿಗೆ ವಿವಾಹ ಕಾರ್ಯದ ಶಾಸ್ತ್ರವನ್ನು ಮಾಡಲಾಯಿತು. ವೀರಶೈವ ಲಿಂಗಾಯತ ಸಂಪ್ರದಾಯ ಪ್ರಕಾರ ಒಂದು ಗಂಟೆಗಳ ಕಾಲ ನಿರಂತರ ಪೂಜೆಯನ್ನು ನಡೆಸಲಾಯಿತು. ಬಿಲ್ವಪತ್ರೆ, ವಿಭೂತಿ, ಉಪ್ಪು, ಅರಿಶಿನ, ಕುಂಕುಮ ಬಳಸಿ ಕೆಲವು ಕ್ರಿಯೆಗಳನ್ನು ನಡೆಸಲಾಯಿತು. ಜಂಗಮ ಸಮುದಾಯದಲ್ಲಿ ಕ್ರಿಯಾಸಮಾಧಿಯಲ್ಲಿ ಕೂರಿಸಿ ಅಂತ್ಯಕ್ರಿಯೆ ಮಾಡಲಾಗುತ್ತದೆಯಾದರೂ ಚಂದ್ರಶೇಖರ್ ಮೃತದೇಹ ಕೊಳೆತಿರುವ ಕಾರಣ ವಿಭೂತಿ ಮೇಲೆ ಮಲಗಿಸಿ ಕ್ರಿಯಾಸಮಾಧಿ ನೆರವೇರಿಸಲಾಯಿತು. ಇದೇ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ಭಾಗಿಯಾಗಿದ್ದಾರೆ.
ಇದನ್ನೂ ಓದಿ | Missing Case | ಕುಂದೂರಿನಿಂದ ಹೊನ್ನಾಳಿ ಪಟ್ಟಣದವರೆಗೆ 20 ಕಿ.ಮೀ. ನಡೆದ ಅಂತಿಮ ಯಾತ್ರೆ
ಯಾವುದನ್ನೂ ಬಿಡೋದಿಲ್ಲ, ಯಾರನ್ನೂ ಬಿಡೋದಿಲ್ಲ- ಆರಗ ಜ್ಞಾನೇಂದ್ರ
ಚಂದ್ರಶೇಖರ್ ಸಾವಿನ ಪ್ರಕರಣದಲ್ಲಿ ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಯಾವುದನ್ನೂ ಬಿಡುವುದಿಲ್ಲ, ಯಾರನ್ನೂ ಬಿಡುವುದಿಲ್ಲ. ಭಯಭೀತಿ ಪಡಿಸುತ್ತೇವೆ ಎಂದುಕೊಂಡಿದ್ದರೆ ಅಂಥವರನ್ನು ಬಿಡುವ ಪ್ರಶ್ನೆಯೇ ಇಲ್ಲ. ತನಿಖೆಯಿಂದ ಎಲ್ಲ ಸತ್ಯಾಸತ್ಯತೆ ಗೊತ್ತಾಗುತ್ತದೆ. ಗೃಹ ಸಚಿವನಾಗಿ ಏನೇನೋ ಹೇಳಿಕೆ ನೀಡಲು ಆಗುವುದಿಲ್ಲ. ದಾವಣಗೆರೆ ಪೊಲೀಸರು ಸಶಕ್ತರಿದ್ದಾರೆ. ಅವರೇ ಉತ್ತಮ ತನಿಖೆ ನಡೆಸುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ವಿಶೇಷ ತಂಡ ತನಿಖೆ ನಡೆಸುತ್ತಿದ್ದು, ಸಾವಿನ ಸತ್ಯ ಹೊರ ಬರಬೇಕಿದೆ. ಘಟನೆ ನೋಡಿದಾಗ ಸಹಜವಾಗಿ ಅನುಮಾನ ಬರುತ್ತದೆ. ವಿಡಿಯೊ ಚಿತ್ರೀಕರಣ ಮಾಡಲಾಗಿದೆ. ಕಳೆದುಕೊಂಡವರನ್ನು ಬದುಕಿಸಲು ಆಗುವುದಿಲ್ಲ. ಆದರೆ, ತನಿಖೆಯಿಂದ ಸತ್ಯ ತಿಳಿಯಲಿದೆ. ಅದರಿಂದ ಅವರ ಕುಟುಂಬಕ್ಕೆ ನೆಮ್ಮದಿ ಸಿಗಲಿದೆ. ಶಾಸಕ ರೇಣುಕಾಚಾರ್ಯ ಅವರಿಗೆ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆ ಕರೆ ಎಲ್ಲಿಂದ ಬಂದಿತ್ತು ಎಂದು ಪರಿಶೀಲನೆ ಮಾಡಲಾಗುತ್ತಿದೆ. ಬೆದರಿಕೆ ತಂತ್ರ ಮಾಡಿದವರನ್ನು ಬಿಡುವುದಿಲ್ಲ ಎಂದು ಗೃಹ ಸಚಿವರು ಹೇಳಿದರು.
ಮೊಮ್ಮಗ ಅಜ್ಜಿಯ ಮಡಿಲಿನಲ್ಲಿ ಮಲಗಿದ್ದಾನೆ- ರೇಣುಕಾಚಾರ್ಯ
ಸಹೋದರನ ಮಗನ ಸಾವಿನಿಂದ ತೀವ್ರ ದುಃಖದಲ್ಲಿರುವ ಶಾಸಕ ರೇಣುಕಾಚಾರ್ಯ, ನೋಡಿ ನನ್ನ ಮಗ ಸಿಕ್ಕಿದ್ದಾನೆ. ಆದರೆ, ಶವವಾಗಿ ಬಂದ. ಮೊಮ್ಮಗ ಈಗ ಅಜ್ಜಿಯ ಮಡಿಲಿನಲ್ಲಿ ಮಲಗಿದ್ದಾನೆ. ಗೃಹ ಸಚಿವರು ಸಂಪೂರ್ಣ ತನಿಖೆ ನಡೆಸಿ ಸತ್ಯಾಂಶವನ್ನು ಹೊರಗೆ ತರುವುದಾಗಿ ಹೇಳಿದ್ದಾರೆ. ಕ್ಷೇತ್ರದ ಜನ ನನಗೆ ತೋರಿದ ಪ್ರೀತಿಯನ್ನೇ ಇಂದು ತೋರಿದ್ದಾರೆ. ಸಂಪೂರ್ಣ ಸಹಕಾರ ನೀಡಿದ ಎಲ್ಲರಿಗೂ ನನ್ನ ಧನ್ಯವಾದ ಎಂದು ಹೇಳಿದರು.
ಹಲವು ನಾಯಕರು ಕರೆ ಮಾಡಿ ವಿಚಾರಿಸಿದ್ದಾರೆ. ಕುಂದೂರು ಗ್ರಾಮ ಸೇರಿದಂತೆ ಎಲ್ಲರೂ ಪ್ರೀತಿ ತೋರಿಸಿದ್ದಾರೆ. ನಿನ್ನ ಜತೆಗೆ ಸರ್ಕಾರ ಇದೆ. ಎಲ್ಲ ಆಯಾಮಗಳಲ್ಲಿ ತನಿಖೆ ಆಗಲಿದೆ. ನಿನ್ನ ಜನಪ್ರಿಯತೆ ನೋಡಿ ಹೀಗೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ ಅವರೂ ನಾಲ್ಕೈದು ಬಾರಿ ಕರೆ ಮಾಡಿ ವಿಚಾರಿಸಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಇನ್ನೂ ಅನೇಕರು ಕರೆ ಮಾಡಿ ವಿಚಾರಿಸಿದ್ದಾರೆ. ಎಲ್ಲರಿಗೂ ಧನ್ಯವಾದ ಎಂದು ರೇಣುಕಾಚಾರ್ಯ ಹೇಳಿದರು.
ಇದನ್ನೂ ಓದಿ | Chandru Death | ಅಂತ್ಯಸಂಸ್ಕಾರಕ್ಕೆ ಮೊದಲು ಚಂದ್ರಶೇಖರ್‌ಗೆ ಮದುವೆ ಶಾಸ್ತ್ರ