Site icon Vistara News

Chandru Death | ಗೌರಿಗದ್ದೆಯ ವಿನಯ್‌ ಗುರೂಜಿ ಆಶ್ರಮದಲ್ಲಿ ವಿಚಾರಣೆ ನಡೆಸಿದ ಚನ್ನಗಿರಿ ಪೊಲೀಸರು

ವಿನಯ್‌ ಗುರೂಜಿ

ಚಿಕ್ಕಮಗಳೂರು: ಶಾಸಕ ರೇಣುಕಾಚಾರ್ಯ ಸಹೋದರನ ಮಗ ಚಂದ್ರಶೇಖರ್‌ ಸಾವಿನ ಪ್ರಕರಣ (Chandru Death) ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಕ್ಟೋಬರ್‌ 30ರಂದು ಚಂದ್ರು ಸಾವಿಗೂ ಮುನ್ನ ಗೌರಿಗದ್ದೆಯ ವಿನಯ್‌ ಗುರೂಜಿ ಆಶ್ರಮಕ್ಕೆ ಭೇಟಿ ನೀಡಿದ್ದರು. ಹೀಗಾಗಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು ಆಶ್ರಮಕ್ಕೆ ಆಗಮಿಸಿ ಚಂದ್ರು ಸಂಬಂಧ ಮಾಹಿತಿ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಗೌರಿಗದ್ದೆಯಲ್ಲಿರುವ ವಿನಯ್‌ ಗುರೂಜಿ ಆಶ್ರಮಕ್ಕೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು ಆಗಮಿಸಿ, ಗುರೂಜಿ ಬಳಿ ಇಂಚಿಂಚೂ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ʻʻಚಂದ್ರು ಯಾವ ವಿಚಾರವನ್ನು ನಿಮ್ಮ ಜೊತೆ ಮಾತನಾಡಿದರು? ಭೇಟಿ ವೇಳೆ ಏನಾದರೂ ಸಮಸ್ಯೆಯನ್ನು ಹೇಳಿಕೊಂಡಿದ್ದರಾ? ಜತೆಗೆ ಚಂದ್ರು ಸ್ನೇಹಿತ ಕಿರಣ್ ಹಾಗೂ ನಿಮ್ಮ ಮಧ್ಯೆ ಏನಾದರೂ ಚರ್ಚೆ ನಡೆಯಿತಾʼʼ ಎಂಬೆಲ್ಲ ಪ್ರಶ್ನೆಗಳನ್ನು ವಿನಯ್ ಗುರೂಜಿ ಬಳಿ ಕೇಳಿ ಮಾಹಿತಿ ಪಡೆದುಕೊಂಡಿದ್ದಾರೆ. ಜತೆಗೆ ಆಶ್ರಮದ ಸಿಬ್ಬಂದಿ ಜತೆಯೂ ಮಾಹಿತಿ ಪಡೆದ ಪೊಲೀಸರು, ಭಾನುವಾರ 7 ಗಂಟೆ ವೇಳೆಗೆ ಆಶ್ರಮಕ್ಕೆ ಭೇಟಿ ನೀಡಿದ್ದಾರೆ.

ಪ್ರತಿ ಬಾರಿಯು ಬಂದು ಹೋಗುತ್ತಿದ್ದ ಚಂದ್ರು
ʻʻಚಂದ್ರು ಆಶ್ರಮದ ಭಕ್ತನಾಗಿದ್ದು, ಪ್ರತಿ ಬಾರಿಯಂತೆ ಈ ಬಾರಿಯೂ ಬಂದು ಹೋಗಿದ್ದಾರೆ. ತಡವಾಗಿ ಬಂದಿದ್ದರಿಂದ ಆತನ ಬಳಿ ಹೆಚ್ಚು ನಾನು ಮಾತನಾಡಿಲ್ಲ. ತಡವಾಗಿ ಬಂದಿದ್ದಕ್ಕೆ ಇದು ಆಶ್ರಮಕ್ಕೆ ಭೇಟಿ ನೀಡುವ ಸಮಯವಾ ಎಂದು ಕೇಳಿದ್ದೇನೆ. ಬೇಗ, ಜಾಗೃತೆಯಿಂದ ಹೋಗಿ ಎಂದು ಇಬ್ಬರನ್ನು ಕಳುಹಿಸಿದ್ದೇನೆ. ಆ ಬಳಿಕ ನಡೆದ ಘಟನೆ ಬಗ್ಗೆ ನನಗೆ ನೋವಿದೆʼʼ ಎಂದು ವಿನಯ್‌ ಗುರೂಜಿ ಬೇಸರ ವ್ಯಕ್ತಪಡಿಸಿದರು.

ಇದನ್ನೂ ಓದಿ | Metro Cash & Carry | ರಿಲಯನ್ಸ್‌ ತೆಕ್ಕೆಗೆ ಮೆಟ್ರೊ ಕ್ಯಾಶ್‌ & ಕ್ಯಾರಿ, 4,060 ಕೋಟಿ ರೂ. ಡೀಲ್

Exit mobile version