ದಾವಣಗೆರೆ: ಶಾಸಕ ಎಂ.ಪಿ. ರೇಣುಕಾಚಾರ್ಯ ಸಹೋದರ ಎಂ.ಪಿ.ರಮೇಶ್ ಅವರ ಪುತ್ರ ಚಂದ್ರಶೇಖರ್ ಸಾವು (Chandru Death) ಪ್ರಕರಣವು ಇತ್ಯರ್ಥವಾಗಿಲ್ಲ. ಕುಟುಂಬದವರು ಇದನ್ನು ಕೊಲೆ ಎಂದರೆ, ಪೊಲೀಸರ ತನಿಖೆಯಲ್ಲಿ ಇದು ಅಪಘಾತ ಎಂದು ಹೇಳಲಾಗುತ್ತಿದೆ. ಆದರೆ, ಇವೆಲ್ಲದರ ನಡುವೆ ಪೊಲೀಸರ ಕೈಗೆ ಚಂದ್ರುವಿನ ಡಯಾಟಮ್ ವರದಿ ಸೇರಿದೆ.
ಕಳೆದ ಅಕ್ಟೋಬರ್ 30ರಂದು ನಾಪತ್ತೆಯಾಗಿದ್ದ ಚಂದ್ರು ಬಹು ಹುಡುಕಾಟದ ನಂತರ ಅವರು ಪ್ರಯಾಣಿಸುತ್ತಿದ್ದ ಕಾರು ತುಂಗಾ ನಾಲೆಯಲ್ಲಿ ಇರುವುದು ಪತ್ತೆಯಾಗಿತ್ತು. ಅದನ್ನು ಮೇಲೆತ್ತಿದಾಗ ಶವವೂ ಪತ್ತೆಯಾಗಿತ್ತು. ಈ ಸಾವು ಹಲವು ಅನುಮಾನಗಳನ್ನು ಸೃಷ್ಟಿಸಿತ್ತು. ಚಂದ್ರು ಸಾವು ಸಹಜ ಅಲ್ಲ, ಕಿಡ್ನ್ಯಾಪ್ ಆಗಿದೆ, ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿ ಎಂದು ರೇಣುಕಾಚಾರ್ಯ ಮನವಿ ಮಾಡಿದ್ದರು. ಈ ಕಾರಣಕ್ಕೆ ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ವೈದ್ಯರ ತಂಡವು ಡಯಾಟಮ್ ಪರೀಕ್ಷೆಗೆ ಮುಂದಾಗಿದ್ದರು. ಈಗ ಪೊಲೀಸರಿಗೆ ಡಯಾಟಮ್ ಪರೀಕ್ಷಾ ವರದಿ ಸಿಕ್ಕಿದೆ.
ಕಾರು ನಾಲೆಗೆ ಬೀಳುವ ಮೊದಲೇ ಚಂದ್ರಶೇಖರ್ ಮೃತಪಟ್ಟಿದ್ದರೇ ಅಥವಾ ನಾಲೆಗೆ ಕಾರು ಬಿದ್ದ ಬಳಿಕ ಚಂದ್ರಶೇಖರ್ ಮೃತಪಟ್ಟಿದ್ದಾರೆಯೇ ಎಂಬುದನ್ನು ತಿಳಿಯುವ ಉದ್ದೇಶದಿಂದ ವೈದ್ಯರ ಸಲಹೆ ಮೇರೆಗೆ ಈ ಡಯಾಟಮ್ ಪರೀಕ್ಷೆಯನ್ನು ಮಾಡಿಸಲು ಪೊಲೀಸರು ಮುಂದಾಗಿದ್ದರು. ಈಗ ವರದಿಯಲ್ಲಿ ಚಂದ್ರು ಸಾವು ಸಹಜ ಎಂದು ಡಯಾಟಮ್ ಪರೀಕ್ಷಾ ವರದಿ ಬಂದಿದೆ. ಶ್ವಾಸಕೋಶದ ಒಳಗೆ ನೀರು ಇರುವುದನ್ನು ಖಚಿತಪಡಿಸಿದೆ. ಶ್ವಾಸಕೋಶದ ಒಳಗೆ ನೀರು ಸೇರಿದರೆ ಚಂದ್ರು ಬದುಕಿದ್ದಾಗಲೇ ನಾಲೆಗೆ ಬಿದ್ದಿರುವ ಸಾಧ್ಯತೆ ಇದೆ.
ಫೊರೆನ್ಸಿಕ್ ಮೆಡಿಸಿನ್ (ನ್ಯಾಯ ವೈದ್ಯ ಶಾಸ್ತ್ರ) ತಂಡದಿಂದ ಡಯಾಟಮ್ ಟೆಸ್ಟ್ ನಡೆದಿದ್ದು, ಈ ಮೂಲಕ ಬಹುಮುಖ್ಯವಾಗಿ ಶ್ವಾಸಕೋಶವನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಚಂದ್ರಶೇಖರ್ ಕಾರಿನ ಸಮೇತ ನೀರಿಗೆ ಬಿದ್ದು ಮೃತಪಟ್ಟಿದ್ದರೆ ಅವರ ಶ್ವಾಸಕೋಶದ ಒಳಗೆ ನೀರು ತುಂಬಿಕೊಳ್ಳಲೇಬೇಕು. ನೀರಿನಲ್ಲಿದ್ದ ಕಾರಣ ಶವ ಕೊಳೆತು ಶ್ವಾಸಕೋಶದಲ್ಲಿರುವ ನೀರು ಒಂದು ವೇಳೆ ಹೊರಗೆ ಹೋದರೂ ಕಲ್ಮಶವು ಅಲ್ಲಿಯೇ ಉಳಿದಿರುತ್ತದೆ.
ಸದ್ಯ, ಪೊಲೀಸರು ಎಫ್‌ಎಸ್‌ಎಲ್ ವರದಿ ಹಾಗೂ ಮರಣೋತ್ತರ ಪರೀಕ್ಷಾ ವರದಿಗೆ ಕಾಯುತ್ತಿದ್ದಾರೆ. ಎಲ್ಲ ವರದಿಗಳು ಬಂದ ಮೇಲೆ ಚಂದ್ರು ಸಾವು ಸಹಜವೋ, ಅಸಹಜವೋ ಎಂದು ಅಂತಿಮ ತೀರ್ಮಾನಕ್ಕೆ ಬರಲಿದ್ದಾರೆ. ಚಂದ್ರು ಸಾವಿನ ಇಂಚಿಂಚು ಮಾಹಿತಿ ಎಡಿಜಿಪಿ ಅಲೋಕ್ ಕುಮಾರ್ ಪಡೆಯುತ್ತಿದ್ದಾರೆ. ಅಲೋಕ್ ಕುಮಾರ್ ವಿರುದ್ಧ ರೇಣುಕಾಚಾರ್ಯ ಹರಿಹಾಯ್ದಿದ್ದರು. ಹಾಗಾಗಿ ಅಲೋಕ್ ಕುಮಾರ್ ನೇರವಾಗಿ ಮಾಹಿತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | KRS | ಮಂಡ್ಯದ ಕೆಆರ್‌ಎಸ್ ಬೃಂದಾವನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ