Site icon Vistara News

Chandru Death | ಕೊಲೆ, ಅಪಘಾತ ಆಯಾಮದಲ್ಲಿ ತನಿಖೆಗೆ ಸೂಚಿಸಿದ್ದೇನೆ: ಸಿಎಂ ಬಸವರಾಜ ಬೊಮ್ಮಾಯಿ

cm in davanagere chandru death

ದಾವಣಗೆರೆ: ಶಾಸಕ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್‌ ಸಾವಿನ (Chandru Death) ಕುರಿತಂತೆ ಸಂಪೂರ್ಣವಾಗಿ ತನಿಖೆ ಆಗುವವರೆಗೂ ಯಾವುದೇ ನಿರ್ಧಾರಕ್ಕೆ ಬರದಂತೆ ಸೂಚಿಸಿದ್ದೇನೆ. ಕೊಲೆ, ಅಪಘಾತ ಎರಡೂ ಕೋನದಲ್ಲಿ ತನಿಖೆ ನಡೆಸಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹೊನ್ನಾಳಿಯಲ್ಲಿರುವ ಶಾಸಕ ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾಂತ್ವನ ಹೇಳಿದ್ದಾರೆ. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರಿನ ಹಿಂಬದಿ ಸೀಟ್‌ಗೆ ಚಂದ್ರು ಹೇಗೆ ಬಂದರು? ತಲೆಯ ಕೂದಲು ಬೋಳಿಸಿದ್ದು ಹೇಗೆ? ಎಂಬಿತ್ಯಾದಿ ಎಲ್ಲ ವಿಚಾರಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇನ್ನು ಮರಣೋತ್ತರ ಪರೀಕ್ಷೆ ವರದಿ ಬರಬೇಕಿದೆ. ಎಫ್‌ಎಸ್‌ಎಲ್‌ ವರದಿಯೂ ಮುಖ್ಯವಾಗುತ್ತದೆ. ಹೊಳೆಯ ನೀರು, ದೇಹದೊಳಗಿರುವ ನೀರನ್ನು ಪರಿಶೀಲಿಸಬೇಕು. ಘಟನಾವಳಿಗಳ ಮರುಸೃಷ್ಟಿಯೂ ಆಗಬೇಕಿದೆ. ಪ್ರತ್ಯೇಕ ಆಯಾಮದಲ್ಲಿ ತನಿಖೆಯು ಮುಂದುವರಿದಿದ್ದು, ಮರಣೋತ್ತರ ಪರೀಕ್ಷೆ ವರದಿ ನಂತರ ತೀರ್ಮಾನವನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಿಎಂ ಆಗಿ ಬಂದಿಲ್ಲ, ಸಹೋದರನಾಗಿ ಬಂದಿರುವೆ
ಚಂದ್ರಶೇಖರ್ ನಮ್ಮನ್ನು ಅಗಲಿದ್ದಾರೆ. ಅವರ ತಂದೆ, ತಾಯಿಗೆ ಭರಿಸಲಾರದ ದುಃಖವಾಗಿದೆ. ಚಂದ್ರುವನ್ನು ರೇಣುಕಾಚಾರ್ಯ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಇಂಜಿನಿಯರ್ ಆಗಿದ್ದರೂ ರೇಣುಕಾಚಾರ್ಯ ಜತೆ ಅವರ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತಿದ್ದ. ನಾನು ಇಲ್ಲಿ ಮುಖ್ಯಮಂತ್ರಿಯಾಗಿ ಬಂದಿಲ್ಲ. ರೇಣುಕಾಚಾರ್ಯ ಅವರ ಸಹೋದರನಾಗಿ ಬಂದಿದ್ದೇನೆ. ಅವರ ದುಃಖಕ್ಕೆ ನಾನು ಭಾಗಿಯಾಗಿದ್ದೇನೆ ಎಂದು ಸಿಎಂ ಹೇಳಿದರು.

ಇದನ್ನೂ ಓದಿ | ಚಂದ್ರು ಸಾವಿನ ಹಿನ್ನೆಲೆಯಲ್ಲಿ ಸಲಿಂಗಕಾಮದ ಒತ್ತಡ?‌ ಸುಳಿ ಬಿಚ್ಚಿದ ಸಂಶಯ

ಬಿಗಿ ಬಂದೋಬಸ್ತ್‌, ಆಪ್ತರಿಗಷ್ಟೇ ಪ್ರವೇಶಾವಕಾಶ
ರೇಣುಕಾಚಾರ್ಯ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭೇಟಿ ಹಿನ್ನೆಲೆಯಲ್ಲಿ ರೇಣುಕಾಚಾರ್ಯ ಮನೆ ಸುತ್ತಮುತ್ತ ಪೊಲೀಸ್‌ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ರೇಣುಕಾಚಾರ್ಯ ಮನೆಗೆ ಸಾರ್ವಜನಿಕ ಪ್ರವೇಶವನ್ನು ನಿಷೇಧ ಮಾಡಲಾಗಿತ್ತು. ಕೇವಲ ಕುಟುಂಬಸ್ಥರು, ಆಪ್ತರಿಗಷ್ಟೇ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಸಚಿವ ಭೈರತಿ ಬಸವರಾಜ್, ಸಂಸದ ಜಿ.ಎಂ. ಸಿದ್ದೇಶ್ವರ ಜತೆಗಿದ್ದರು. ಸಿಎಂ ಬೊಮ್ಮಾಯಿ ರೇಣುಕಾಚಾರ್ಯ ಮನೆಗೆ ಭೇಟಿ ನೀಡಿ ಮೊದಲು ಚಂದ್ರಶೇಖರ್‌ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಎಸ್‌ಪಿಯಿಂದ ಮಾಹಿತಿ ಪಡೆದಿದ್ದ ಸಿಎಂ
ಶಾಸಕ ರೇಣುಕಾಚಾರ್ಯ ಅವರ ಮನೆಗೆ ಭೇಟಿ ನೀಡುವ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಅವರಿಂದ ಮುಖ್ಯಮಂತ್ರಿಯವರು ಮಂಗಳವಾರ ರಾತ್ರಿ ಚಂದ್ರಶೇಖರ್‌ ಅವರ ಸಾವಿನ ಬಗ್ಗೆ ಇದುವರೆಗಿನ ತನಿಖಾ ವರದಿಯನ್ನು ಪಡೆದುಕೊಂಡರು.

ಚಂದ್ರಶೇಖರ್ ಸಾವಿನ ಬಗ್ಗೆ ತನಿಖೆಯನ್ನು ಸಿಬಿಐ ಅಥವಾ ಎನ್ಐಎಗೆ ಒಪ್ಪಿಸುವಂತೆ ರೇಣುಕಾಚಾರ್ಯ ಕುಟುಂಬದವರು ಈಗಾಗಲೇ ಮನವಿ ಮಾಡಿದ್ದಾರೆ. ಆದರೆ, ಪ್ರಾಥಮಿಕ ತನಿಖೆಯಲ್ಲಿ ಕೊಲೆ ಎಂದು ಕಂಡು ಬಂದರೆ ಪ್ರಕರಣ ಎನ್ಐಎಗೆ ವಹಿಸುವ ಸಾಧ್ಯತೆ ಇದೆ. ಈಗಾಗಲೇ ಡಯಾಟಂ, ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ಮಾಹಿತಿ ಸಿಎಂ, ಗೃಹ ಸಚಿವರ ಕೈ ಸೇರಿದೆ.

ಇದನ್ನೂ ಓದಿ | Chandru Death | ಗೌರಿಗದ್ದೆಯ ವಿನಯ್‌ ಗುರೂಜಿ ಆಶ್ರಮದಲ್ಲಿ ವಿಚಾರಣೆ ನಡೆಸಿದ ಚನ್ನಗಿರಿ ಪೊಲೀಸರು

Exit mobile version