ಬೆಂಗಳೂರು: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಎಂ.ಪಿ. ರಮೇಶ್ ಅವರ ಪುತ್ರ ಚಂದ್ರಶೇಖರ್ ಅನುಮಾನಾಸ್ಪದ ಸಾವಿನ ತನಿಖೆ ಚುರುಕುಗೊಂಡಿದೆ. ಈ ನಡುವೆಯೇ ಚಂದ್ರಶೇಖರ್ ಸಾವು ಅಪಘಾತದಿಂದಲೇ ಸಂಭವಿಸಿದ್ದು ಎಂಬುದು ಬಹುತೇಕ ಖಚಿತವಾಗಿದೆ. ಆದರೆ, ಅಪಘಾತ ಆಕಸ್ಮಿಕವಾಗಿ ಆಗಿದೆಯೆ ಅಥವಾ ಬೇರೆ ಯಾರಾದರೂ ಅಪಘಾತ ಮಾಡಿಸಿದರೇ ಎನ್ನುವ ಅನುಮಾನಗಳು ಎದುರಾಗಿದೆ.
ಚಂದ್ರಶೇಖರ್ ಸಾವು ಅಪಘಾತದಿಂದಲೇ ಸಂಭವಿಸಿದೆ ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಅದಕ್ಕೆ ಪೂರಕವಾದ ವಿಚಾರವೂ ಎಫ್ಎಸ್ಎಲ್ ವರದಿಯಿಂದ ಬಹಿರಂಗಗೊಂಡಿದೆ. ಘಟನೆ ಬಗ್ಗೆ ಖಾಸಗಿಯಾಗಿ ತನಿಖೆ ಕೈಗೊಂಡಿದ್ದ ವಿಧಿವಿಜ್ಞಾನ ತಜ್ಞ ಫಣೀಂದ್ರ ಅವರು ಪ್ರಕರಣದ ಬಗ್ಗೆ ಬರೋಬ್ಬರಿ ನಲವತ್ತು ಪುಟಗಳ ರಿಪೋರ್ಟ್ ಸಿದ್ಧಪಡಿಸಿದ್ದಾರೆ.
ಫಣೀಂದ್ರರವರ ನೇತೃತ್ವದಲ್ಲಿ ಮೂರು ತಂಡಗಳಿಂದ ತನಿಖೆ ನಡೆಯುತ್ತಿದ್ದು, ಆಕ್ಸಿಡೆಂಟ್ ಆಗಿದ್ದು ಹೇಗೆ, ಯಾವ ವೇಗ, ಹೇಗಾಯಿತು ಅನ್ನೋದರ ಬಗ್ಗೆ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಅದರಲ್ಲಿ ಮೊದಲಿಗೆ ಚಂದ್ರಶೇಖರ್ ಅಪಘಾತದಿಂದಲೇ ಸಾವನ್ನಪ್ಪಿರೋದು ಬಗ್ಗೆ ಶಂಕೆ ವ್ಯಕ್ತವಾಗಿದೆ. ಆದ್ರೆ, ಕಾರಿಗೆ ಹಿಂದಿನಿಂದ ಬಂದು ಗುದ್ದಿರುವ ಸಾಧ್ಯತೆಗಳು ಇವೆ.
ಹಿಂದಿನಿಂದ ಗುದ್ದಿದ ಶಂಕೆ ಯಾಕೆ?
ಹಿಂದಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದು ಬಳಿಕ ಕಾರು ಸೇತುವೆಯಿಂದ ಕೆಳಗೆ ಉರುಳಿದೆ ಎನ್ನುವುದಕ್ಕೆ ಕೆಲವೊಂದು ಸಾಕ್ಷ್ಯಾಧಾರಗಳಿವೆ. ಕಾರನ್ನು ಯಾರೇ ಚಾಲನೆ ಮಾಡಿದ್ದರೂ ಎಡಭಾಗದಲ್ಲಿ ಚಾಲನೆ ಮಾಡುತ್ತಾರೆ. ಆ ವೇಳೆ ಹಿಂದಿನಿಂದ ಯಾವುದಾದರೂ ವಾಹನ ಗುದ್ದಿದ ಬಳಿಕ ಬಲ ಭಾಗಕ್ಕೆ ಹೋಗುತ್ತದೆ. ಈ ಪ್ರಕರಣದಲ್ಲೂ ಆ ರೀತಿಯ ಸಾಮ್ಯತೆ ಇರುವುದು ಕಂಡುಬಂದಿದೆ.
ಇನ್ನು ಹಿಂದಿನಿಂದ ಗುದ್ದಿದ ರಭಸಕ್ಕೆ ಚಂದ್ರಶೇಖರ್ ಬಳಸುತ್ತಿದ್ದ ಕ್ರೆಟಾ ಕಾರು ಎರಡು ಸಿಮೆಂಟ್ ಬ್ಲಾಕ್‌ಗೆ ಡಿಕ್ಕಿ ಹೊಡೆದಿದ್ದು, ಬಲ ಭಾಗಕ್ಕೆ ಹೋದ ಕಾರು ಬ್ರಿಡ್ಜ್‌ಗೆ ಹೊಡೆದುಕೊಂಡು ಕೆಳಗೆ ಬಿದ್ದಿದೆ. ಒಂದು ವೇಳೆ ಕಾರು ನಿಯಂತ್ರಣಕ್ಕೆ ಸಿಗದೆ ಇದ್ದರೆ ನೇರವಾಗಿ ನಾಲೆಗೆ ಬೀಳಬೇಕಿತ್ತು ಹೀಗಾಗಿ ಹಲವು ಅನುಮಾನಗಳು ಎಫ್ಎಸ್ ಎಲ್ ತನಿಖೆ ವೇಳೆಯೂ ಬೆಳಕಿಗೆ ಬಂದಿದೆ.
ಅದರ ಜೊತೆಯಲ್ಲಿ ಕಾರಿನ ಮೇಲೆ ಯಾವುದೇ ಸ್ಕ್ರ್ಯಾಚ್ ಮಾರ್ಕ್ ಇಲ್ಲದಿರುವುದು, ಕಾರಿನ ಎಡಭಾಗದಲ್ಲಿ ಡೆಂಟ್ ಆಗಿರುವುದು ಸೇರಿದಂತೆ ತಾಂತ್ರಿಕವಾಗಿ ಸಿಕ್ಕಿರುವ ಕೆಲ ಸಾಕ್ಷಿಗಳು ಚಂದ್ರಶೇಖರ್ ಅವರನ್ನು ಪ್ಲ್ಯಾನ್ ಮಾಡಿ ಅಪಘಾತ ರೂಪದಲ್ಲಿ ಹತ್ಯೆ ಮಾಡಲಾಗಿದೆಯಾ ಎಂಬ ಸಂಶಯಕ್ಕೆ ಕಾರಣವಾಗಿದೆ. ಪೊಲೀಸರು ಆ ಎಲ್ಲ ಆಯಾಮಗಳನ್ನು ಇಟ್ಟುಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ | Chandru Death | ಕೊಲೆ, ಅಪಘಾತ ಆಯಾಮದಲ್ಲಿ ತನಿಖೆಗೆ ಸೂಚಿಸಿದ್ದೇನೆ: ಸಿಎಂ ಬಸವರಾಜ ಬೊಮ್ಮಾಯಿ