Site icon Vistara News

Chandru death | ಜಾಲ ತಾಣಗಳಲ್ಲಿ ಚಂದ್ರಶೇಖರ್‌ ಚಿತ್ರ, ವಿಡಿಯೊ ಹಂಚಿಕೊಂಡು ಕಣ್ಣೀರಿಟ್ಟ ರೇಣುಕಾಚಾರ್ಯ

Renuka chandra shekhar

ಹೊನ್ನಾಳಿ: ತಮ್ಮ ಎಂ.ಪಿ. ರಮೇಶ್‌ ಅವರ ಪುತ್ರ ಚಂದ್ರಶೇಖರ್‌ ಅವರ ಸಾವಿನ ಶೋಕದಲ್ಲಿರುವ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಒಂದು ಕಡೆ ಕಣ್ಣೀರು ಹಾಕುತ್ತಾ ಗೋಳಾಡುತ್ತಿದ್ದರೆ, ಇನ್ನೊಂದು ಕಡೆ ಸಾಮಾಜಿಕ ಜಾಲ ತಾಣದಲ್ಲೂ ಚಂದ್ರು ಬದುಕಿನ ಚಿತ್ರ, ವಿಡಿಯೊಗಳನ್ನು ಹಾಕಿ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಎಂ.ಪಿ. ರೇಣುಕಾಚಾರ್ಯ ಅವರ ತಮ್ಮ ಎಂ.ಪಿ. ರಮೇಶ್‌ ಅವರ ಪುತ್ರ ೨೪ ವರ್ಷದ ಚಂದ್ರಶೇಖರ್‌ ಅವರು ಕಳೆದ ಭಾನುವಾರ (ಅಕ್ಟೋಬರ್‌ ೩೦)ದಂದು ರಾತ್ರಿ ೧೧.೩೦ರಿಂದ ನಾಪತ್ತೆಯಾಗಿದ್ದರು. ಕೆ.ಎ ೧೭ ಎಂಎ ೨೫೩೪ ನಂಬರ್‌ನ ಕ್ರೆಟಾ ಕಾರಿನಲ್ಲಿ ಶಿವಮೊಗ್ಗದಿಂದ ಹೊರಟಿದ್ದ ಅವರು ಹೊನ್ನಾಳಿಯ ಮನೆಗೆ ತಲುಪದೆ ನಾಪತ್ತೆಯಾಗಿದ್ದರು. ಸೋಮವಾರ ಈ ವಿಚಾರ ದೊಡ್ಡ ಸದ್ದಾಗಿತ್ತು. ಮುಂದೆ ಪೊಲೀಸರು ಎಲ್ಲಾ ಕಡೆಯಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಿದಾಗ ಅವರು ಸುರಹೊನ್ನೆಯಿಂದ ಹೊನ್ನಾಳಿ ನಡುವೆ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು ಹುಡುಕಿದಾಗ ಗುರುವಾರ (ನವೆಂಬರ್‌ ೩) ಮಧ್ಯಾಹ್ನದ ಹೊತ್ತಿಗೆ ಹೊನ್ನಾಳಿ ತಾಲೂಕಿನ ಕಡದಕಟ್ಟೆ ಗ್ರಾಮದ ಬಳಿಯ ತುಂಗಾ ಕಾಲುವೆಗೆ ಬಿದ್ದ ಕಾರು ಪತ್ತೆಯಾಗಿತ್ತು. ಅದರೊಳಗೆ ಚಂದ್ರಶೇಖರ್‌ ಅವರ ಶವವೂ ಪತ್ತೆಯಾಗಿದೆ. ಕಾರು ಸೇತುವೆಯ ಒಂದು ಭಾಗಕ್ಕೆ ಬಡಿದ ಕುರುಹುಗಳಿದ್ದು, ಮತ್ತೊಂದು ಭಾಗದಿಂದ ನೀರಿಗೆ ಬಿದ್ದಿದೆ. ಕಾರಿನ ಹಿಂಬದಿ ಸೀಟಿನಲ್ಲಿ ಚಂದ್ರಶೇಖರ್‌ ಅವರ ಕೊಳೆತ ಶವ ಪತ್ತೆಯಾಗಿದೆ. ಗುರುವಾರವೇ ಶವವನ್ನು ಮೇಲೆತ್ತಿ ಮರಣೋತ್ತರ ಪರೀಕ್ಷೆ ನಡೆದು ಶುಕ್ರವಾರ (ನ.೪) ಮಧ್ಯಾಹ್ನ ಎರಡು ಗಂಟೆಯ ಹೊತ್ತಿಗೆ ಅಂತ್ಯಕ್ರಿಯೆ ನಡೆಸಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ.

ರೇಣುಕಾಚಾರ್ಯ ಹಂಚಿಕೊಂಡ ಚಂದ್ರಶೇಖರ್‌ ಅವರ ಚಿತ್ರಗಳು

ಇಷ್ಟೆಲ್ಲದರ ನಡುವೆ ರೇಣುಕಾಚಾರ್ಯ ಅವರು ಕಳೆದ ಸೋಮವಾರದಿಂದ ಕಣ್ಣೀರು ಹಾಕುತ್ತಲೇ ಇದ್ದಾರೆ. ಮಗನನ್ನೇ ಕಳೆದುಕೊಂಡ ರೀತಿಯಲ್ಲಿ ಅವರು ನೋವನುಭವಿಸುತ್ತಿದ್ದಾರೆ. ಚಂದ್ರಶೇಖರ್‌ ಅವರು ರೇಣುಕಾಚಾರ್ಯ ಅವರ ಬಲಗೈಯಂತೆ ಕೆಲಸ ಮಾಡುತ್ತಾ ವಿಶ್ವಾಸಿಗರಾಗಿದ್ದರು. ಹೀಗಾಗಿ ಅವರ ಸಾವನ್ನು ಅರಗಿಸಿಕೊಳ್ಳಲು ರೇಣುಕಾಚಾರ್ಯ ಅವರಿಗೆ ಸಾಧ್ಯವಾಗುತ್ತಿಲ್ಲ.

ಈ ನಡುವೆ, ರೇಣುಕಾಚಾರ್ಯ ಅವರು ಇಷ್ಟೆಲ್ಲ ನೋವಿನ ನಡುವೆಯೂ ತಮ್ಮ ಫೇಸ್‌ ಬುಕ್‌ ಮೂಲಕವೂ ಚಂದ್ರುವನ್ನು ನೆನಪಿಸಿಕೊಂಡಿದ್ದಾರೆ. ಅಂತ್ಯ ಸಂಸ್ಕಾರದ ವಿವರವನ್ನು ಹಂಚಿಕೊಂಡಿದ್ದಾರೆ.

ಚಂದ್ರಶೇಖರ್‌ ನೃತ್ಯ ಮಾಡುತ್ತಿರುವುದು.

ಏನು ಬರೆದಿದ್ದಾರೆ?
ʻʻನನ್ನ ಪ್ರೀತಿಯ ಸುಪುತ್ರ, ಯುವಕರ ಕಣ್ಮಣಿ ಚಿ. ಚಂದ್ರುವಿನ ಅಂತಿಮ ದರ್ಶನವನ್ನು ಹೊನ್ನಾಳಿಯ ಹಿರೇಮಠದಲ್ಲಿರುವ ನನ್ನ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಬೆಳಗ್ಗೆ ಅವಕಾಶ ಮಾಡಿಕೊಡಲಾಗಿದೆ. ಮಧ್ಯಾಹ್ನ 12 ಘಂಟೆಗೆ ಮಠದ ವೃತ್ತದಿಂದ, ಮರಳೋಣಿ ರಸ್ತೆ, ದುರ್ಗಿಗುಡಿ ಸರ್ಕಲ್ ನಿಂದ ಪೇಟೆ ಹಳದಮ್ಮ ದೇಸ್ಥಾನದಿಂದ ಕೆನರಾಬ್ಯಾಂಕ್ ರಸ್ತೆ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ದೇವನಾಯ್ಕನಹಳ್ಳಿ ವೃತ್ತ ತಲುಪಿ ನಂತರ ಗೊಲ್ಲರಹಳ್ಳಿ ಮಾರ್ಗವಾಗಿ ಮಾಸಡಿ, ತರಗನಹಳ್ಳಿ ಸಿಂಟಟಗೆರೆ, ಹನುಮನಹಳ್ಳಿ ಮಾರ್ಗವಾಗಿ ನನ್ನ ಹುಟ್ಟೂರು ಕುಂದೂರು ತಲುಪಿ, ಕುಂದೂರಿನ ಪ್ರಮುಖ ರಸ್ತೆಯಲ್ಲಿ ಅಂತಿಮ ಯಾತ್ರೆ ಸಾಗಿ ನಂತರ ಕುಂದೂರಿನಲ್ಲಿರುವ ನಮ್ಮ ತೆಂಗಿನ ತೋಟದಲ್ಲಿ ನನ್ನ ತಂದೆ ತಾಯಿ,ಚಂದ್ರುವಿನ ಅಜ್ಜ ಅಜ್ಜಿಯ ಸಮಾದಿ ಮಧ್ಯೆದಲ್ಲಿ ವಿಧಿವಿಧಾನದ ಮೂಲಕ 04.11.22ರ ಮಧ್ಯಾಹ್ನ 2 ಘಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದ್ದು ಸಾರ್ವಜನಿಕರು ಸಹಕರಿಸಬೇಕುʼʼ ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.

ಹಲವು ವಿಡಿಯೊ, ಚಿತ್ರಗಳ ಶ್ರದ್ಧಾಂಜಲಿ
ಚಂದ್ರಶೇಖರ್‌ ಸಾಮಾಜಿಕವಾಗಿ ತುಂಬ ಸಕ್ರಿಯವಾಗಿದ್ದು, ರೇಣುಕಾಚಾರ್ಯ ಅವರ ಕ್ಷೇತ್ರದ ಕೆಲಸ ಕಾರ್ಯಗಳಿಗೆ ಸಹಾಯ ಮಾಡುತ್ತಿದ್ದರು. ಯಾವತ್ತೂ ರೇಣುಕಾಚಾರ್ಯರನ್ನು ನೆರಳಿನಂತೆ ಇದ್ದರು. ಅವರಿಲ್ಲದಿದ್ದರೂ ಕ್ಷೇತ್ರದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಅನ್ನದಾನ, ಬಟ್ಟೆ ದಾನ, ಜನರ ಸಮಸ್ಯೆ ಕೇಳುವ ಕೆಲಸಗಳನ್ನು ಮಾಡುತ್ತಿದ್ದರು. ಈ ಎಲ್ಲ ಚಿತ್ರಗಳನ್ನು, ಸಮಾಜಸೇವೆಯ ನಾನಾ ಮುಖಗಳನ್ನು ಚಿತ್ರಗಳ ವಿಡಿಯೊ ಮೂಲಕ ರೇಣುಕಾಚಾರ್ಯ ಅವರು ಅನಾವರಣಗೊಳಿಸಿದ್ದಾರೆ. ಜತೆಗೆ ಚಂದ್ರು ಡ್ಯಾನ್ಸ್‌ ಮಾಡುತ್ತಿರುವ, ಬೈಕ್‌ ರೈಡಿಂಗ್‌ ಮಾಡುವ ಚಿತ್ರ, ವಿಡಿಯೊಗಳನ್ನು ಹಾಕಿದ್ದಾರೆ.

ಅನ್ನದಾನದಲ್ಲಿ ಚಂದ್ರಶೇಖರ್‌ ಭಾಗಿ
ಬೈಕ್‌ ರ‍್ಯಾಲಿಯಲ್ಲಿ ರೇಣುಕಾಚಾರ್ಯ ಜತೆ

ನಿನ್ನ ಸಾವಿಗೆ ನಾನೇ ಕಾರಣವಾದೆ ಎಂದೆಲ್ಲ ಗೋಳಾಡಿದ ರೇಣುಕಾಚಾರ್ಯ
ತುಂಗಾ ನಾಲೆಯಲ್ಲಿ ಬಿದ್ದಿದ್ದ ಕಾರನ್ನು ಮೇಲೆತ್ತುತ್ತಿದ್ದಂತೆಯೇ ದುಃಖವನ್ನು ತಡೆದುಕೊಳ್ಳಲಾಗದ ತಲೆ ಚಚ್ಚಿಕೊಂಡ ರೇಣುಕಾಚಾರ್ಯ, “ನಿನ್ನ ಸಾವಿಗೆ ನಾನೇ ಕಾರಣವಾದೆ ಚಂದ್ರೂ.. ನಾನೂ ಬರುತ್ತೇನೆ ನನ್ನನ್ನು ಕರೆಸಿಕೋ… ನನಗೆ ನೀನು ಬೆಂಕಿ ಹಚ್ಚಪ್ಪ ಚಂದ್ರು..” ಎಂದು ಮತ್ತೆ ಮತ್ತೆ ಗೋಳಾಡಿದ್ದಾರೆ. ʻʻನೀನು ನನ್ನ ಮಗ ಕಣೋ.. ಚಂದ್ರೂ ನನ್ನನ್ನೂ ಕರೆದುಕೊಂಡು ಬಿಡೋ…” ಎಂದೆಲ್ಲ ಹೇಳಿಕೊಂಡ ರೇಣುಕಾಚಾರ್ಯ, “ಚಂದ್ರುವನ್ನು ದಯವಿಟ್ಟು ಯಾರೂ ಬಾಡಿ ಎನ್ನಬೇಡಿ, ಶವ ಎಂದು ಹೇಳಬೇಡಿ..” ಎಂದು ಕೈಮುಗಿದು ಬೇಡಿಕೊಂಡಿದ್ದರು.

ಕಣ್ಣೀರು ಹಾಕುತ್ತಿರುವ ರೇಣುಕಾಚಾರ್ಯ

ಇದು ಕೊಲೆಯೇ ಎನ್ನುತ್ತಿರುವ ರೇಣುಕಾಚಾರ್ಯ
ಚಂದ್ರಶೇಖರ್‌ ಅವರದು ಒಂದು ವ್ಯವಸ್ಥಿತ ಕೊಲೆ. ಇದು ಅಪಘಾತವೋ, ಸಹಜ ಸಾವೋ ಅಲ್ಲ ಎನ್ನುವುದು ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಆರೋಪ. ʻʻನನಗೆ ವರ್ಷದ ಹಿಂದೆ ಬೆದರಿಕೆ ಕರೆ ಬಂದಿತ್ತು. ನನಗೆ ಕೊಲೆ ಬೆದರಿಕೆ ಇದೆ ಎಂದು ಇತ್ತೀಚೆಗೂ ನಾನು ಹೇಳಿಕೊಂಡಿದ್ದೆ. ಕ್ಷೇತ್ರದಲ್ಲಿ ಅವನ ಉನ್ನತಿ ಸಹಿಸಲಾಗದೆ ಕೊಲೆ ಮಾಡಿದ್ದಾರೆ. ದೇಹದ ಮೇಲೆ ಒಂದಷ್ಟು ಕಲೆಗಳಿವೆ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸರ್ಕಾರ ನಿನ್ನ ಜೊತೆ ಇದೆ, ನ್ಯಾಯ ಸಿಗುತ್ತದೆ ಎಂದು ಸಿಎಂ ಬೊಮ್ಮಾಯಿ ಕೂಡ ಭರವಸೆ ಕೊಟ್ಟಿದ್ದಾರೆʼʼ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

ʻʻನನ್ನ ಮಗನ ಸಾವು ಸಹಜ ಸಾವಲ್ಲ. ನನ್ನ‌ ಮಗ ಕಿಡ್ನಾಪ್ ಆಗಿದ್ದಾನೆ ಎಂದು ಪೊಲೀಸರಿಗೆ ಮೊದಲೇ ಹೇಳಿದ್ದೆ. ಅವನು ನನ್ನ ಜೊತೆ ಕ್ಷೇತ್ರದಲ್ಲಿ ಬೆಂಬಲವಾಗಿದ್ದ, ಜನರ ಪ್ರೀತಿ ಗಳಿಸಿದ್ದ. ಪೊಲೀಸರು ತನಿಖೆ ನಡೆಸಿ ನ್ಯಾಯ ಒದಗಿಸಲಿʼʼ ಎಂದು ರೇಣುಕಾಚಾರ್ಯ ಹೇಳಿದ್ದಾರೆ. ಚಂದ್ರಶೇಖರ್‌ನ್ನು ಕೊಲೆ ಮಾಡಿ ನಾಲೆಗೆ ಹಾಕಿದ್ದಾರೆ ಎಂದು ರೇಣುಕಾಚಾರ್ಯ ಕುಟುಂಬ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಇದನ್ನೂ ಓದಿ | Missing Case | ನಿನ್ನ ಸಾವಿಗೆ ನಾನೇ ಕಾರಣ ಚಂದ್ರೂ, ಬೇರೆ ಯಾರೂ ಕಾರಣ ಅಲ್ಲ; ಕಾರಿನ ಮುಂದೆ ಗೋಳಿಟ್ಟ ರೇಣುಕಾಚಾರ್ಯ

Exit mobile version