ಮಾಗಡಿ ಕೆ.ಎಸ್ ರಾಜು, ರಾಮನಗರ
ವಿಶ್ವಪ್ರಸಿದ್ಧ ಬೊಂಬೆ ನಾಡಿದ ಚನ್ನಪಟ್ಟಣಕ್ಕೆ (Channapatna doll) ಈಗ ಸಂಕಷ್ಟ ಎದುರಾಗಿದೆ. ಉದ್ಯಾನ ನಗರಿಯಿಂದ ಸಾಂಸ್ಕೃತಿಕ ನಗರಿಗೆ ಹಾದು ಹೋಗುತ್ತಿದ್ದಾಗ ಕೈಬೀಸಿ ಕರೆಯುತ್ತಿದ್ದ ಬೊಂಬೆನಗರಿ ಈಗ ಅಕ್ಷರಶಃ ಮೂಕವೇದನೆ ಅನುಭವಿಸುತ್ತಿದೆ. ಜೀವಂತಿಕೆ ತುಂಬಿದ್ದ ಗೊಂಬೆಗಳಲ್ಲೀಗ ನೋವಿನ ಛಾಯೆ ಕಾಣಿಸುತ್ತಿದೆ. ವಾರಾಂತ್ಯ ಬಂದರೆ ಸಂತೆಯಂತಾಗುತ್ತಿದ್ದ ನಾಡು ಈಗ ಬಣಗುಡುತ್ತಿದೆ. ಇಷ್ಟೆಕ್ಕೆಲ್ಲ ಕಾರಣವಾಗಿರುವುದು ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ.
ಅತಿಯಾದ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ಎದುರಿಸಿದ್ದ ರಾಮನಗರ ಹಾಗೂ ಚನ್ನಪಟ್ಟಣದ ಅದೆಷ್ಟೋ ಮಂದಿಯ ಬದುಕು ಈಗ ಡೋಲಾಯಮಾನವಾಗಿದೆ. ಭಾರಿ ಸದ್ದು ಮಾಡಿದ್ದ ದಶಪಥ ಹೆದ್ದಾರಿಯು ಕರಕುಶಲಕರ್ಮಿಗಳಿಗೆ ಆತಂಕವನ್ನು ಹುಟ್ಟುಹಾಕಿದೆ. ಬಹುಬೇಗನೆ ಮೈಸೂರು – ಬೆಂಗಳೂರು ಸಂಪರ್ಕಿಸಲು ಹೆಚ್ಚಾಗಿ ದಶಪಥ ಹೆದ್ದಾರಿ ಮಾರ್ಗ ಹಿಡಿದಿರುವ ಪ್ರವಾಸಿಗರು ಬೊಂಬೆನಗರಿ ಚನ್ನಪಟ್ಟಣದತ್ತ ಮುಖವನ್ನೂ ಮಾಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಮರದ ಆಟಿಕೆ ವ್ಯಾಪಾರ ನೆಲಕಚ್ಚುವ ಹಂತಕ್ಕೆ ಹೋಗಲಿದೆಯೆ ಎನ್ನುವ ಪ್ರಶ್ನೆ ಕಾಡಲು ಆರಂಭಿಸಿದೆ.
ಇದನ್ನೂ ಓದಿ | ಅವೈಜ್ಞಾನಿಕ ಬೆಂಗಳೂರು- ಮೈಸೂರು ಹೆದ್ದಾರಿ ಕಾಮಗಾರಿ ಸರಿಪಡಿಸಿ; ನಿತಿನ್ ಗಡ್ಕರಿಗೆ ಡಿಕೆ ಬದರ್ಸ್ ಮನವಿ
ವಿದ್ಯುತ್ ಬಿಲ್ ಕಟ್ಟುವುದೂ ಕಷ್ಟ
ಚನ್ನಪಟ್ಟಣ ಬೊಂಬೆಗಳು ಕೊಂಡುಕೊಳ್ಳುವವರ ಸಂಖ್ಯೆ ಕ್ಷೀಣಿಸಿದ್ದು, ಬಾಡಿಗೆ ಹಾಗೂ ವಿದ್ಯುತ್ ಬಿಲ್ ಕಟ್ಟುವುದಕ್ಕೂ ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇಲ್ಲಿನ ವ್ಯಾಪಾರಿಗಳು ಇದ್ದಾರೆ. ವೀಕೆಂಡ್‌ನಲ್ಲಿ ಭರ್ಜರಿ ವ್ಯಾಪಾರ ಆಗುತ್ತಿದ್ದ ಅಂಗಡಿಗಳಲ್ಲಿ ಈಗ ಆಗೊಬ್ಬ-ಈಗೊಬ್ಬರು ಎನ್ನುವಂತಾಗಿದೆ. ವ್ಯಾಪಾರವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಇದಕ್ಕೊಂದು ಪರ್ಯಾಯ ವ್ಯವಸ್ಥೆ ಆಗಬೇಕಿದೆ ಎಂದು ಬೊಂಬೆ ಅಂಗಡಿ ವ್ಯಾಪಾರಿ ಚನ್ನಪ್ಪ ಚಂಗಪ್ಪಗೌಡ ವಿಸ್ತಾರ ನ್ಯೂಸ್‌ಗೆ ತಿಳಿಸಿದ್ದಾರೆ.
ಬೋರ್ಡ್, ಫೋಟೊ ಹಾಕಿ
ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ರಸ್ತೆಗಳು ಬೇಕು. ಈ ರಸ್ತೆಗಳ ಪಕ್ಕದಲ್ಲಿಯೇ ನಮ್ಮ ಬದುಕನ್ನು ಕಟ್ಟಿಕೊಂಡಿದ್ದೇವೆ. ಇದನ್ನೇ ನಂಬಿಕೊಂಡು ಅನೇಕ ಕುಟುಂಬಗಳು ಜೀವನ ಮಾಡುತ್ತಿವೆ. ಆದರೆ, ಈಗ ಪ್ರವಾಸಿಗರು ದಶಪಥದಲ್ಲಿ ಹೋಗುವುದರಿಂದ ಇಲ್ಲಿನ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಇಂತಹ ದೊಡ್ಡ ಮೊತ್ತದ ಯೋಜನೆ ಮಾಡುವಾಗ ಪಾರಂಪರಿಕ ಕಲೆಯನ್ನು ಉಳಿಸುವ ನಿಟ್ಟಿನಲ್ಲಿಯೂ ಯೋಜನೆಗಳು ಆಗಬೇಕಿತ್ತು. ಈ ಭಾಗಕ್ಕೆ ದೊಡ್ಡ ಬೋರ್ಡ್‌ಗಳು, ಫೋಟೊಗಳ ಸಹಿತ ಇನ್ನಿತರ ಕ್ರಮಗಳನ್ನು ಕೈಗೊಂಡು ಪ್ರವಾಸಿಗರನ್ನು ಆಕರ್ಷಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಬೊಂಬೆ ಅಂಗಡಿ ವ್ಯಾಪಾರಿ ಮಾಲಿನಿ ವಿಸ್ತಾರ ನ್ಯೂಸ್‌ಗೆ ಹೇಳಿದರು.
ಅಲ್ಲಲ್ಲಿ ಸರಿಯಾದ ಎಂಟ್ರಿ ಮತ್ತು ಎಕ್ಸಿಟ್ ವ್ಯವಸ್ಥೆ ಮಾಡುವ ಕೆಲಸ ಆಗಬೇಕು. ರಸ್ತೆ ಕಾಮಗಾರಿ ಮುಗಿಯುವುದರೊಳಗೇ ತುರ್ತು ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳಬೇಕು. ಈಗಾಗಲೇ ರಸ್ತೆ ಪಕ್ಕದಲ್ಲಿದ್ದ ಅನೇಕ ಹೋಟೆಲ್‌ಗಳು ಬಾಗಿಲು ಮುಚ್ಚಿವೆ. ಬಿಡದಿ ತಟ್ಟೆ ಇಡ್ಲಿ ವ್ಯಾಪಾರವೂ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಧ್ಯಪ್ರವೇಶದ ಅವಶ್ಯಕತೆ ಇದೆ ಎಂಬ ಕೂಗು ಕೇಳಿಬರುತ್ತಿದೆ.
ಪ್ರಧಾನಿ ಮೋದಿ ಕೊಂಡಾಡಿದ್ದರು
ಚನ್ನಪಟ್ಟಣ ಬೊಂಬೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸಹ ಕೊಂಡಾಡಿದ್ದರು. ಈ ಆಟಿಕೆ ಗೊಂಬೆಗಳು ಜಗತ್ತಿನ ಎಲ್ಲ ಮಕ್ಕಳಿಗೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಉದ್ಯಮವನ್ನು ಜಾಗತಿಕ ಮಟ್ಟದಲ್ಲಿ ಕೊಂಡೊಯ್ಯಬೇಕು. ನಾನು ಇದಕ್ಕೆಲ್ಲ ಬೆಂಬಲವಾಗಿ ನಿಲ್ಲುತ್ತೇನೆ ಎಂದು ಇಂಡಿಯಾ ಟಾಯ್‌ಫೇರ್ – 2021ರಲ್ಲಿ ಹೇಳಿಕೆ ನೀಡಿದ್ದರು. ಈ ಸಂವಾದದಲ್ಲಿ ಚನ್ನಪಟ್ಟಣದ 6 ಕರಕುಶಲಕರ್ಮಿಗಳು ಭಾಗಿಯಾಗಿದ್ದರು.
ಸೂಕ್ತ ವ್ಯವಸ್ಥೆಗಾಗಿ ಎದ್ದ ಕೂಗು
ಈ ಕಲೆಗೆ ಬೆಲೆ ಸಿಗಬೇಕಿದೆ. ಇವುಗಳನ್ನು ಸಿದ್ಧಪಡಿಸುವ ಕರಕುಶಲಕರ್ಮಿಗಳ ಅಭ್ಯುದಯಕ್ಕಾಗಿ ಸರ್ಕಾರ ಸಮರ್ಪಕ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅಲ್ಲದೆ, ಪ್ರವಾಸೋದ್ಯಮಕ್ಕೆಂದೇ ಪ್ರತ್ಯೇಕ ಕ್ರಮಗಳನ್ನು ಕೈಗೊಳ್ಳಬೇಕು. ಜಾಗತಿಕ ಮಟ್ಟದಲ್ಲಿ ಚನ್ನಪಟ್ಟಣ ಗೊಂಬೆ ಸಿಗುವ ನಿಟ್ಟಿನಲ್ಲಿ ತುರ್ತು ಕ್ರಮವಹಿಸಬೇಕು ಎಂಬ ಆಗ್ರಹಗಳು ಕೇಳಿಬಂದಿವೆ.
ಇದನ್ನೂ ಓದಿ | Dasara Shopping Trend | ಮಾರುಕಟ್ಟೆಗೆ ಲಗ್ಗೆ ಇಟ್ಟ ಟ್ರೆಂಡಿ ದಸರಾ ಗೊಂಬೆಗಳು