Site icon Vistara News

ಒಣ ದ್ರಾಕ್ಷಿ ಖರೀದಿಸಿ ಕೈಕೊಟ್ಟಿದ್ದ ಗುಜರಾತ್‌ ಖದೀಮರಿಗೆ ಹುಳಿ ದ್ರಾಕ್ಷಿ ತಿನ್ನಿಸಿದ ಗುಮ್ಮಟನಗರಿ ಪೊಲೀಸರು

ಒಣ ದ್ರಾಕ್ಷಿ

ವಿಜಯಪುರ: ಜಿಲ್ಲೆಯ ರೈತರು ಹಾಗೂ ಸ್ಥಳೀಯ ವ್ಯಾಪಾರಿಗಳನ್ನು ನಂಬಿಸಿ ಅವರಿಂದ ನೂರು ಟನ್‌ಗೂ ಅಧಿಕ ಒಣ ದ್ರಾಕ್ಷಿ ಖರೀದಿಸಿ ಕೋಟ್ಯಂತರ ರೂಪಾಯಿ ವಂಚಿಸಿ ಪರಾರಿಯಾಗಿದ್ದ ಗುಜರಾತ್‌ ಗ್ಯಾಂಗ್‌ನ ಪ್ರಕರಣ ಭೇದಿಸುವಲ್ಲಿ ಇಲ್ಲಿನ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೇ ತಿಂಗಳಲ್ಲಿ ೧೧೭ ಟನ್‌ ಒಣ ದ್ರಾಕ್ಷಿ ಖರೀದಿಸಿ ನಾಪತ್ತೆಯಾಗಿದ್ದವರ ತಂಡದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿರುವ ಗುಮ್ಮಟನಗರಿ ಪೊಲೀಸರು, ಸದ್ಯ ಆತನನ್ನು ಮಾಲು ಸಮೇತ ವಿಜಯಪುರಕ್ಕೆ ವಾಪಸ್‌ ಕರೆತಂದಿದ್ದಾರೆ.

ಏನಿದು ಪ್ರಕರಣ?

ಈ ಪ್ರಕರಣದ ಹಿಂದೆ ಆಸಕ್ತಿದಾಯಕ ಅಂಶವಿದೆ. ಈಗ ವಂಚನೆ ಮಾಡಿರುವ ಗುಜರಾತ್‌ನ ಅಹಮದಾಬಾದ್ ವ್ಯಾಪಾರಿಗಳ ತಂಡವು ಇದಕ್ಕಾಗಿ ಒಂದು ವರ್ಷಗಳ ಕಾಲ ಶ್ರಮವಹಿಸಿದ್ದಾರೆ. ಅಂದರೆ, ಮೊದ ಮೊದಲು ವಿಜಯಪುರ ರೈತರು ಮತ್ತು ವ್ಯಾಪಾರಿಗಳಿಂದ ಹಣ ಕೊಟ್ಟು ಅಲ್ಪ ಪ್ರಮಾಣದಲ್ಲಿ ಒಣ ದ್ರಾಕ್ಷಿ ಖರೀದಿಸುತ್ತಿದ್ದರು. ಕೆಲವೊಮ್ಮೆ ಸ್ವಲ್ಪ ಹೆಚ್ಚಿನ ಹಣವನ್ನೂ ನೀಡಿ ಅವರ ವಿಶ್ವಾಸ ಹಾಗೂ ನಂಬಿಕೆಯನ್ನು ಗಳಿಸಿದ್ದರು. ಹೀಗೇ ಮಾಡುತ್ತಾ ಕಳೆದ ಮೇ ತಿಂಗಳಿನಲ್ಲಿ ದೊಡ್ಡ ಪ್ರಮಾಣದಲ್ಲಿ ಒಣ ದ್ರಾಕ್ಷಿಯನ್ನು ಖರೀದಿ ಮಾಡಿದ್ದಾರೆ. ಅಂದರೆ ಬರೋಬ್ಬರಿ ೨.೨ ಕೋಟಿ ರೂಪಾಯಿ ಮೌಲ್ಯದ ೧೧೭ ಟನ್‌ನಷ್ಟು ಒಣ ದ್ರಾಕ್ಷಿ ಖರೀದಿ ಮಾಡಿದ್ದು, ಎಂದಿನ ಮಾತಿನಂತೆ 40 ದಿನದೊಳಗೆ ಹಣ ಕೊಡುವುದಾಗಿ ಹೇಳಿ ಗುಜರಾತ್‌ನತ್ತ ಕಾಲ್ಕಿತ್ತಿದ್ದಾರೆ.

ಇದನ್ನೂ ಓದಿ | ಕರಗಿದ ದ್ರಾಕ್ಷಿ, ಒಡೆದ ದಾಳಿಂಬೆ: ನಿರಂತರ ಮಳೆಗೆ ತೋಟಗಾರಿಕೆ ಬೆಳೆಗಾರರು ಸಂಕಷ್ಟ

ಜುಲೈ ೧ರಂದು ಎಫ್‌ಐಆರ್

ರೈತರು ಮತ್ತು ವ್ಯಾಪಾರಿಗಳಿಗೆ ನಂಬಿಸಿ ಒಣ ದ್ರಾಕ್ಷಿ ಖರೀದಿಸಿ ಗುಜರಾತ್‌ಗೆ ತೆರಳಿದ್ದ ವ್ಯಾಪಾರಿಗಳಿಂದ ೪೦ ದಿನ ಕಳೆದರೂ ಯಾವುದೇ ಉತ್ತರ ಬರಲಿಲ್ಲ. ಬಳಿಕ ಕೇಳಿದರೆ ಇಂದು, ನಾಳೆ ಎಂದು ಹೇಳುವ ಮೂಲಕ ಸತಾಯಿಸುತ್ತಿದ್ದರು. ಗಟ್ಟಿಯಾಗಿ ಹಣ ಕೇಳಿದ ರೈತರಿಗೆ ಬೆದರಿಕೆ ಹಾಕುತ್ತಿದ್ದರು. ಇದರಿಂದ ಬೇಸತ್ತ ಸಿದ್ದಸಿರಿ ಕೋಲ್ಡ್ ಸ್ಟೋರೇಜ್ ಮ್ಯಾನೇಜರ್ ಸಂತೋಷ್ ಕುಮಾರ್ ಗುಂಜಟಗಿ, ಜಾಕೀರ್ ಬಾಗವಾನ್, ತೌಫಿಕ್ ಅಂಗಡಿ, ಅಬ್ದುಲ್ ಖಾದರ್ ತಹಶೀಲ್ದಾರ್ ಎಂಬುವವರು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದೂರು ‌ಜುಲೈ ೧ರಂದು ದೂರು ದಾಖಲಿಸಿದ್ದರು.

ಅಹಮದಾಬಾದ್‌ನಲ್ಲಿ ಬೀಡುಬಿಟ್ಟಿದ್ದ ತಂಡ

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಜಿಲ್ಲಾ ಪೊಲೀಸ್ ಇಲಾಖೆ, ಹೆಚ್ಚುವರಿ ಎಸ್ಪಿ ರಾಮ್ ಅರಸಿದ್ಧಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದ ಸಂದರ್ಭದಲ್ಲಿ ಜಿಲ್ಲೆಯ ತಿಡಗುಂದಿಯಲ್ಲಿ ಪ್ರಕರಣದ ಪ್ರಮುಖ ಆರೋಪಿ ಕೃನಾಲ್‌ ಕುಮಾರ್ ಪಟೇಲ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮಾಹಿತಿಯನ್ನು ಬಾಯಿಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಆತನೊಂದಿಗೆ ಗುಜರಾತ್‌ಗೆ ತೆರಳಿದ ಪೊಲೀಸರ ತಂಡ ಅಹಮದಾಬಾದ್‌ನಲ್ಲಿ ಬೀಡುಬಿಟ್ಟು ನಾಲ್ಕೈದು ದಿನಗಳಲ್ಲೇ ಪ್ರಕರಣವನ್ನು ಭೇದಿಸಿದ್ದಾರೆ. ಅಲ್ಲಿಂದ 8 ಲಾರಿ ಮೂಲಕ ಕೋಟ್ಯಂತರ ಮೌಲ್ಯದ ಒಣದ್ರಾಕ್ಷಿಯನ್ನು ವಿಜಯಪುರಕ್ಕೆ ತಂದಿದ್ದಾರೆ.

ಉಳಿದ ಆರೋಪಿಗಳಿಗೆ ಶೋಧ

ಈ ಪ್ರಕರಣದಲ್ಲಿ ಅಹಮದಾಬಾದ್ ಮೂಲದ ಪ್ರಮುಖ ಆರೋಪಿ ಕೃನಾಲ್‌ ಕುಮಾರ್ ಪಟೇಲ್‌ ಈಗಾಗಲೇ ಬಂಧನಕ್ಕೊಳಗಾಗಿದ್ದು, ಉಳಿದ ಆರೋಪಿಗಳಾದ ಗುಜರಾತ್, ರಾಜಸ್ಥಾನ ಮೂಲದ ಕಮಲಕುಮಾರ ಸೋಹನ್ ಲಾಲ್, ನೀಲ್ ಪಟೇಲ್, ರೋಣಿ ಕುಮಾರ್ ಪಟೇಲ್, ಭರತ್ ಬಾಯಿ ಪಟೇಲ್, ಪಿಂಕೇಶ್ ಪಟೇಲ್, ಸಚಿನ್, ಸುನೀಲ್, ಜಯೇಶ್ ಎಂಬುವವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಇದನ್ನೂ ಓದಿ | Earthquake in Karnataka |ವಿಜಯಪುರ, ಕೊಡಗು, ಮಂಗಳೂರಿನಲ್ಲಿ ಮತ್ತೆ ಅದುರಿದ ಭೂಮಿ

Exit mobile version