ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election 2023) ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚೆಕ್‌ಪೋಸ್ಟ್‌ಗಳಲ್ಲಿ ವಾಹನ ತಪಾಸಣೆ ಚುರುಕುಗೊಂಡಿದೆ. ಚುನಾವಣಾ ಅಕ್ರಮವನ್ನು ತಪ್ಪಿಸುವ ಸಂಬಂಧ ಹೊಸ ಹೊಸ ಚೆಕ್‌ಪೋಸ್ಟ್‌ಗಳನ್ನೂ ತೆರೆಯಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಕಣ್ತಪ್ಪಿ ದಾಖಲೆ ಇಲ್ಲದ ವಸ್ತುಗಳು ಸಾಗಾಟವಾಗಬಾರದು ಎಂಬ ನಿಟ್ಟಿನಲ್ಲಿ ಚುನಾವಣಾ ಆಯೋಗ ಕಟ್ಟೆಚ್ಚರ ವಹಿಸಿದೆ. ಈ ಹಿನ್ನೆಲೆಯಲ್ಲಿ ಕಡಲ ತಡಿಯಲ್ಲಿಯೂ ತೀವ್ರ ನಿಗಾ ತಪಾಸಣೆಯನ್ನು ನಡೆಸಲಾಗುತ್ತಿದೆ. ಶನಿವಾರ (ಏ.1) ಶಿವಮೊಗ್ಗ, ತುಮಕೂರು, ವಿಜಯನಗರ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಹಾಗೂ ದಾಸ್ತಾನು ಮಾಡಿದ್ದ ನಗದು, ಸೀರೆ, ಮದ್ಯ ಸೇರಿ 4.91 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗದಲ್ಲಿ 4.5 ಕೋಟಿ ರೂ. ಮೌಲ್ಯದ ಸೀರೆಗಳ ಜಪ್ತಿ
ಶಿವಮೊಗ್ಗ: ಜಿಲ್ಲೆಯ 4 ಕಡೆ ಪೊಲೀಸರು ದಾಳಿ ನಡೆಸಿ ದೊಡ್ಡ ಪ್ರಮಾಣದಲ್ಲಿ ಸೀರೆ, ಅಕ್ಕಿ ಹಾಗೂ ನಗದನ್ನು ವಶಕ್ಕೆ ಪಡೆದಿದ್ದಾರೆ. ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ 4.5 ಕೋಟಿ ರೂ. ಮೌಲ್ಯದ ಸೀರೆಗಳನ್ನು ಜಪ್ತಿ ಮಾಡಲಾಗಿದೆ. ಹಾಗೆಯೇ ತುಂಗಾನಗರ ಠಾಣಾ ವ್ಯಾಪ್ತಿಯಲ್ಲಿ 1.40 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಬುಲೆರೋ ವಾಹನದಲ್ಲಿ ಸಾಗಿಸುತ್ತಿದ್ದ 20 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ.
ವಿನೋಬನಗರ ಠಾಣಾ ವ್ಯಾಪ್ತಿಯಲ್ಲಿ ಲಾರಿಯಲ್ಲಿ ಸಾಗಿಸುತ್ತಿದ್ದ 1.56 ಲಕ್ಷ ರೂ ಮೌಲ್ಯದ 26 ಕ್ವಿಂಟಾಲ್ ಅಕ್ಕಿಯನ್ನು (100 ಬ್ಯಾಗ್) ವಶಕ್ಕೆ ಪಡೆಯಲಾಗಿದೆ. ಅದೇ ರೀತಿ ನಗರದ ಕೆ.ಆರ್.ಪುರಂ ರಸ್ತೆಯಲ್ಲಿರುವ ಡಿಲಕ್ಸ್ ಲಾಜಿಸ್ಟಿಕ್ ಗೋದಾಮಿನಲ್ಲಿ ದೊಡ್ಡ ಪ್ರಮಾಣದ ಸೀರೆಗಳು ಪತ್ತೆಯಾಗಿವೆ. ಕಳೆದ ಎರಡು ತಿಂಗಳಿನಿಂದ ಸೀರೆಗಳಲ್ಲಿ ಯಾರೂ ತೆಗೆದುಕೊಂಡು ಹೋಗಿರಲಿಲ್ಲ ಎನ್ನಲಾಗಿದೆ. ದೊಡ್ಡಪೇಟೆ ಪೊಲೀಸರು ದಾಳಿ ನಡೆಸಿದಾಗ ಸೀರೆಗಳು ಪತ್ತೆಯಾಗಿವೆ.
ಶಿವಮೊಗ್ಗದ ದೇವಬಾಳ-ಯಡವಾಳ ಬಳಿ ಅಬಕಾರಿ ಇಲಾಖೆ ಸಿಬ್ಬಂದಿ ದಾಳಿ ನಡೆಸಿ, ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ ವಿವಿಧ ಬ್ರ್ಯಾಂಡ್‌ನ 3,21,939 ರೂಪಾಯಿ ಮೌಲ್ಯದ ಮದ್ಯವನ್ನು ವಶಕ್ಕೆ ಪಡೆದು, ಒಬ್ಬರನ್ನು ಬಂಧಿಸಲಾಗಿದೆ. ಗಿರೀಶ್ ನಾಯ್ಕ ಎಂಬುವವರನ್ನು ವಶಕ್ಕೆ ಪಡೆದು ಕಾರು ಸಮೇತ ಮದ್ಯವನ್ನು ಜಪ್ತಿ ಮಾಡಿದ್ದಾರೆ.
ಶಿವಮೊಗ್ಗ ತಾಲೂಕಿನ ಗಾಜನೂರಿನ ಚೆಕ್ ಪೋಸ್ಟ್‌ನಲ್ಲಿ 4 ಲಕ್ಷ ರೂಪಾಯಿಗಳನ್ನು ಪೊಲೀಸರು ಜಪ್ತಿ ಮಾಡಿ, ತೀರ್ಥಹಳ್ಳಿ ತಾಲೂಕಿನ ಬೇಗುವಳ್ಳಿ ನಿವಾಸಿ ಮುನ್ನಸಿಫ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿ ಹಣ ಸಾಗಾಟ ಮಾಡುತ್ತಿದ್ದಾಗ ತುಂಗನಗರ ಪೊಲೀಸರು ಹಣ ಹಾಗೂ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
6.84 ಲಕ್ಷ ರೂ. ಮೌಲ್ಯದ ಇನ್ವರ್ಟರ್ ಲ್ಯಾಂಪ್, ಎಲ್.ಇ.ಡಿ ಬಲ್ಬ್ ವಶಕ್ಕೆ
ತುಮಕೂರು: ಮತದಾರರಿಗೆ ಹಂಚಲು ಸಾಗಿಸುತ್ತಿದ್ದ 6,84,001 ರೂಪಾಯಿ ಮೌಲ್ಯದ ಇನ್ವರ್ಟರ್ ಲ್ಯಾಂಪ್ ಹಾಗೂ ಎಲ್‌ಇಡಿ ಬಲ್ಬ್‌ಗಳನ್ನು ತಿಪಟೂರು ತಾಲೂಕಿನ ಬಂಡಿಹಳ್ಳಿ ಗೇಟ್ ಬಳಿ ಚುನಾವಣಾ ಸಂಚಾರಿ ಜಾಗೃತ ದಳ ವಶಕ್ಕೆ ಪಡೆದಿದೆ. ಕೆ.ಎ 25. ಬಿ 2160 ಸರಕು ವಾಹನದಲ್ಲಿ ಇನ್ವರ್ಟರ್ ಲ್ಯಾಂಪ್ ಹಾಗೂ ಎಲ್‌ಇಡಿ ಬಲ್ಬ್‌ಗಳನ್ನು ಸಾಗಿಸಲಾಗುತ್ತಿತ್ತು. ಸಮರ್ಪಕ ವಿಳಾಸ ಇಲ್ಲದ ಕಾರಣ ವಾಹನವನ್ನು ಸಂಚಾರಿ ಜಾಗೃತ ದಳ ಸಿಬ್ಬಂದಿ ವಶಕ್ಕೆ ಪಡೆದಿದೆ.
ಎಲೆಕ್ಟ್ರಾನಿಕ್ ವಸ್ತುಗಳನ್ನು ಬೆಂಗಳೂರಿನಿಂದ ತಿಪಟೂರಿನ ಅಸ್ಪಷ್ಟ ವಿಳಾಸ #532/337, 4ನೇ ಮುಖ್ಯರಸ್ತೆ, ಕೆ.ಆರ್ ಬಡಾವಣೆಗೆ ಸಾಗಿಸಲಾಗುತ್ತಿತ್ತು. ವಾಹನದಲ್ಲಿ 10 ಬಾಕ್ಸ್ ಇನ್ವರ್ಟರ್ ಲ್ಯಾಂಪ್, 60 ಬಾಕ್ಸ್ (720 ಬಲ್ಬ್) ಇದ್ದವು. ಸಂಚಾರಿ ಜಾಗೃತ ದಳದ ಚುನಾವಣಾ ಅಧಿಕಾರಿ ಎಚ್.ಆರ್ ಚಂದ್ರಶೇಖರ್ ನೇತೃತ್ವದಲ್ಲಿ ನಡೆದ ತಪಾಸಣೆ ವೇಳೆ ಲಾರಿ ಚಾಲಕ ರೇಣುಕಯ್ಯ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ಬೊಲೆರೋ ವಾಹದಲ್ಲಿ 5.26 ಲಕ್ಷ ರೂಪಾಯಿ ಪತ್ತೆ
ವಿಜಯನಗರ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5,26,900 ರೂ.ಗಳನ್ನು ಪೊಲೀಸರು ಹಾಗೂ ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಚಿಕ್ಕಬಳ್ಳಾಪುರ ಮೂಲದ ಬೊಲೆರೊ ಗೂಡ್ಸ್ ವಾಹನವನ್ನು ಪರಿಶೀಲನೆ ನಡೆಸಿದಾಗ ಹಣ ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 50ರ ಚೆಕ್‌ಪೋಸ್ಟ್‌ನಲ್ಲಿ ಐದು ಜನ ತೆರಳುತ್ತಿದ್ದ ವಾಹನದಲ್ಲಿ ಹಣ ಪತ್ತೆಯಾಗಿದ್ದು, ನರಸೇಗೌಡ ಎಂಬುವವರ ವಿರುದ್ಧ ಕಾನಾಹೊಸಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರವಾರದ ಬಳಿ ದೋಣಿಯಲ್ಲಿ ಸಾಗಿಸುತ್ತಿದ್ದ 2.90 ಲಕ್ಷ ಮೌಲ್ಯದ ವಸ್ತುಗಳ ವಶ
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಬೋಟ್‌ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವಾ ಮದ್ಯ ಸೇರಿ 2.90 ಲಕ್ಷ ಮೌಲ್ಯದ ವಸ್ತುಗಳನ್ನು ಕರಾವಳಿ ಕಾವಲುಪಡೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತಾಲೂಕಿನ ಮಾಜಾಳಿಯ ಬಾವಳ್ ಬಳಿ ಗೋವಾದಿಂದ ಬೋಟ್ ಮೂಲಕ ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಗೋವಾ ಮದ್ಯವನ್ನ ಸಾಗಾಟ ಮಾಡಲಾಗುತ್ತಿತ್ತು.
ವಿಧಾನಸಭಾ ಚುನಾವಣೆ ಹಿನ್ನೆಲೆ ಅಲರ್ಟ್ ಆಗಿರುವ ಕರಾವಳಿ ಕಾವಲುಪಡೆ, ಕರಾವಳಿಯಲ್ಲಿ ಅಕ್ರಮ ಸಾಗಾಟದ ಮೇಲೆ ಹದ್ದಿನಕಣ್ಣಿರಿಸಿದೆ. ಅದರಂತೆ ಸಿಎಸ್‌ಪಿ ಇನ್ಸ್‌ಪೆಕ್ಟರ್ ನಿಶ್ಚಲ್‌ಕುಮಾರ ನೇತೃತ್ವದ ತಂಡ ದಾಳಿ ನಡೆಸಿದಾಗ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದವರು ಬೋಟು ಬಿಟ್ಟು ಪರಾರಿಯಾಗಿದ್ದಾರೆ.
ಬೋಟ್‌ನಲ್ಲಿ 63,360 ರೂಪಾಯಿ ಮೌಲ್ಯದ 576 ಬಾಟಲ್ ಗೋವಾ ಫೆನ್ನಿ, 8,400 ರೂಪಾಯಿ ಮೌಲ್ಯದ 70 ಬಾಟಲ್ ಕ್ಯಾಶ್ಯು ಫೆನ್ನಿ, 58,080 ರೂಪಾಯಿ ಮೌಲ್ಯದ 528 ಬಾಟಲ್ ಗೋವಾ ವಿಸ್ಕಿ, 21 ಸಾವಿರ ಮೌಲ್ಯದ 35 ಲೀಟರ್‌ನ 6 ಕ್ಯಾನ್ ಉರಾಕ್ ಸೇರಿ 1,50,840 ಮೌಲ್ಯದ ಗೋವಾ ಮದ್ಯ ಪತ್ತೆಯಾಗಿದೆ.
ಅಕ್ರಮ ಮದ್ಯ ಸಾಗಾಟಕ್ಕೆ ಬಳಸಿದ್ದ 75 ಸಾವಿರ ಮೌಲ್ಯದ ಬೋಟು, 65 ಸಾವಿರ ಮೌಲ್ಯದ ಎಂಜಿನ್ ಸೇರಿ ಒಟ್ಟು 2,90,840 ರೂಪಾಯಿ ಮೌಲ್ಯದ ವಸ್ತುಗಳನ್ನು ಕರಾವಳಿ ಕಾವಲುಪಡೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕಾರವಾರ ಕರಾವಳಿ ಕಾವಲುಪಡೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬೋಟ್ ಮಾಲೀಕರ ಕುರಿತು ಮಾಹಿತಿ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ
ಕಲಬುರಗಿಯಲ್ಲಿ 42 ಚೆಕ್‌ಪೋಸ್ಟ್ ಸ್ಥಾಪನೆ
ಕಲಬುರಗಿ: ಚುನಾವಣೆ ಹಿನ್ನೆಲೆಯಲ್ಲಿ ವಾಹನ ತಪಾಸಣೆ ನಡೆಸಲು ಜಿಲ್ಲೆಯಲ್ಲಿ ಒಟ್ಟು 42 ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಮಹಾರಾಷ್ಟ್ರ ಹಾಗೂ ತೆಲಂಗಾಣದ ಅಂತರರಾಜ್ಯ ಗಡಿಗಳಲ್ಲಿ 8 ಕಡೆ ಚೆಕ್‌ಪೋಸ್ಟ್ ಸ್ಥಾಪನೆ ಮಾಡಲಾಗಿದೆ. ಹಾಗೆಯೇ ಕಲಬುರಗಿ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ 10 ಚೆಕ್‌ಪೋಸ್ಟ್ ಅನ್ನು ತೆರೆಯಲಾಗಿದೆ.
ಕೆಲವೊಂದು ಕಡೆ ಕಾಟಾಚಾರಕ್ಕೆ ಚೆಕ್‌ಪೊಸ್ಟ್ ಸ್ಥಾಪನೆ ಮಾಡಲಾಗಿದ್ದು, ಪೊಲೀಸರು ಸ್ಥಳದಲ್ಲಿದ್ದರೂ ವಾಹನ ತಪಾಸಣೆ ಮಾಡದೆ ಹಾಗೇ ಬಿಡುತ್ತಿರುವುದು ಕಂಡಬಂದಿದೆ. ಕಲಬುರಗಿ ವಿಶ್ವವಿದ್ಯಾಲಯ ಗೇಟ್ ಬಳಿ ಸ್ಥಾಪಿಸಿದ ಚೆಕ್‌ಪೋಸ್ಟ್‌ನಲ್ಲಿ ಮಾಧ್ಯಮಗಳ ಕ್ಯಾಮೆರಾ ಕಾಣುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ.