ಮೈಸೂರು: ಅತಿವೃಷ್ಟಿಯಿಂದ ರಾಜ್ಯದಲ್ಲಿ ಅಪಾರ ಹಾನಿ ಸಂಭವಿಸಿದೆ. ಸಂಕಷ್ಟದ ಕಾಲದಲ್ಲಿ ಜನರೊಂದಿಗೆ ಸರ್ಕಾರ ನಿಂತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರನ್ನೂ ತೊಡಗಿಸಿಕೊಂಡು ಹಾಗೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮಳೆ ಹಾನಿ ಪರಿಶೀಲನೆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಪ್ರವಾಸ ಕೈಗೊಂಡಿರುವ ಅವರು, ಮಂಗಳವಾರ ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ. ಉಡುಪಿಯಲ್ಲಿ ಸಚಿವ ಎಸ್. ಅಂಗಾರ, ಮಂಗಳೂರಿನಲ್ಲಿ ಸುನೀಲ್ ಕುಮಾರ್, ಉತ್ತರ ಕನ್ನಡದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಎಸ್.ಟಿ ಸೋಮಶೇಖರ್ ಅವರು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂದಾಯ ಸಚಿವ ಆರ್.ಅಶೋಕ್ ಕೊಡಗು, ಮಂಗಳೂರಿಗೆ ಹೋಗಿ ಬಂದಿದ್ದಾರೆ ಎಂದರು.
ಇಡೀ ಸರ್ಕಾರವೇ ಮಳೆ ಪರಿಹಾರ ಕಾರ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾನೂ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಅಗತ್ಯ ಸಲಹೆ ಸೂಚನೆಗಳನ್ನು ಅಧಿಕಾರಿಗಳಿಗೆ ನೀಡಲಿದ್ದೇನೆ ಎಂದರು. ಕೊಡಗಿನಲ್ಲಿ ಮಳೆಯಿಂದ ಪ್ರಾಣ ಮತ್ತು ಆಸ್ತಿ ಹಾನಿಯಾಗಿರುವ ಪ್ರದೇಶಗಳಲ್ಲಿ ಜನರಿಗೆ ಧೈರ್ಯ ತುಂಬಲಾಗುತ್ತದೆ. ಸೆಸ್ಮಿಕ್ (ಭೂಕಂಪನ ಸಾಧ್ಯತೆಯ ಪ್ರದೇಶ) ವಲಯಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದರು.
ಇದನ್ನೂ ಓದಿ | Rain News | ರಾಜ್ಯದ ಹಲವೆಡೆ ಮುಂದುವರಿದ ಮಳೆ: ಶಾಲಾ ಕಟ್ಟಡ ಕುಸಿತ, ಆಕಳು-ಕರುಗಳ ಸಾವು
ಪ್ರಾಥಮಿಕ ಸಮೀಕ್ಷೆ: ಮಳೆಯಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಕೆಲವು ಕಡೆ ಭೂ ಕುಸಿತವಾಗಿದ್ದು, ಕೊಡಗಿನಲ್ಲಿ ಭೂಕಂಪ, ಕರಾವಳಿಯಲ್ಲಿ ಕಡಲ್ಕೊರೆತವಾಗಿದ್ದು, ಉತ್ತರ ಕರ್ನಾಟಕದಲ್ಲಿ ನದಿ ಪಕ್ಕದಲ್ಲಿರುವ ಮನೆಗಳಿಗೆ ಹಾನಿಯಾಗಿವೆ. ಅಲ್ಲಲ್ಲಿ ಜಲಾಶಯಗಳಿಂದ ನೀರು ಹೊರಬಿಟ್ಟ ಸಂದರ್ಭಗಳಲ್ಲಿ ಬೆಳೆ ಹಾನಿಯಾಗಿದೆ. ಈ ಬಗ್ಗೆ ಪ್ರಥಮ ಹಂತದ ಸಮೀಕ್ಷೆಯಾಗಿದ್ದು, ನಿಖರ ಮಾಹಿತಿ ನೀಡಲಾಗುವುದು ಎಂದರು.
ಎನ್‌ಡಿಆರ್‌ಎಫ್‌ನಲ್ಲಿ 730 ಕೋಟಿ ರೂ.ಗಳು ಲಭ್ಯ: ಬೆಳೆ ಹಾನಿ ಅಂದಾಜು ಮಾಡಿದ ನಂತರ ಕೇಂದ್ರದಿಂದ ಪರಿಹಾರ ಕೇಳುವ ಬಗ್ಗೆ ತೀರ್ಮಾನಿಸಲಾಗುವುದು. ಎನ್.ಡಿ.ಆರ್.ಎಫ್‌ನಲ್ಲಿ 730 ಕೋಟಿ ರೂ.ಗಳು ಲಭ್ಯವಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ಅನುದಾನದ ಕೊರತೆ ಇಲ್ಲ ಎಂದರು.
ನದಿ ಪಾತ್ರಗಳಲ್ಲಿನ ಗ್ರಾಮಗಳ ಸುರಕ್ಷತೆಗೆ ಕ್ರಮ: ಉತ್ತರ ಕರ್ನಾಟಕದಲ್ಲಿ 63 ಊರುಗಳನ್ನು ಸ್ಥಳಾಂತರಿಸಲಾಗಿದೆ. ಕೆಲವು ಕಡೆ ಜನರು ಸ್ಥಳಾಂತರವಾಗಿಲ್ಲ. ವಿಶೇಷವಾಗಿ ನದಿ ಪಾತ್ರಲ್ಲಿರುವ ಗ್ರಾಮಗಳಲ್ಲಿನ ಮನೆಗಳನ್ನು ಸ್ಥಳಾಂತರ ಮಾಡಿ ಸುರಕ್ಷಿತಗೊಳಿಸಲು ತಜ್ಞರ ಅಭಿಪ್ರಾಯ ಕೇಳಲಾಗಿದೆ. ಆ ಪ್ರಕಾರ ವಿಶೇಷವಾದ ಯೋಜನೆಗಳನ್ನು ರೂಪಿಸಲಾಗುವುದು ಎಂದು ಸಿಎಂ ತಿಳಿಸಿದರು.
ನಿಗಮ ಮಂಡಳಿಗಳಲ್ಲಿ ಹೊಸಬರಿಗೆ ಅವಕಾಶ
ನಿಗಮ ಮಂಡಳಿಗಳ ಕೋರ್ ಸಮಿತಿಯಲ್ಲಿ ಒಂದೂವರೆ ವರ್ಷ ಮೇಲ್ಪಟ್ಟವರನ್ನು ತೆಗೆದು ಹೊಸಬರಿಗೆ ಅವಕಾಶ ನೀಡಬೇಕು ಎನ್ನುವ ತೀರ್ಮಾನವಾಗಿದೆ. ಬೇರೆಯವರಿಗೂ ಅವಕಾಶ ಒದಗಿಸಲಾಗುತ್ತಿದೆ ಎಂದರು. ಬೆಂಗಳೂರಿನ ಚಾಮರಾಜಪೇಟೆ ಬಂದ್ ವಿಚಾರ ಪ್ರತಿಕ್ರಿಯಿಸಿ, ಆ ವಿಚಾರವನ್ನು ಸ್ಥಳೀಯ ಅಧಿಕಾರಿಗಳೇ ನೋಡಿಕೊಳ್ಳುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ | Rain News | ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ ಇಂದು