Site icon Vistara News

CM Bommai | ಹಿರಿಯ ನಾಗರಿಕರ ಆರೋಗ್ಯ ಬಹಳ ಮುಖ್ಯ, ಸೇವಾ ಭತ್ಯೆ ಹೆಚ್ಚಳ: ಸಿಎಂ

ಹಿರಿಯ ನಾಗರಿಕರ

ಬೆಂಗಳೂರು: ಆರೋಗ್ಯ ಬಹಳ ಮುಖ್ಯ, ಆರೋಗ್ಯ ಗಟ್ಟಿಯಾಗಿದ್ದರೆ ಎಲ್ಲ ಕೆಲಸಗಳನ್ನು ಮಾಡಬಹುದು. ಹೀಗಾಗಿ ಹಿರಿಯರ ಆರೋಗ್ಯಕ್ಕಾಗಿ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಹಿರಿಯ ನಾಗರಿಕರ ಸೇವಾಭತ್ಯೆಯನ್ನು ಹೆಚ್ಚಳ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Basavaraj Bommai) ಹೇಳಿದರು.

ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ವಿಕಲಚೇತನ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಹಿರಿಯ ನಾಗರಿಕರ ಮಾಸಾಶನವನ್ನು ನಾನು ಮುಖ್ಯಮಂತ್ರಿಯಾದ ನಾಲ್ಕು ಗಂಟೆಯಲ್ಲಿ ಹೆಚ್ಚಳ ಮಾಡಿದ್ದೇನೆ. ಅಂಗವಿಕಲರ ಮಾಸಾಶನ ಹೆಚ್ಚಿಗೆ ಮಾಡಿದ್ದೇನೆ. ಆರೋಗ್ಯ ಇಲಾಖೆಯಿಂದ 60 ವರ್ಷ ಆದವರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ವರ್ಷದಲ್ಲಿ ಎರಡು ಬಾರಿ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ | 5G Service Launch | ಮೊದಲ ಹಂತದಲ್ಲಿ ಬೆಂಗಳೂರಲ್ಲೂ 5ಜಿ ಲಭ್ಯ ಇದೆಯಾ?

ರಾಜ್ಯದಲ್ಲಿ ಉಚಿತವಾಗಿ ಕಣ್ಣಿನ ತಪಾಸಣೆಯನ್ನು ಮಾಡುತ್ತಿದ್ದೇವೆ. ಈ ಸಂದರ್ಭದಲ್ಲಿ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ನೀಡುವ ಮೂಲಕ ದೃಷ್ಟಿ ಸಮಸ್ಯೆ ನಿವಾರಣೆಗೆ ಕಾರ್ಯಕ್ರಮ ರೂಪಿಸಿದ್ದೇವೆ. ಕಿವಿ ಕೇಳಿಸದ ಹಿರಿಯ ನಾಗರಿಕರಿಗೆ 500 ಕೋಟಿ ರೂ. ವೆಚ್ಚದಲ್ಲಿ ಕಾಕ್ಲಿಯರ್ ಇಂಪ್ಲಾಂಟ್ ನೀಡುವ ಕಾರ್ಯಕ್ರಮ ಮಾಡಿದ್ದೇವೆ. ವಯಸ್ಸಾದ ಮೇಲೆ ಡಯಾಲಿಸಿಸ್ ಗೆ ಹಿರಿಯರು ಹೋಗುತ್ತಾರೆ. ಹಿರಿಯ ನಾಗರಿಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲು ಹೇಳಿ ಅವರು, 30 ಸಾವಿರ ಸೈಕಲ್ ಇತ್ತು. ಅದನ್ನು 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಕ್ಯಾನ್ಸರ್ ಕೀಮೋಥೆರಪಿ ಎರಡು ಪಟ್ಟು ಹೆಚ್ಚಿಸಿದ್ದೇವೆ. 12 ಹೊಸ ಕ್ಯಾನ್ಸರ್ ಕೇಂದ್ರಗಳನ್ನು ಪ್ರಾರಂಭ ಮಾಡುತ್ತಿದ್ದೇವೆ ಎಂದರು.

ನಮ್ಮ ಬದುಕಿನಲ್ಲಿ ನಾವು ಯಾವ ರೀತಿ ನಮ್ಮ ಜೀವನ ಶೈಲಿಯನ್ನು ನಡೆಸುತ್ತೇವೆ, ಅದರ ಮೇಲೆ ನಾವು ಹಿರಿಯರು, ಕಿರಿಯರು ಎಂಬುವುದು ನಿರ್ಧಾರ ಆಗುತ್ತದೆ. ನನಗಿಂತ ಹತ್ತಾರು ಜನರು ಹಿರಿಯರಿದ್ದಾರೆ. ಅವರ ಜೀವನಶೈಲಿ ಕ್ರಿಯಾಶೀಲ ಚಟುವಟಿಕೆಯಿಂದ ಕೂಡಿದೆ. ಅದಕ್ಕೆ ಉದಾಹರಣೆ ನಮ್ಮ ವಿ. ಸೋಮಣ್ಣ ಅವರು. ವಿ. ಸೋಮಣ್ಣ ಅವರಿಗೆ ಎಷ್ಟು ವಯಸ್ಸಾಗಿದೆ ಎಂಬುವುದನ್ನು ಕಂಡು ಹಿಡಿಯಲು ಆಗಿಲ್ಲ. ಅವರು ಎಲ್ಲದರಲ್ಲೂ ಯುವಕರಿಗಿಂತ ಮುಂದೆ ಇರುತ್ತಾರೆ. ವಿಶ್ರಾಂತಿ ಇಲ್ಲದೇ ನಿರಂತರವಾಗಿ ಕೆಲಸ ಮಾಡುತ್ತಾರೆ. ಇಂತಹ ಅತ್ಯಂತ ಕ್ರಿಯಾಶೀಲರಾಗಿ ಪಾದರಸದಂತೆ ಓಡಾಡುವ ಹಲವು ಹಿರಿಯರು ಇದ್ದಾರೆ ಎಂದರು.

ನಮ್ಮ ಯುವಕರು ಕಂಪ್ಯೂಟರ್ ಮತ್ತು ಐಪ್ಯಾಡ್ ಮುಂದೆ ಕುಳಿತರೆ ಅದನ್ನು ಬಿಟ್ಟು ಅಲುಗಾಡುವುದಿಲ್ಲ. ಎಷ್ಟರಮಟ್ಟಿಗೆ ವ್ಯಸನಿಗಳಾಗಿದ್ದಾರೆ ಎಂದರೆ, ಎಲ್ಲ ಕೆಲಸಗಳನ್ನು ಅದರ ಮುಂದೆಯೇ ಮಾಡುತ್ತಾರೆ. ಇದರಿಂದಾಗಿ ಕಿರಿಯರು ಮತ್ತು ಹಿರಿಯರ ಬಗ್ಗೆ ವಯಸ್ಸಿನ ಆಧಾರದ ಮೇಲೆ ಹೇಳಲಾಗುತ್ತದೆ. ನಮ್ಮನ್ನು ನಾವು ಅತ್ಯಂತ ಕ್ರಿಯಾಶೀಲರಾಗಿ ತೊಡಗಿಸಿಕೊಂಡರೆ, ನಮಗೆ ಮುಪ್ಪು, ಮುದುಕ, ಹಿರಿಯ ಎನ್ನುವ ಪದ ಬರುವುದಿಲ್ಲ ಎಂದರು.

ನಿವೃತ್ತ ಹಿರಿಯ ನಾಗರಿಕರ ಅನುಭವ ಬಳಕೆಗೆ ಅವಕಾಶ
ಎಲ್ಲ ದೇಶದಲ್ಲಿಯೂ ಕೂಡ ವಯಸ್ಸಾದ ಕ್ರೀಯಾಶೀಲ ಹಿರಿಯರಿದ್ದಾರೆ. ಅವರ ಅನುಭವ ಮತ್ತು ಶಕ್ತಿಯನ್ನು ಬಳಕೆ ಮಾಡುವುದು ಜಾಣತನ. ಹೀಗಾಗಿ ನಾನು ವಿಶ್ವ ಹಿರಿಯ ನಾಗರಿಕರ ದಿನದಂದು ಒಂದು ತೀರ್ಮಾನವನ್ನು ಮಾಡಿದ್ದೇನೆ. ಎಲ್ಲೆಲ್ಲಿ ಸಾಧ್ಯವಿದೆ ಅಲ್ಲಿ ಹಿರಿಯ ನಾಗರಿಕರ ಸೇವೆಯನ್ನು ಸರ್ಕಾರದ ಸಹಾಯ, ಸಲಹೆಗಳಿಗಾಗಿ ತೆಗೆದುಕೊಳ್ಳುವ ಕೆಲಸವನ್ನು ನಾವು ಮಾಡುತ್ತೇವೆ. ಇದರಿಂದ ಯಾವುದೇ ಯುವಕರಿಗೆ ತೊಂದರೆ ಆಗುವುದಿಲ್ಲ. ಹಿರಿಯರ ಅನುಭವ ಬುತ್ತಿಯನ್ನು ನಾವು ಈ ನಾಡು ಕಟ್ಟಲು ಬಳಕೆ ಮಾಡಿಕೊಳ್ಳುತ್ತೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ವೃದ್ದಾಶ್ರಮಗಳ ಹೆಚ್ಚಳ ಖೇದಕರ
ರಾಜ್ಯದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚುತ್ತಿರುವುದು ಖೇದಕರ ಎನಿಸುತ್ತಿದೆ. 5 ಸಾವಿರ ವರ್ಷದ ಪರಂಪರೆ, ಕುಟುಂಬದ ಜನರು ವೃದ್ಧಾಶ್ರಮಗಳಿಗೆ ಕಳುಹಿಸುತ್ತಿರುವುದು ಬಹಳ ನೋವಿನ ಸಂಗತಿ. ಸಮಾಜದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಹಿರಿಯರಿಂದ ಪಡೆದಿರುವುದನ್ನು ಅವರನ್ನು ನೋಡಿಕೊಳ್ಳುವ ಮೂಲಕ ತೀರಿಸಬೇಕು. ಎಲ್ಲದಕ್ಕಿಂತ ಮುಖ್ಯವಾದದ್ದು ಮಾನವೀಯತೆ. ಮಾನವೀಯತೆಯಿಂದ ನಡೆದುಕೊಳ್ಳುವುದು ಮುಖ್ಯವಾಗಿದೆ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯ ವ್ಯಕ್ತಪಡಿಸಿದರು. ಸಚಿವರಾದ ಹಾಲಪ್ಪ ಆಚಾರ್, ವಿ. ಸೋಮಣ್ಣ, ಶಂಕರ್ ಪಾಟೀಲ ಮುನೇನಕೊಪ್ಪ, ಶಾಸಕರಾದ ಉದಯ್ ಗರುಡಾಚಾರ್ಯ, ರವಿ ಸುಬ್ರಹ್ಮಣ್ಯ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ | ರಾಮನಗರದಲ್ಲಿ ಯೋಗೇಶ್ವರ್‌ ಕಾರಿನ ಮೇಲೆ ಕಲ್ಲು, ಮೊಟ್ಟೆ ಎಸೆತ: ಜೆಡಿಎಸ್‌ ವರ್ತನೆಗೆ ಸಿಎಂ ಬೊಮ್ಮಾಯಿ ಖಂಡನೆ

Exit mobile version