Site icon Vistara News

ಬೆಳಗ್ಗೆ 10 ಗಂಟೆಗೆ ಆಫೀಸ್‌ನಲ್ಲಿ ಇರಬೇಕು ಅಷ್ಟೆ: ಸರ್ಕಾರಿ ನೌಕರರಿಗೆ ಮುಖ್ಯ ಕಾರ್ಯದರ್ಶಿ ಸೂಚನೆ

Vandita sharma

ಬೆಂಗಳೂರು: ವಿವಿಧ ಕೆಲಸಗಳಿಗೆ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿದರೆ ಅಲ್ಲಿ ಅಧಿಕಾರಿಗಳೇ ಇರುವುದಿಲ್ಲ. ತಮ್ಮ ಕೆಲಸದ ಸಮಯಕ್ಕೆ ಹಾಜರಾಗದೇ ಎಲ್ಲೋ ಸುತ್ತಾಡುತ್ತಿರುವ, ತಡವಾಗಿ ಬರುವ ಪರಿಪಾಠ ಜಾರಿಯಲ್ಲಿದೆ. ಈ ದುಶ್ಚಟಕ್ಕೆ ಅಂತ್ಯ ಹಾಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಲೇ ಇಲ್ಲ. ಇದೀಗ ಮುಖ್ಯ ಕಾರ್ಯದರ್ಶಿಯವರೇ ಈ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ.

ಈ ಕುರಿತು ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರು ಸುತ್ತೋಲೆಯನ್ನು ಹೊರಡಿಸಿದ್ದಾರೆ. ಸರ್ಕಾರಿ ಕಚೇರಿ ಕೆಲಸಕ್ಕೆ ಬೆಳಗ್ಗೆ 10 ಕ್ಕೆ ಹಾಜರಾಗಬೇಕು. ಆದರೆ ಅನೇಕರು ಸಮಯಕ್ಕೆ ಹಾಜರಾಗದೇ ಅಮಯಪ್ರಜ್ಞೆ, ಕಾರ್ಯನಿಷ್ಠೆಯ ಕೊರತೆ ಎದುರಿಸುತ್ತಿದ್ದಾರೆ. ಸಾರ್ವಜನಿಕರು ದೂರದ ಸ್ಥಳಗಳಿಂದ ಸರ್ಕಾರಿ ಕಚೇರಿಯಲ್ಲಿನ ತಮ್ಮ ಕಾರ್ಯಗಳಿಗೆ ನಿಗದಿತ ಅವಧಿಗೆ ಭೇಟಿ ನೀಡಿದಾಗ ಬಹುತೇಕ ಕಚೇರಿಗಳಲ್ಲಿ ಸಿಬ್ಬಂದಿ, ಅಧಿಕಾರಿಗಳು ಕಚೇರಿಯಲ್ಲಿ ಹಾಜರಿಲ್ಲದೇ ಇರುವುದು ಸಾಮಾನ್ಯ ಜನರ ಬವಣೆಗೆ ಕಾರಣವಾಗಿದೆ.

ಇದನ್ನೂ ಓದಿ | 86,500 ಸರ್ಕಾರಿ ನೌಕರರು ಕಂಪ್ಯೂಟರ್‌ ಪರೀಕ್ಷೆಯಲ್ಲಿ ಫೇಲ್‌ !

ಸರ್ಕಾರದ ಕಚೇರಿಯ ಪ್ರಾರಂಭದ ಸಮಯ ಬೆಳಗ್ಗೆ 10ಕ್ಕೆ ಹಾಜರಿರಬೇಕು ಹಾಗೂ ಕಚೇರಿ ಅವಧಿ ಮುಗಿಯುವವರೆಗೆ ತಮಗೆ ನಿಗದಿಪಡಿಸಿರುವ ಸ್ಥಳದಲ್ಲಿ ಇದ್ದು ಕರ್ತವ್ಯ ನಿರ್ವಹಿಸತಕ್ಕದ್ದು. ಅನ್ಯ ಕರ್ತವ್ಯದ ಮೇರೆಗೆ ಹೊರಗೆ ತೆರಳಬೇಕಿದ್ದಲ್ಲಿ ಚಲನವಲನ ವಹಿಯಲ್ಲಿ ಸಕಾರಣವನ್ನು ನಮೂದಿಸಿ, ಮೇಲಧಿಕಾರಿಗಳ ಅನುಮತಿಯನ್ನು ಪಡೆಯತಕ್ಕದ್ದು. ನಿಗದಿತ ಕಾಲಾವಧಿಗಿಂತ ತಡವಾಗಿ ಹಾಜರಾಗುವ ಹಾಗೂ ಕಚೇರಿ ಅವಧಿಯಲ್ಲಿ ಸ್ವಸ್ಥಾನದಲ್ಲಿ ಇಲ್ಲದ, ಚಲನವಲನ ವಹಿಯಲ್ಲಿ ನಮೂದಿಸಿ ಮೇಲಧಿಕಾರಿಗಳ ಅನುಮತಿ ಪಡೆದಿಲ್ಲದ ನೌಕರರು, ಅಧಿಕಾರಿಗಳ ವಿರುದ್ಧ ಸಕ್ಷಮ ಪ್ರಾಧಿಕಾರವು ಸೂಕ್ತ ಕ್ರಮ ಜರುಗಿಸತಕ್ಕದ್ದು ಎಂದು ಸುತ್ತೋಲೆಯಲ್ಲಿ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಅವರು ತಿಳಿಸಿದ್ದಾರೆ.

ಅನೇಕ ಕಚೇರಿಗಳಲ್ಲಿ ಸಿಬ್ಬಂದಿ ಆಗಮಿಸದೇ ಇರುವುದಕ್ಕೆ ಸಾರ್ವಜನಿಕರು ಆಗಿಂದಾಗ್ಗೆ ಪ್ರತಿಭಟನೆ, ಆಕ್ರೋಶಗಳನ್ನು ಹೊರಹಾಕಿದ್ದಾರೆ. ಇತ್ತೀಚೆಗೆ ಬಾಗಲಕೋಟೆ ಬೀಳಗಿ ಪಟ್ಟಣದ ಪಟ್ಟಣ ಪಂಚಾಯಿತಿ ಕಚೇರಿಗೆ ತಡವಾಗಿ ಬಂದ ಲೇಟ್‌ ಲತೀಫ್‌ ಅಧಿಕಾರಿಗಳ ವಿರುದ್ಧ ಗಾಂಧಿ ಗಿರಿ ಅಸ್ತ್ರ ಪ್ರಯೋಗ ಮಾಡಲಾಗಿತ್ತು. ತಡವಾಗಿ ಬಂದವರಿಗೆ ಗುಲಾಬಿ ಹಾರ ಹಾಕಿ, ಸರಿಯಾದ ಸಮಯಕ್ಕೆ ಆಗಮಿಸುವಂತೆ ಕೋರಲಾಗಿತ್ತು.

Exit mobile version