ದೊಡ್ಡಬಳ್ಳಾಪುರ: ಎಸ್‌ಸಿಎಸ್‌ಟಿ ಸಮುದಾಯಕ್ಕೆ ಹೆಚ್ಚಿನ ಮೀಸಲಾತಿಯನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ ಎಂದು ಸಚಿವ ಬಿ.ಶ್ರೀರಾಮುಲು ತಿಳಿಸಿದರು.
ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಹಾಗೂ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷದ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನರೇಂದ್ರ ಮೋದಿಯವರ ಬಗ್ಗೆ ರಾಹುಲ್ ಗಾಂಧಿ ಸೇರಿ ಅನೇಕರು ಲಘುವಾಗಿ ಮಾತನಾಡುತ್ತಿದ್ದರು. ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ ಬೇಲ್ ಮೇಲೆ ಇರುವ ರಾಹುಲ್ ಗಾಂಧಿ, ಮೋದಿಯವರ ಬಗ್ಗೆ ಮಾತನಾಡುವುದರಲ್ಲಿ ಅರ್ಥವಿಲ್ಲ. ದೇಶವನ್ನು ಜೋಡಿಸುವ ಕೆಲಸ ಮಾಡುತ್ತಿರುವುದು ನರೇಂದ್ರ ಮೋದಿ. ಕಾಂಗ್ರೆಸ್ ಪಕ್ಷದವರು ಮೊದಲಿಗೆ ತಮ್ಮ ಪಕ್ಷವನ್ನು ಜೋಡಿಸಿಕೊಳ್ಳಬೇಕು ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಸಾರಿಗೆ ಇಲಾಖೆಯಲ್ಲಿ ಅನೇಕ ಬದಲಾವಣೆ ಮಾಡಿದೆ. ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡುವ ಯಾವೊಬ್ಬ ಸಿಬ್ಬಂದಿಗೂ ತೊಂದರೆ ಆಗಬಾರದು ಎಂದು ನೀತಿ ಬದಲಾವಣೆ ಮಾಡಲಾಗಿದೆ. ಆಟೋ ಡ್ರೈವರ್ ಮಕ್ಕಳು, ಟ್ಯಾಕ್ಸಿ ಡ್ರೈವರ್ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿದೆ. ಕಟ್ಟಡ ಕಾರ್ಮಿಕರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಗಿದೆ. ಪರಿಸರ ಉಳಿಸುವ ಸಲುವಾಗಿ ವಿದ್ಯುತ್ ಬಸ್‌ಗಳನ್ನು ಖರೀದಿಸಲಾಗಿದೆ, ಮುಂದಿನ ದಿನಗಳಲ್ಲಿ 40 ಸಾವಿರ ವಿದ್ಯುತ್ ಬಸ್‌ಗಳು ಗ್ರಾಮೀಣಭಾಗದಲ್ಲೂ ಚಲಿಸುತ್ತವೆ ಎಂದರು.
ವಾಲ್ಮೀಕಿ ಸಮುದಾಯಕ್ಕೆ ಸರ್ಕಾರದಲ್ಲಿ ಪ್ರಾಧಾನ್ಯತೆ ನೀಡಲಾಗಿದೆ ಎಂದ ಶ್ರೀರಾಮುಲು, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವಾಗಬೇಕು. ಪ.ಜಾತಿಗೆ 1೫ ರಿಂದ 17% ಆಗಬೇಕು, ಪರಿಶಿಷ್ಟ ಪಂಗಡಕ್ಕೆ 3ರಿಂದ 7.5% ಆಗಬೇಕು. ಸರ್ಕಾರ ಬರುವುದಕ್ಕೂ ಮುನ್ನ ನಾನೇ ಒತ್ತಾಯಿಸಿದ್ದೆ. ಮುಂದಿನ ದಿನಗಳಲ್ಲಿ ಎಸ್‌ಸಿಎಸ್‌ಟಿ ಜನಾಂಗಕ್ಕೆ ಸಿಹಿ ಸುದ್ದಿಯನ್ನು ಸರ್ಕಾರ ನೀಡಲಿದೆ ಎಂದು ತಿಳಿಸಿದರು.
ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರು ಮಾಡುತ್ತಿರುವ ಪ್ರಯತ್ನಗಳು ವಿಫಲವಾಗುತ್ತವೆ. ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ 150ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು.
ಇದನ್ನೂ ಓದಿ | BJP ಜನಸ್ಪಂದನ | ವಿಜಯ್ ಪ್ರಕಾಶ್ ಸಂಗೀತ ಕಛೇರಿಯೊಂದಿಗೆ ಜನಸ್ಪಂದನ ಆರಂಭ