Site icon Vistara News

BJP ಜನಸ್ಪಂದನ | ವಿಪಕ್ಷ ನಾಯಕರ ಮೇಲೆ CBI, IT, ED, ಲೋಕಾಯುಕ್ತ ದಾಳಿ: ಸಿಎಂ ಬೊಮ್ಮಾಯಿ ಮುನ್ಸೂಚನೆ?

janaspandana CM bommai

ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಸದಾ ಭ್ರಷ್ಟಾಚಾರ ಆರೋಪ ಮಾಡುವ ಪ್ರತಿಪಕ್ಷಗಳಿಗೆ ಉತ್ತರ ರೂಪದಲ್ಲಿ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದಿದ್ದವು ಎನ್ನಲಾಗಿದ್ದ ಹಗರಣಗಳ ಫೈಲ್‌ಗಳನ್ನು ರಿ ಓಪನ್‌ ಮಾಡುವ ಮುನ್ಸೂಚನೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.

ಬಿಜೆಪಿ ಸರ್ಕಾರಕ್ಕೆ ಮೂರು ವರ್ಷ ಹಾಗೂ ಬೊಮ್ಮಾಯಿ ಸರ್ಕಾರಕ್ಕೆ ಒಂದು ವರ್ಷದ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಲ್ಲಿ ಆಯೋಜಿಸಲಾಗಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಬೊಮ್ಮಾಯಿ ಮಾತನಾಡಿದರು.

ಭಾಷಣದ ಆರಂಭದಿಂದಲೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಬೊಮ್ಮಾಯಿ, ಸಿದ್ದರಾಮಯ್ಯ ಸರ್ಕಾರದಲ್ಲಿ ಹಗರಣಗಳು ನಡೆದಿದ್ದವು ಎಂದು ದೊಡ್ಡ ಪಟ್ಟಿ ಮಾಡಿದರು. ಅನ್ನಭಾಗ್ಯ ಹಗರಣವನ್ನು ತನಿಖೆ ಮಾಡುತ್ತಿದ್ದ ಅನುರಾಗ್‌ ತಿವಾರಿಯ ಸಾವು ಅನುಮಾನಾಸ್ಪದವಾಗಿ ಉತ್ತರ ಪ್ರದೇಶದಲ್ಲಿ ನಡೆಯಿತು. ಮರಳು ದಂಧೆಯಲ್ಲಿ ಸಚಿವ ಸಂಪುಟದ ಸದಸ್ಯರ ಮಗನ ಮೇಲೆ ಪ್ರಕರಣ ದಾಖಲಾಯಿತು. ರೈತರಿಗೆ ಬೋರ್‌ವೆಲ್‌ ಕೊರೆಯಿಸುವ ಯೋಜನೆಯಲ್ಲಿ ಒಂದೇ ದಿನದಲ್ಲಿ ಮೂವತ್ತಾರು ಸಾವಿರ ಬೋರ್‌ವೆಲ್‌ ಕೊರೆಸುವ ಹಗರಣ ಮಾಡಿದಿರಿ. ಎಸ್‌ಸಿಎಸ್‌ಟಿ ಹಾಸ್ಟೆಲ್‌ಗಳ ಹಾಸಿಗೆ ದಿಂಬಿನಲ್ಲಿ, ಬಿಡಿಎ ಅರ್ಕಾವತಿಯಲ್ಲಿ, ಲ್ಯಾಪ್‌ಟಾಪ್‌ ನೀಡುವುದರಲ್ಲಿ ಹಗರಣ ಮಾಡಿದಿರಿ ಎಂದರು. ಸಣ್ಣ ನೀರಾವರಿಯಲ್ಲಿ ಕೆಲಸವನ್ನೇ ಮಾಡದೆ ನಲವತ್ತು ಸಾವಿರ ಕೋಟಿ ಬಿಲ್‌ ಮಾಡಿದಿರಿ ಎಂದ ಸಿಎಂ ಬೊಮ್ಮಾಯಿ, ನಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದೀರಿ. ನಿಮ್ಮದು 100% ಸರ್ಕಾರ. ಕೆಲಸವನ್ನೇ ಮಾಡದೆ ಬಿಲ್‌ ಮಾಡುವ ಸರ್ಕಾರ ನಿಮ್ಮದು ಎಂದರು.

ಸಿದ್ದರಾಮಯ್ಯ ಅವರ ಅವಧಿಯಲ್ಲಿ ಪೊಲೀಸ್‌ ನೇಮಕಾತಿ ಹಗರಣದಲ್ಲಿ ದೂರು ದಾಖಲಾಯಿತಾದರೂ ಯಾರ ಮೇಲೆಯೂ ಏನೂ ಕ್ರಮ ಆಗಲಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಮತಿ ನೀಡಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು. ನಿಮ್ಮ ಅವಧಿಯಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಮೂರು ಬಾರಿ ಪರೀಕ್ಷೆ ಮುಂದೂಡಲ್ಪಟ್ಟಿತು. ಪರೀಕ್ಷೆಯನ್ನೇ ತೆಗೆದುಕೊಳ್ಳದವರಿಗೆ ನೇಮಕಾತಿ ಮಾಡಿದ್ದೀರ ಎಂದರು.

ಹಗರಣಗಳನ್ನು ಬಯಲಿಗೆಳೆಯುತ್ತೇವೆ

ಇಂತಹ ನಾಟಕ, ದುಷ್ಟ ನಾಟಕ ಕರ್ನಾಟಕದಲ್ಲಿ ನಡೆಯುವುದಿಲ್ಲ ಎನ್ನುವುದನ್ನು ತೋರಿಸಲು ಈ ಕಾರ್ಯಕ್ರಮ ನಡೆಯುತ್ತಿದೆ ಎಂದ ಬೊಮ್ಮಾಯಿ, ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಹಗರಣಗಳನ್ನು ಬಯಲಿಗೆಳೆಯುವುದಾಗಿ ಘೋಷಿಸಿದರು. ಎಲ್ಲ ಹಗರಣಗಳೂ ಸ್ವಲ್ಪ ದಿನದಲ್ಲೇ ಬಯಲಾಗುತ್ತವೆ. ನಿಮ್ಮ ನಿಜ ಸ್ವರೂಪವನ್ನು ಜನರ ಮುಂದೆ ಇಡುತ್ತೇವೆ. ಆಗ ಜನರು ನಿಮ್ಮನ್ನು ಛೀ ಥೂ ಎನ್ನುತ್ತಾರೆ ಎಂದರು.

ಕರ್ನಾಟಕದ ಜನ ನಿಮ್ಮ ಭ್ರಷ್ಟಾಚಾರವನ್ನು ನೋಡಿದ್ದಾರೆ. ದೊಡ್ಡಬಳ್ಳಾಪುರದಿಂದ ಆರಂಭವಾದ ಜನಸ್ಪಂದವನ್ನು ದಂ ಇದ್ದರೆ, ತಾಕತ್ತಿದ್ದರೆ ನಿಲ್ಲಿಸುವ ಪ್ರಯತ್ನ ಮಾಡಿ. ಕರ್ನಾಟಕದ ಹಳ್ಳಿ ಹಳ್ಳಿಗೂ ಇದು ಹಬ್ಬಲಿದೆ. ಭ್ರಷ್ಟಾಚಾರದಿಂದ ಕೂಡಿಟ್ಟ ನಿಮ್ಮ ಹಣ ಪ್ರಯೋಜನಕ್ಕೆ ಬರುವುದಿಲ್ಲ. ನಿಮ್ಮ ಬಂಡವಾಳ, ನಿಮ್ಮ ಹಣದ ಬಂಡವಾಳ ಬಯಲಾಗುತ್ತದೆ ಎಂದು ಹೇಳಿದರು.

ಡಬಲ್‌ ಎಂಜಿನ್‌ ಸರ್ಕಾರದ ಉಪಯೋಗಗಳನ್ನು ರಿಪೋರ್ಟ್‌ ಕಾರ್ಡ್‌ನೊಂದಿಗೆ ಜನರ ಎದುರು ಬಂದು ಆಶೀರ್ವಾದ ಮಾಡಿ ಎಂದು ಕೋರುತ್ತೇವೆ. ಜನಸ್ಪಂದನೆಯನ್ನು ವಿಜಯೋತ್ಸವದಲ್ಲಿ ನಾವು ಪರಿವರ್ತನೆ ಮಾಡುತ್ತೇವೆ. 2023ರಲ್ಲಿ ಬಿಜೆಪಿ ಸರ್ಕಾರವೇ ಬರುತ್ತದೆ. ನವ ಕರ್ನಾಟಕದಿಂದ ನವ ಭಾರತ ನಮ್ಮ ಗುರಿ, ಅದಕ್ಕೆ ನಿಮ್ಮೆಲ್ಲರ ಬೆಂಬಲ ಇರಲಿ ಎಂದು ಕೋರಿದರು.

ಇದನ್ನೂ ಓದಿ | BJP ಜನಸ್ಪಂದನ | ಸಿದ್ದರಾಮಯ್ಯ ಅವರದ್ದು 100% ಸರ್ಕಾರ: ಸಿಎಂ ಬೊಮ್ಮಾಯಿ ʼದಮ್‌ʼದಾರ್‌ ಭಾಷಣ

Exit mobile version