ಚಿಕ್ಕಬಳ್ಳಾಪುರ: ತಾಯಿಯೊಬ್ಬಳು ಹೆತ್ತ ಮಗುವನ್ನು ಆಸ್ಪತ್ರೆಯಲ್ಲಿ (Chikkaballapura News) ಬಿಟ್ಟು ಓಡಿ ಹೋಗಿದ್ದಾಳೆ. ಒಂದು ವರ್ಷದ ಮಗುವನ್ನು ಆಸ್ಪತ್ರೆಯ ತೊಟ್ಟಿಲಲ್ಲಿ ಬಿಟ್ಟು ಹೋಗಿರುವ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕು ಆಸ್ಪತ್ರೆಯಲ್ಲಿ (Chintamani Taluk Hospital) ನಡೆದಿದೆ.
ಮಗುವನ್ನು ತೊಟ್ಟಿಲಲ್ಲಿ ಹಾಕಿ ಹೋಗುತ್ತಿರುವ ದೃಶ್ಯ ಆಸ್ಪತ್ರೆಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಾಕೆ ಮಗು ಬಿಟ್ಟು ಕ್ಷಣಾರ್ಧದಲ್ಲೇ ಮಾಯವಾಗಿದ್ದಾಳೆ.
ಮಗು ಅಳುವುದನ್ನು ಕಂಡು ಆಸ್ಪತ್ರೆಯ ಸಿಬ್ಬಂದಿ ತಾಯಿಗಾಗಿ ಹುಡುಕಾಟ ನಡೆಸಿ, ಅಕ್ಕಪಕ್ಕದವರನ್ನು ವಿಚಾರಿಸಿದ್ದಾರೆ. ಬಳಿಕ ಸಿಸಿಟಿವಿಯಲ್ಲಿ ಪರಿಶೀಲನೆ ನಡೆಸಿದಾಗ ತರಾತುರಿಯಲ್ಲಿ ಬರುವ ಮಹಿಳೆ ಅತ್ತಿಂದಿತ್ತ ಕಣ್ಣಾಡಿಸಿ ಏಕಾಏಕಿ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ, ಕಾಲ್ಕಿತ್ತಿದ್ದಾರೆ.
ಸದ್ಯ ಆಸ್ಪತ್ರೆ ಸಿಬ್ಬಂದಿ ಈ ಸಂಬಂಧ ಚಿಂತಾಮಣಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ್ವಯ ಪೊಲೀಸರು ಮಗುವಿನ ತಾಯಿಗಾಗಿ ಹುಡುಕಾಟ ನಡೆಸಿದ್ದಾರೆ. ಮಹಿಳೆ ಯಾಕಾಗಿ ಮಗುವನ್ನು ಬಿಟ್ಟು ಹೋಗಿದ್ದಾಳೆ? ಆ ಮಗು ಆಕೆಯದ್ದಾ ಅಥವಾ ಬೇರೆಯವರದ್ದಾ? ಹೀಗೆ ಎಲ್ಲ ಆಯಾಮದಲ್ಲೂ ತನಿಖೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್
Murder case : ಹಾಸನದಲ್ಲಿ ದಾಯಾದಿಗಳ ಕಲಹ ಕೊಲೆಯಲ್ಲಿ ಅಂತ್ಯ
ಹಾಸನ: ಕ್ಷುಲ್ಲಕ ಕಾರಣಕ್ಕೆ ದಾಯಾದಿಗಳ ನಡುವೆ ಶುರುವಾದ ಜಗಳವು ಕೊಲೆಯಲ್ಲಿ (Murder case) ಅಂತ್ಯವಾಗಿದೆ. ದಯಾನಂದ್ (40) ಮೃತ ದುರ್ದೈವಿ. ಹಾಸನ ಜಿಲ್ಲೆಯ (Hasana News) ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಸಮೀಪದ ದಮ್ಮನಿಂಗಳ ಗ್ರಾಮದಲ್ಲಿ ಘಟನೆ ನಡೆದಿದೆ.
ಜಲಜೀವನ್ ಮಿಷನ್ ಯೋಜನೆಯ ನೀರಿನಲ್ಲಿ ಸಂಪರ್ಕ ಅಳವಡಿಸುವ ಜಾಗದ ವಿಷಯಕ್ಕೆ ದಯಾನಂದ್ ಹಾಗೂ ವರುಣ್ ನಡುವೆ ಜಗಳ ಆರಂಭವಾಗಿತ್ತು. ಜಗಳ ವಿಕೋಪಕ್ಕೆ ತಿರುಗಿದ್ದು ಸಹೋದರರು ಚಾಕು ಹಾಗೂ ಮಾರಕಾಸ್ತ್ರಗಳಿಂದ ಪರಸ್ಪರ ಹಲ್ಲೆ ಮಾಡಿಕೊಂಡಿದ್ದಾರೆ.
ಈ ವೇಳೆ ದಯಾನಂದ್ ಸ್ಥಳದಲ್ಲೇ ಮೃತಪಟ್ಟರೆ, ವರುಣ್ (36) ಗಂಭೀರವಾಗಿ ಗಾಯಗೊಂಡಿದ್ದಾನೆ. ಸದ್ಯ ವರುಣ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮನೆಯ ಪಕ್ಕದ ನಾಲ್ಕು ಅಡಿ ಜಾಗಕ್ಕಾಗಿ ಹಲವಾರು ವರ್ಷಗಳಿಂದ ವ್ಯಾಜ್ಯ ನಡೆಯುತ್ತಿತ್ತು. ಇದೇ ಜಾಗಕ್ಕಾಗಿ ಸಹೋದರರ ನಡುವೆ ಶುರುವಾದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ.
ಸ್ಥಳಕ್ಕೆ ಅಪರ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ