ಚಿಕ್ಕಬಳ್ಳಾಪುರ: ಭ್ರಷ್ಟಾಚಾರ ತನಿಖಾ ದಳ(ಎಸಿಬಿ) ಸ್ವತಂತ್ರ ತನಿಖಾ ಸಂಸ್ಥೆಯಾಗಿತ್ತು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಮರ್ಥನೆ ಮಾಡಿಕೊಂಡಿದ್ದಾರೆ. ಎಸಿಬಿಯನ್ನು ರದ್ದುಗೊಳಿಸಿರುವ ಹೈಕೋರ್ಟ್ ಆದೇಶದ ಕುರಿತು ಪ್ರತಿಕ್ರಿಯಿಸಿದ್ದಾರೆ.
ಇದನ್ನು, ಲೋಕಾಯುಕ್ತಕ್ಕೆ ಮರುಜೀವ ಎನ್ನಲಾಗದು. ಲೋಕಾಯುಕ್ತ ಮೊದಲಿಂದಲೂ ಇತ್ತು. ಅದರಲ್ಲಿ ಇದ್ದ ಪೊಲೀಸ್ ಇಲಾಖೆಯನ್ನು ಬೇರ್ಪಡಿಸಿ ಎಸಿಬಿ ಮಾಡಿದ್ದೆ ಅಷ್ಟೆ. ಈಗ ಈ ಕುರಿತು ಹೈಕೋರ್ಟ್ ತೀರ್ಮಾನ ಮಾಡಿದೆ, ಹೈಕೋರ್ಟ್ ತೀರ್ಮಾನವನ್ನು ಗೌರವಿಸುತ್ತೇವೆ.
ಎಸಿಬಿ ಸ್ವತಂತ್ರವಾದ ತನಿಖಾ ಸಂಸ್ಥೆ ಆಗಿತ್ತು. ಅನೇಕ ರಾಜ್ಯಗಳಲ್ಲಿ ಎಸಿಬಿ ಇದೆ. ಹೈಕೋರ್ಟ್ ಏನಾದರೂ ಎಸಿಬಿ ಲೋಕಾಯುಕ್ತದಲ್ಲೆ ಇರಬೇಕು, ಸ್ವತಂತ್ರವಾಗಿರುವುದು ಬೇಡ ಎಂದು ತೀರ್ಮಾನ ಮಾಡಿದ್ದರೆ ನೋಡೋಣ. ಕೋರ್ಟ್ ಏನು ತೀರ್ಮಾನ ಮಾಡಿದೆ ಎಂದು ಪೂರ್ಣ ನೋಡಿಲ್ಲ. ನೋಡಿದ ಮೇಲೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅದರ ಕುರಿತು ನನಗೆ ಮಾಹಿತಿ ಇಲ್ಲ. ಈ ಹಿಂದೆ ಯಡಿಯೂರಪ್ಪ ಬದಲಾವಣೆ ಆಗುತ್ತಾರೆ ಎಂಬ ಮಾಹಿತಿ ಇತ್ತು, ಹೇಳಿದೆ. ಈಗ ಅದರ ಬಗ್ಗೆ ಮಾಹಿತಿ ಇಲ್ಲ, ಮಾಹಿತಿ ಇಲ್ಲದೆ ಏನೂ ಮಾತಾಡಬಾರದು ಎಂದಿದ್ದಾರೆ.
ಇದನ್ನೂ ಓದಿ | ಲೋಕಾಯುಕ್ತಕ್ಕೆ ಹಲ್ಲಿದೆಯೇ, ಇಲ್ಲವೇ ನೀವೇ ನಿರ್ಧಾರ ಮಾಡಿ: ನ್ಯಾಯಮೂರ್ತಿ ಉತ್ತರ
ಎಸಿಬಿ ರಚಿಸಿದ್ದ ಸಿದ್ದರಾಮಯ್ಯ ಸರ್ಕಾರ
ಕಾಂಗ್ರೆಸ್‌ನ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು 2016ರ ಮಾರ್ಚ್ 14ರಂದು ಎಸಿಬಿ ರಚಿಸಿ ಆದೇಶ ಹೊರಡಿಸಿತ್ತು. ಆದರೆ, ಇದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಕೋರ್ಟ್‌ಗೆ ಸಲ್ಲಿಕೆಯಾಗಿದ್ದವು. ಅಲ್ಲದೆ, ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸುವ ಸಲುವಾಗಿಯೇ ಎಸಿಬಿಯನ್ನು ರಚನೆ ಮಾಡಲಾಗಿತ್ತು ಎಂಬ ಆರೋಪ ಬಲವಾಗಿ ಕೇಳಿಬಂದಿತ್ತು. ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಲೋಕಾಯುಕ್ತ ಸಂಸ್ಥೆಗೆ ಬದಲಾಗಿ, ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯ ಅಧೀನದಲ್ಲಿ ಎಸಿಬಿಯನ್ನು ರಚಿಸಲಾಗಿತ್ತು.
ಇದಲ್ಲದೆ, ಲೋಕಾಯುಕ್ತದಲ್ಲಿ ಹೊಸ ದೂರುಗಳ ದಾಖಲು ಮಾಡಿಕೊಳ್ಳದಂತೆ ಆದೇಶವನ್ನೂ ಹೊರಡಿಸಲಾಗಿತ್ತು. ಈ ಮೂಲಕ ಲೋಕಾಯುಕ್ತದ ಸಂಪೂರ್ಣ ಅಧಿಕಾರವನ್ನು ಕಿತ್ತುಕೊಳ್ಳಲಾಗಿತ್ತು. ಇದೇ ವಿಚಾರವನ್ನು ಕಳೆದ ಚುನಾವಣೆಯಲ್ಲಿ ಪ್ರಚಾರದ ಸರಕಾಗಿ ಬಳಸಿಕೊಂಡಿದ್ದ ಬಿಜೆಪಿ, ತಾನು ಅಧಿಕಾರಕ್ಕೆ ಬಂದರೆ ಎಸಿಬಿಯನ್ನು ರದ್ದುಪಡಿಸಿ, ಲೋಕಾಯುಕ್ತಕ್ಕೆ ಬಲ ಕೊಡುವುದಾಗಿ ಹೇಳಿತ್ತು. ಆದರೆ, ಬಿಜೆಪಿ ಸಹ ಯಾವುದೇ ಕ್ರಮ ಕೈಗೊಳ್ಳದೆ ಮೌನವಹಿಸಿತ್ತು. ಈಗ ನ್ಯಾಯಾಲಯವೇ ಎಸಿಬಿಯನ್ನು ರದ್ದುಗೊಳಿಸುವ ಮೂಲಕ ಸ್ವತಂತ್ರ ಸಂಸ್ಥೆಗೆ ಬಲತುಂಬವ ಮಹತ್ವದ ಆದೇಶವನ್ನು ನೀಡಿದೆ.
ತೀರ್ಪಿನಲ್ಲೇನು ಉಲ್ಲೇಖ?
ಎಸಿಬಿ ರಚನೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿರುವ ನ್ಯಾಯಪೀಠವು ತನ್ನ ತೀರ್ಪಿನಲ್ಲಿ ಹಲವು ಅಂಶಗಳನ್ನು ಉಲ್ಲೇಖಿಸಿದೆ. ಭ್ರಷ್ಟಾಚಾರ ಆರೋಪ ಹೊತ್ತವರು ಪಾರಾಗಬಾರದು. ಈ ನಿಟ್ಟಿನಲ್ಲಿ ಲೋಕಾಯುಕ್ತ ಪೊಲೀಸರೇ ಎಸಿಬಿಯಲ್ಲಿರುವ ಎಲ್ಲ ಪ್ರಕರಣಗಳ ತನಿಖೆಯನ್ನು ಮುಂದುವರಿಸಬೇಕು. ಜತೆಗೆ ಲೋಕಾಯುಕ್ತ, ಉಪಲೋಕಾಯುಕ್ತರ ನೇಮಕ ವೇಳೆ ಅರ್ಹತೆಯನ್ನು ಪರಿಗಣಿಸಬೇಕು. ಜಾತಿ ಆಧರದ ಮೇಲೆ ನಿರ್ಧಾರ ಆಗಬಾರದು ಎಂದು ಆದೇಶದಲ್ಲಿ ಹೇಳಲಾಗಿದೆ.
೩ ವರ್ಷ ಅವಧಿಗೆ ಅಧಿಕಾರಿಗಳ ನೇಮಕಕ್ಕೆ ಸೂಚನೆ
ಲೋಕಾಯುಕ್ತ ಸಂಸ್ಥೆಗೆ ನೇಮಕ ಮಾಡುವಾಗ ಕೆಲವು ಮಹತ್ವದ ಅಂಶಗಳನ್ನು ಪರಿಗಣಿಸಬೇಕು. ಮೂರು ವರ್ಷದ ಅವಧಿಗೆ ಅಧಿಕಾರಿಗಳ ನೇಮಕವಾಗಬೇಕು. ಅಲ್ಲದೆ, ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಎಸಿಬಿಗೆ ಪೊಲೀಸ್ ಠಾಣೆ ಸ್ಥಾನಮಾನವನ್ನು ರದ್ದುಪಡಿಸಿ ಆದೇಶಿಸಿದೆ.