ಚಿಕ್ಕಬಳ್ಳಾಪುರ: ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ನೇತೃತ್ವದ ಈಶ ಫೌಂಡೇಷನ್‌ಗೆ (Isha Foundation) ಅನುಕೂಲವಾಗುವಂತೆ ಸರ್ಕಾರಿ ಜಮೀನನ್ನು (Government Land) ಅಕ್ರಮವಾಗಿ ಮಾರಾಟ ಮಾಡಿದ ಪ್ರಕರಣದ ರೂವಾರಿ ಚಿಕ್ಕಬಳ್ಳಾಪುರದ ಬಾರ್ಲಹಳ್ಳಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸಿ.ಎಂ. ವೆಂಕಟೇಶ್ ಅವರನ್ನು ಅಮಾನತು ಮಾಡಲಾಗಿದೆ.
ಈಶ ಫೌಂಡೇಶನ್‌ಗೆ ಸರ್ಕಾರಿ ಗ್ರಾಮ ಠಾಣಾ ಜಾಗವನ್ನು ಮಾರಾಟ ಮಾಡಿದ್ದ ಬಗ್ಗೆ ಆರೋಪ ಕೇಳಿಬಂದ ಬೆನ್ನಿಗೇ ವೆಂಕಟೇಶ್ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯಿತಿ ಸಿಇಸಿ ಪ್ರಕಾಶ್ ನಿಟ್ಟಾಲಿ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ಲೋಪ ಎಸಗಿರುವ ದೂರು ದಾಖಲಾದ ಬೆನ್ನಿಗೇ ಸಿ.ಎಂ ವೆಂಕಟೇಶ್ ಅಮಾನತು ಮಾಡಿ ಅವರ ವಿರುದ್ಧ ಇಲಾಖಾ ತನಿಖೆಗೆ ಆದೇಶ ನೀಡಲಾಗಿದೆ.
ಬಾರ್ಲಹಳ್ಳಿ ಸರ್ಕಾರಿ ಗ್ರಾಮ ಠಾಣಾ ಜಾಗವನ್ನು ನಿವೇಶನಗಳಾಗಿ ಪರಿವರ್ತಿಸಿ ಅಕ್ರಮವಾಗಿ ಹಂಚಿಕೆ ಮಾಡಲಾಗಿತ್ತು. ಇವುಗಳನ್ನು ಬಲಾಢ್ಯರಿಗೆ ಹಂಚಿಕೆ ಮಾಡಲಾಗಿತ್ತು. ಹೀಗೆ ನಿವೇಶನಗಳನ್ನು ಪಡೆದವರು ಅವುಗಳನ್ನು ಈಶಾ ಫೌಂಡೇಶನ್ ನವರಿಗೆ ಮಾರಾಟ ಮಾಡಿದ್ದರು.
ಈ ಪ್ರಕರಣ ಬಯಲಾಗುತ್ತಿದ್ದಂತೆಯೇ ಪಿಡಿಓ ವೆಂಕಟೇಶ್ ವರ್ಗಾವಣೆಗೊಂಡಿದ್ದರು. ಸದ್ಯ ವೆಂಕಟೇಶ್ ಹಾರೋಬಂಡೆ ಗ್ರಾಮ ಪಂಚಾಯಿತಿ ಪಿಡಿಒ ಆಗಿದ್ದಾರೆ.
ಸರ್ಕಾರಿ ಭೂಮಿಯನ್ನು ಈ ರೀತಿ ಅಕ್ರಮವಾಗಿ ಹಂಚಿಕೆ ಮಾಡಿದ್ದು ಮತ್ತು ಬಳಿಕ ಅದು ಈಶಾ ಫೌಂಡೇಷನ್‌ಗೆ ಸೇರುವಂತೆ ಮಾಡಿದ್ದರ ಹಿಂದೆ ದೊಡ್ಡ ಕುತಂತ್ರವಿದೆ. ನೇರವಾಗಿ ಈಶಾ ಫೌಂಡೇಷನ್‌ಗೆ ಕೊಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜನರನ್ನೇ ಮಧ್ಯವರ್ತಿಗಳನ್ನಾಗಿ ಪರಿವರ್ತಿಸಲಾಗಿದೆ. ಅವರಿಗೆ ನಿವೇಶನ ಕೊಟ್ಟಂತೆ ಮಾಡಿ ಅಂತಿಮವಾಗಿ ಅದನ್ನು ಈಶಾ ಫೌಂಡೇಷನ್‌ಗೆ ತಲುಪಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಈಶಾ ಫೌಂಡೇಷನ್ ಇಲ್ಲಿ ದೊಡ್ಡ ಈಶ್ವರನ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದು, ಅದಕ್ಕೆ ಪೂರಕವಾಗಿ ಸಾಕಷ್ಟು ಭೂಮಿಯ ಅವಶ್ಯಕತೆ ಅದಕ್ಕಿತ್ತು. ಈಗಾಗಲೇ ಜಾಗದ ಅತಿಕ್ರಮಕ್ಕೆ ಸಂಬಂಧಿಸಿ ಪ್ರತಿಭಟನೆಗಳು ಕೂಡಾ ನಡೆಯುತ್ತಿದೆ.
ಇದರ ನಡುವೆಯೇ ಈಶಾ ಫೌಂಡೇಷನ್‌ನ ಚಟುವಟಿಕೆಗಳಿಂದ ಈ ಭಾಗದಲ್ಲಿ ದೊಡ್ಡ ಮಟ್ಟದ ಆರ್ಥಿಕ ವ್ಯವಹಾರವೂ ಚೆನ್ನಾಗಿ ಕುದುರಿದೆ. ಈ ಪ್ರದೇಶಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಹೋಗುವ ಮಾರ್ಗದ ಉದ್ದಕ್ಕೂ ವ್ಯಾಪಾರೋದ್ಯಮ ವಿಸ್ತರಣೆಯಾಗಿದೆ. ಅಂತಿಮವಾಗಿ ಇದರಿಂದ ಈ ಭಾಗದಲ್ಲಿ ದೊಡ್ಡ ಸಂಚಲನವೇ ಉಂಟಾಗಿದೆ.
ಇದನ್ನೂ ಓದಿ: Isha Foundation | ಚಿಕ್ಕಬಳ್ಳಾಪುರದ ಬಳಿ ಈಶ ಫೌಂಡೇಷನ್ ಕಾರ್ಯಕ್ಕೆ ಹೈಕೋರ್ಟ್ ತಡೆ