Site icon Vistara News

ಚಿಕ್ಕಬಳ್ಳಾಪುರ ಜಿಲ್ಲೆ ಕ್ಷೇತ್ರ ಸಮೀಕ್ಷೆ : ಮತ್ತೊಮ್ಮೆ ಮೇಲುಗೈ ಸಾಧಿಸಲು ಕಾಂಗ್ರೆಸ್‌ ಕಠಿಣ ಪರಿಶ್ರಮ

Karnataka Election 2023 chikkaballapur district constituency wise election analysis

#image_title

ರಾಜಪ್ಪ, ವಿಸ್ತಾರ ನ್ಯೂಸ್, ಚಿಕ್ಕಬಳ್ಳಾಪುರ
ಈ ಬಾರಿಯ ಚುನಾವಣೆಯಲ್ಲಿ (Karnataka Election 2023) ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಜಕೀಯ ಜಿದ್ದಾಜಿದ್ದಿ ಜೋರಾಗಿದೆ. ಆಪರೇಷನ್ ಕಮಲ ಮೂಲಕ ಕಾಂಗ್ರೆಸ್‌ಗೆ ಕೈ ಕೊಟ್ಟು ಬಿಜೆಪಿ ಸೇರಿರುವ ಡಾ ಕೆ ಸುಧಾಕರ್ 2019ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುವ ಮೂಲಕ ನೆಲೆ ಇಲ್ಲದ ಬಿಜೆಪಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನೆಲೆ ಒದಗಿಸಿದ್ದರು.

ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಚಿಂತಾಮಣಿ ಒಂದು ಕ್ಷೇತ್ರದಲ್ಲಿ ಜೆಡಿಎಸ್ ಬಿಟ್ಟರೆ, ಶಿಡ್ಲಘಟ್ಟ , ಗೌರಿಬಿದನೂರು, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಬೇರಿ ಬಾರಿಸಿತ್ತು. ಒಂದೇ ಒಂದು ಕ್ಷೇತ್ರದಲ್ಲಿ ಗೆದ್ದಿದ್ದ ಬಿಜೆಪಿ ಈಗ ಕನಿಷ್ಠ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಹಾಕಿಕೊಂಡಿದೆ.

ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ಇದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪ್ರಬಲ ಅಭ್ಯರ್ಥಿ ಸಚಿವ ಡಾ ಕೆ. ಸುಧಾಕರ್ ವಿರುದ್ಧ ಕಾಂಗ್ರೆಸ್‌ ಸುಧಾಕರ್ ಸ್ವಗ್ರಾಮ ಪೆರೇಸಂದ್ರದವರೇ ಆಗಿರುವ ಶಿಕ್ಷಣ ಸಂಸ್ಥೆಗಳ ರೂವಾರಿ ಪ್ರದೀಪ್ ಈಶ್ವರ್‌ಗೆ ಅಚ್ಚರಿಯೆಂಬಂತೆ ಟಿಕೆಟ್ ಘೋಷಣೆ ಮಾಡಿ ಸಂಚಲನ ಮೂಡಿಸಿದೆ. ಇಡೀ ಜಿಲ್ಲೆಯಲ್ಲೀಗ ಇವರಿಬ್ಬರ ಹಣಾಹಣಿಯ ಬಗ್ಗೆಯೇ ವ್ಯಾಪಕ ಚರ್ಚೆ ನಡೆಯುತ್ತಿದೆ.

ಚಿಕ್ಕಬಳ್ಳಾಪುರ : ಕುತೂಹಲ
ಮೂಡಿಸಿದ ಬಿಜೆಪಿ
ಕಾಂಗ್ರೆಸ್‌ ಜಿದ್ದಾಜಿದ್ದಿ

2008ರಲ್ಲಿ ಚಿಕ್ಕಬಳ್ಳಾಪುರ ನೂತನ ಜಿಲ್ಲೆಯಾಗಿ ರೂಪುಗೊಳ್ಳುವವರೆಗೂ ಮೀಸಲು ಕ್ಷೇತ್ರವಾಗಿತ್ತು. ಸಾಮಾನ್ಯ ಕ್ಷೇತ್ರವಾದ ಮೊದಲ ಚುನಾವಣೆಯಲ್ಲಿ, ಜೆಡಿಎಸ್ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಕೆ. ಪಿ. ಬಚ್ಚೇಗೌಡ ಗೆದ್ದು ಬೀಗಿದ್ದರು. ಕಾಂಗ್ರೆಸ್‌ನಿಂದ ವಿ ಅಶ್ವತ್ಥನಾರಾಯಣ ಸ್ಪರ್ಧೆ ಮಾಡಿದ್ದು, ಬಿಜೆಪಿ ಪಕ್ಷದಿಂದ ಅಭ್ಯರ್ಥಿಯೇ ಇರಲಿಲ್ಲ. 2013 ಮತ್ತು 2018ರಲ್ಲಿ ನಡೆದ ಎರಡು ವಿಧಾನಸಭಾ ಚುನಾವಣೆಯಲ್ಲಿ ಡಾ ಕೆ. ಸುಧಾಕರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಗೆದ್ದಿದ್ದರು.

ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರಿ 2019ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದರು. ಆ ಬಳಿಕದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಅಭೂತಪೂರ್ವ ಜಯ ಗಳಿಸಿದ್ದರು. ಜೆಡಿಎಸ್‌ನಿಂದ ಸ್ಪರ್ಧೆ ಮಾಡಿದ್ದ ಕೆ ಪಿ ರಾಧಾಕೃಷ್ಣ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಂ ಆಂಜಿನಪ್ಪ ಸೋಲು ಕಂಡಿದ್ದರು. ಈ ಬಾರಿ ಸುಧಾಕರ್ ಅವರನ್ನು ಸೋಲಿಸಲು ಕಾಂಗ್ರೆಸ್‌ ಗರಿಷ್ಠ ʼಪರಿಶ್ರಮʼ ಹಾಕುತ್ತಿದೆ.

ʻಪರಿಶ್ರಮ ನೀಟ್ ಅಕಾಡೆಮಿʼ ಯ ರೂವಾರಿ ಪ್ರದೀಪ್ ಈಶ್ವರ್ ಅವರು ಸುಧಾಕರ್‌ಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ. ಪ್ರದೀಪ್‌ ಈಶ್ವರ್‌ ಸಿನಿಮೀಯ ಡೈಲಾಗ್‌ಗಳ ಮೂಲಕ ಯುವ ಜನರನ್ನು ಸೆಳೆಯುತ್ತಿದ್ದಾರೆ. ಡಾ. ಕೆ ಸುಧಾಕರ್‌ ಅವರು ತಮ್ಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಫೋಕಸ್‌ ಮಾಡುತ್ತಿದ್ದಾರೆ. ಜೆಡಿಎಸ್‌ ಮಾಜಿ ಶಾಸಕ ಕೆ ಪಿ ಬಚ್ಚೇಗೌಡರು ಕೂಡ ಗೆಲುವಿಗಾಗಿ ಸೆಣಸಾಡುತ್ತಿದ್ದಾರೆ.

ಕಳೆದ ಬಾರಿಯ ಫಲಿತಾಂಶ ಏನು?
ಡಾ ಕೆ ಸುಧಾಕರ್ (ಬಿಜೆಪಿ): 84,389 | ಎಂ ಆಂಜಿನಪ್ಪ (ಕಾಂಗ್ರೆಸ್) : 49, 558 | ರಾಧಾಕೃಷ್ಣ (ಜೆಡಿಎಸ್): 35, 869 | ಡಾ ಕೆ ಸುಧಾಕರ್ ಗೆಲುವಿನ ಅಂತರ: 34, 801

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಗ್ರೌಂಡ್ ರಿಪೋರ್ಟ್

ಚಿಂತಾಮಣಿ : ಕಾಂಗ್ರೆಸ್‌
ಜೆಡಿಎಸ್‌ ನಡುವೆ
ನೇರ ಹೋರಾಟ

ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಜೆ ಕೆ ಕೃಷ್ಣಾರೆಡ್ಡಿ ನಿರೀಕ್ಷೆಯಂತೆ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದ್ದಾರೆ. ಕೆ ಎಚ್ ಮುನಿಯಪ್ಪ ಅವರ ಮೇಲಿನ ಮುನಿಸಿನಿಂದ ಕಾಂಗ್ರೆಸ್ ಪಕ್ಷದಿಂದ ದೂರ ಉಳಿದಿದ್ದ ಮಾಜಿ ಶಾಸಕ ಡಾ ಎಂ ಸಿ ಸುಧಾಕರ್ ಎರಡು ಬಾರಿ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಸೋತ ನಂತರ ಇತ್ತೀಚೆಗಷ್ಟೇ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ.

ಈ ಕ್ಷೇತ್ರದಲ್ಲಿ ನೆಲೆ ಇಲ್ಲದ ಬಿಜೆಪಿಗೆ ನೆಲೆ ಕಾಣಿಸಲು ಸಚಿವ ಡಾ ಕೆ. ಸುಧಾಕರ್ ಅವರು ಉದ್ಯಮಿ ದೇವನಹಳ್ಳಿ ಗೋಪಿ ಅಲಿಯಾಸ್ ಜಿ ಎನ್ ವೇಣುಗೋಪಾಲ್‌ಗೆ ಟಿಕೆಟ್ ನೀಡಿ ಅಖಾಡಕ್ಕೆ ಇಳಿಸಿದ್ದಾರೆ. ಅವರ ಗೆಲುವಿಗೆ ತಂತ್ರ ಹೆಣೆದಿದ್ದಾರೆ. ಚಿಂತಾಮಣಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಅಭ್ಯರ್ಥಿ ಡಾ ಎಂ. ಸಿ. ಸುಧಾಕರ್ ಹಾಗೂ ಜೆಡಿಎಸ್ ಅಭ್ಯರ್ಥಿ ಜೆ. ಕೆ. ಕೃಷ್ಣಾರೆಡ್ಡಿ ನಡುವೆ ತೀವ್ರ ಪೈಪೋಟಿ ಎದ್ದು ಕಾಣುತ್ತಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಜೆ ಕೆ ಕೃಷ್ಣಾರೆಡ್ಡಿ (ಜೆಡಿಎಸ್): 87,753 | ಡಾ ಎಂ ಸಿ ಸುಧಾಕರ್ (ಭಾರತೀಯ ಪ್ರಜಾ ಪಕ್ಷ) 82,513 | ವಾಣಿ ಕೃಷ್ಣಾರೆಡ್ಡಿ (ಕಾಂಗ್ರೆಸ್): 2,233 | ನಾ ಶಂಕರ್ (ಬಿಜೆಪಿ): 1,962 | ಗೆಲುವಿನ ಅಂತರ: 5,240

ಶಿಡ್ಲಘಟ್ಟ: ಕಾಂಗ್ರೆಸ್‌
ಬಂಡಾಯದ ಲಾಭ
ಬಿಜೆಪಿ ಪಡೆದೀತೇ?

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಪುಟ್ಟು ಆಂಜಿನಪ್ಪ ಹಾಗೂ ರಾಜೀವ್ ಗೌಡ ನಡುವೆ ಕಾಂಗ್ರೆಸ್ ಟಿಕೆಟ್‌ಗಾಗಿ ಕಿತ್ತಾಟ ನಡೆಯುತಿತ್ತು. ಆದರೆ ಅಂತಿಮವಾಗಿ ರಾಜೀವ್‌ ಗೌಡ ಅವರಿಗೆ ಟಿಕೆಟ್‌ ಸಿಕ್ಕಿದೆ. ಇವರಿಗೆ ಹಾಲಿ ಶಾಸಕ ಮುನಿಯಪ್ಪ ಅವರ ಬೆಂಬಲ ಇದೆ ಎನ್ನಲಾಗುತ್ತಿದೆ. ಹಾಗಾಗಿ ಪುಟ್ಟು ಆಂಜಿನಪ್ಪ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿದ್ದಾರೆ.

ಜೆಡಿಎಸ್ ಪಕ್ಷದಿಂದ ನಿರೀಕ್ಷೆಯಂತೆ ಮೇಲೂರು ರವಿಕುಮಾರ್ ಕಣದಲ್ಲಿದ್ದಾರೆ. ಜೆಡಿಎಸ್, ಕಾಂಗ್ರೆಸ್ ಭದ್ರಕೋಟೆಯ ಮೇಲೆ ಕಣ್ಣು ಹಾಕಿರುವ ಬಿಜೆಪಿ ಹೈಕಮಾಂಡ್‌, ಜೆಡಿಎಸ್‌ನ ಪ್ರಭಾವಿ ಶಾಸಕ ಜಿ ಟಿ ದೇವೇಗೌಡರ ಅಳಿಯ ಉದ್ಯಮಿ ಸೀಕಲ್ ರಾಮಚಂದ್ರೇಗೌಡರಿಗೆ ಟಿಕೆಟ್ ನೀಡಿದೆ. ಮಾಜಿ ಶಾಸಕ ಎಂ ರಾಜಣ್ಣ ಬೆಂಬಲ ಪಡೆದ ರಾಮಚಂದ್ರೇಗೌಡ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

ಕಾಂಗ್ರೆಸ್‌ನಲ್ಲಿ ಬಂಡಾಯದ ಹೊಗೆ, ಜೆಡಿಎಸ್‌ನಲ್ಲಿ ಪ್ರಬಲ ಅಭ್ಯರ್ಥಿ ಇಲ್ಲದೇ ಇರುವುದರಿಂದ ಈ ಬಾರಿ ಗೆಲುವು ತಮ್ಮದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ ಬಿಜೆಪಿ ಮುಖಂಡರು.

ಕಳೆದ ಬಾರಿಯ ಫಲಿತಾಂಶ ಏನು?
ವಿ ಮುನಿಯಪ್ಪ (ಕಾಂಗ್ರೆಸ್): 76, 240 | ಬಿ ಎನ್ ರವಿಕುಮಾರ್ (ಜೆಡಿಎಸ್) : 66,531 | ಪುಟ್ಟು ಆಂಜಿನಪ್ಪ (ಪಕ್ಷೇತರ) 10,596 | ರಾಜಣ್ಣ (ಪಕ್ಷೇತರ): 8,590 | ಗೆಲುವಿ ಅಂತರ : 9,709

ಬಾಗೇಪಲ್ಲಿ: ಕಾಂಗ್ರೆಸ್‌
ನಾಗಾಲೋಟ

ಸಿಪಿಐಎಂ ಪಕ್ಷದ ಭದ್ರಕೋಟೆಯಾಗಿದ್ದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರವನ್ನು ಪಕ್ಷೇತರವಾಗಿ ಸ್ಪರ್ಧೆ ಮಾಡುವ ಮೂಲಕ ತಮ್ಮ ವಶಕ್ಕೆ ಪಡೆದಿದ್ದರು ಎಸ್ ಎನ್ ಸುಬ್ಬಾರೆಡ್ಡಿ. 2013ರ ಚುನಾವಣೆಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿ 2018ರಲ್ಲಿಯೂ ಕಾಂಗ್ರೆಸ್ ಪಕ್ಷವನ್ನು ನೆಲೆ ಕಾಣಿಸಿದ್ದರು ಸುಬ್ಬಾರೆಡ್ಡಿ. ಈಗಲೂ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಎಸ್ ಎನ್ ಸುಬ್ಬಾರೆಡ್ಡಿ ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ.

ಮಾಜಿ ಶಾಸಕ ಶ್ರೀರಾಮ ರೆಡ್ಡಿ ಮರಣದ ನಂತರ ಸಿಪಿಐಎಂ ಪಕ್ಷ ಛಿದ್ರಛಿದ್ರವಾಗಿದ್ದು, ಅಳಿದುಳಿದ ಒಂದಷ್ಟು ಕಾರ್ಯಕರ್ತರು ಸಿಪಿಐಎಂ ಅಭ್ಯರ್ಥಿ ಡಾ ಅನಿಲ್ ಕುಮಾರ್ ಜೊತೆ ನಿಂತಿದ್ದಾರೆ. ಇವರಿಗೆ ಜೆಡಿಎಸ್ ಬೆಂಬಲ ನೀಡಿದೆ. ಬಿಜೆಪಿಯಿಂದ ರಿಯಲ್ ಎಸ್ಟೇಟ್ ಉದ್ಯಮಿ ಸಿ ಮುನಿರಾಜು ಸ್ಙರ್ಧೆಗೆ ಇಳಿದಿದ್ದಾರೆ. ಪಕ್ಷೇತರ ಅಭ್ಯರ್ಥಿಯಾಗಿ ಮಿಥುನ್ ರೆಡ್ಡಿ ಸ್ಪರ್ಧೆ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಸಿಪಿಐಎಂ ಅಭ್ಯರ್ಥಿಗಳ ನಡುವೆ ಇಲ್ಲಿ ತೀವ್ರ ಹಣಾಹಣಿ ಇದೆ. ಆದರೆ ಕಾಂಗ್ರೆಸ್ ಅಭ್ಯರ್ಥಿ ಎಸ್ ಎನ್ ಸುಬ್ಬಾರೆಡ್ಡಿ ಮೇಲ್ನೋಟಕ್ಕೆ ಮುನ್ನಡೆಯಲ್ಲಿದ್ದಾರೆ.

ಕಳೆದ ಬಾರಿಯ ಫಲಿತಾಂಶ ಏನು?
ಎಸ್ ಎನ್ ಸುಬ್ಬಾ ರೆಡ್ಡಿ (ಕಾಂಗ್ರೆಸ್): 65,710 | ಜಿ ವಿ ಶ್ರೀರಾಮ ರೆಡ್ಡಿ (ಸಿಪಿಐಎಂ): 51,697 | ಸಿ ಆರ್ ಮನೋಹರ್ (ಜೆಡಿಎಸ್): 38,302 | ಸಾಯಿಕುಮಾರ್ (ಬಿಜೆಪಿ): 4,140 | ಗೆಲುವಿನ ಅಂತರ: 14,013

ಗೌರಿಬಿದನೂರು :
ಸವಾಲೊಡ್ಡುತ್ತಿರುವ
ಪಕ್ಷೇತರ ಅಭ್ಯರ್ಥಿ

ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಎನ್ ಎಚ್ ಶಿವಶಂಕರೆಡ್ಡಿ ಆರನೇ ಬಾರಿ ಸ್ಪರ್ಧೆ ಮಾಡುತಿದ್ದಾರೆ. ಪಕ್ಷೇತರ ಅಭ್ಯರ್ಥಿ ಪುಟ್ಟುಸ್ವಾಮಿಗೌಡ ಇಲ್ಲಿ ಪ್ರಬಲ ಸ್ಪರ್ಧಿಯಾಗಿದ್ದಾರೆ.

ಜೆಡಿಎಸ್ ಪಕ್ಷದಿಂದ ನರಸಿಂಹರಾಜು ಕಣದಲ್ಲಿದ್ದಾರೆ. ಬಿಜೆಪಿಯಿಂದ ಡಾ ಶಶಿಧರ್ ಸ್ಪರ್ಧಿಸಿದ್ದಾರೆ. ಪುಟ್ಟುಸ್ವಾಮಿಗೌಡ ಮತ್ತು ಎನ್ ಶಿವಶಂಕರರೆಡ್ಡಿ ನಡುವೆ ತೀವ್ರ ಹಣಾಹಣಿ ನಡೆದಿದೆ.

ಕಳೆದ ಬಾರಿಯ ಫಲಿತಾಂಶ ಏನು?
ಎನ್ ಎಚ್ ಶಿವಶಂಕರ ರೆಡ್ಡಿ (ಕಾಂಗ್ರೆಸ್): 69,000 | ಸಿ ಆರ್ ನರಸಿಂಹಮೂರ್ತಿ (ಜೆಡಿಎಸ್): 59, 832 | ಕೆ ಜೈಪಾಲ್ ರೆಡ್ಡಿ (ಬಿಜೆಪಿ): 34,759 | ಗೆಲುವಿನ ಅಂತರ: 9,168

ಇದನ್ನೂ ಓದಿ : ಶಿವಮೊಗ್ಗ ಜಿಲ್ಲೆ ಕ್ಷೇತ್ರ ಸಮೀಕ್ಷೆ : ಬಿಜೆಪಿಗೆ ಪ್ರಾಬಲ್ಯ ಉಳಿಸಿಕೊಳ್ಳುವ ಸವಾಲು

Exit mobile version