ಚಿಕ್ಕಬಳ್ಳಾಪುರ: ತಾಲೂಕಿನ ಪರೇಸಂದ್ರ ಗ್ರಾಮದ ಮಂಜುನಾಥ ಕಲ್ಯಾಣ ಮಂಟಪದ ಬಳಿಯ ಸಹಾಯಕ ಪೊಲೀಸ್ ಉಪ ನಿರೀಕ್ಷಕರ ಮನೆಗೆ ದುಷ್ಕರ್ಮಿಗಳು ನುಗ್ಗಿ, ಎಎಸ್ಐ ಪುತ್ರನ ಮೇಲೆ ಗುಂಡಿನ ದಾಳಿ(Shoot Out) ನಡೆಸಿ, ಚಿನ್ನಾಭರಣ ಹಾಗೂ ನಗದು ದರೋಡೆ ಮಾಡಿದ್ದಾರೆ.
ಬಾಗೇಪಲ್ಲಿ ಠಾಣೆ ಎಎಸ್ಐ ನಾರಾಯಣಸ್ವಾಮಿ ಅವರ ಪುತ್ರ ಶರತ್ ಗಾಯಾಳು. ನಾಲ್ವರು ದುಷ್ಕರ್ಮಿಗಳು ಕಾರಿನಲ್ಲಿ ಆಗಮಿಸಿ ಏಕಾಏಕಿ ಬುಧವಾರ ಮನೆಗೆ ನುಗ್ಗಿದ್ದಾರೆ. ಯಾರೆಂದು ಕೇಳುವಷ್ಟರಲ್ಲಿ ಎಎಸ್ಐ ಪುತ್ರ ಶರತ್ ಮೇಲೆ ಬಂದೂಕಿನಿಂದ ಗುಂಡಿನ ದಾಳಿ ಮಾಡಿದ್ದಾರೆ. ಇದರಿಂದ ದೇಹಕ್ಕೆ ಮೂರು ಗುಂಡು ತಗುಲಿ ಶರತ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಇದೇ ವೇಳೆ ಶರತ್ ಪತ್ನಿ ಮೈಮೇಲಿದ್ದ ಚಿನ್ನಾಭರಣ ಹಾಗೂ ಮನೆಯಲ್ಲಿದ್ದ ನಗದನ್ನು ದೋಚಿ ಪರಾರಿಯಾಗುತ್ತಿದ್ದಾಗ, ಎಎಸ್ಐ ನಾರಾಯಣಸ್ವಾಮಿ ಮನೆಗೆ ಆಗಮಿಸಿದ್ದಾರೆ. ಅವರ ಮೇಲೂ ದುಷ್ಕರ್ಮಿಗಳು ಹಲ್ಲೆ ಮಾಡಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಗಾಯಾಳುಗಳಾದ ಶರತ್ ಹಾಗೂ ಎಎಸ್ಐ ನಾರಾಯಣಸ್ವಾಮಿ ಅವರನ್ನು ಚಿಕ್ಕಬಳ್ಳಾಪುರದ ಜೈನ್ ಆಸ್ಪತ್ರೆಗೆ ದಾಖಲಿಸಲಾಗಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅರವಿಂದ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೆರೇಸಂದ್ರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ | Watcher death | ತೊಡಿಕಾನ ಜಲಪಾತದಲ್ಲಿ ಕಾಲು ಜಾರಿ ನೀರಿಗೆ ಬಿದ್ದು ಅರಣ್ಯ ವೀಕ್ಷಕ ದುರ್ಮರಣ