ಚಿಕ್ಕಬಳ್ಳಾಪುರ: ಹುಟ್ಟುಹಬ್ಬ (Birthday) ಸಂಭ್ರಮದಿಂದ ಆಚರಿಸಿಕೊಳ್ಳಲೆಂದು ಮನೆಗೆ ಬರುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೊಬ್ಬಳು (College Student) ರಸ್ತೆ ಅಪಘಾತದಲ್ಲಿ (Road Accident) ದಾರುಣವಾಗಿ (Student Death) ಮೃತಪಟ್ಟಿದ್ದಾಳೆ. ಈ ಅಪಘಾತ ಎಸಗಿದ ಚಾಲಕ (Driver Escape) ಕಾರು ಬಿಟ್ಟು ಪರಾರಿಯಾಗಿದ್ದಾನೆ. ಯುವತಿಯ ಜನ್ಮದಿನದ ಸಂಭ್ರಮಕ್ಕೆ ತಯಾರಾಗುತ್ತಿದ್ದ ಆಕೆಯ ಮನೆ ಶೋಕಸಾಗರದಲ್ಲಿ ಮುಳುಗಿದೆ.
ಹುಟ್ಟು ಹಬ್ಬದ ದಿನವೇ ಸಾವಿಗೀಡಾದ ವಿದ್ಯಾರ್ಥಿನಿ ರಕ್ಷಿತಾ ಚಿಕ್ಕಬಳ್ಳಾಪುರ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದವಳಾಗಿದ್ದು, ಬೆಂಗಳೂರಿನ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದಳು. ಇಂದು ಮುಂಜಾನೆ ತನ್ನ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಬಾಡಿಗೆ ಕಾರಿನಲ್ಲಿ ಮನೆಗೆ ಬರುತ್ತಿದ್ದ ರಕ್ಷಿತಾಳಿಗೆ ಯಮಸ್ವರೂಪದಲ್ಲಿ ಡಿವೈಡರ್ ಎದುರಾಗಿದೆ.
ನಾಗಾರ್ಜುನ ಕಾಲೇಜಿನ ಬಳಿ ಡಿವೈಡರ್‌ಗೆ ಕಾರಿನ ಎಡಭಾಗ ಡಿಕ್ಕಿಯಾಗಿದ್ದು, ಚಾಲಕನ ಎಡಗಡೆ ಕುಳಿತಿದ್ದ ವಿದ್ಯಾರ್ಥಿನಿಗೆ ತೀವ್ರವಾದ ಗಾಯಗಳಾಗಿವೆ. ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಸೇರಿಸುವ ಯಾವುದೇ ಪ್ರಯತ್ನ ಮಾಡದೆ ಚಾಲಕ ನಿಶ್ವಾಂತ್ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಗಾಯಗೊಂಡ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಚಾಲಕ ನಿಶ್ವಾಂತ್‌ಗಾಗಿ ಪೋಲಿಸರು ಹುಡುಕಾಟ ನಡೆಸಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ನಂದಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
BMTC Bus Fire: ಎಂಜಿ ರಸ್ತೆಯಲ್ಲಿ ಸುಟ್ಟು ಭಸ್ಮವಾದ ಬಿಎಂಟಿಸಿ ಬಸ್
ಬೆಂಗಳೂರು: ರಾಜಧಾನಿಯ ಜನನಿಬಿಡ ಹಾಗೂ ವಾಹನನಿಬಿಡವಾದ ಎಂಜಿ ರೋಡ್ ನಟ್ಟ ನಡುವೆ ಬಿಎಂಟಿಸಿ ಬಸ್ ಒಂದು ಇಂದು ಬೆಳಗ್ಗೆ ಬೆಂಕಿಯ ಕೆನ್ನಾಲಗೆಗೆ ಸುಟ್ಟು ಭಸ್ಮವಾಗಿದೆ.
ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ. ರೋಸ್ ಗಾರ್ಡನ್‌ನಿಂದ ಶಿವಾಜಿನಗರದ ಕಡೆಗೆ ಹೋಗುತ್ತಿದ್ದ ಬಸ್‌ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣವೇ ಎಚ್ಚೆತ್ತುಕೊಂಡ ಬಿಎಂಟಿಸಿ ಬಸ್ ಚಾಲಕ, ನಿರ್ವಾಹಕರು ಪ್ರಯಾಣಿಕರನ್ನು ಕೆಳಗೆ ಇಳಿಸಿದರು. ಬಸ್ಸಿನಲ್ಲಿ ಸುಮಾರು 30 ಮಂದಿ ಪ್ರಯಾಣಿಕರಿದ್ದರು. ಚಾಲಕರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಧಾವಿಸಿ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು. ಈ ಘಟನೆಯಿಂದಾಗಿ, ಎಂಜಿ ರಸ್ತೆಯ ಸದಾ ದಟ್ಟ ವಾಹನನಿಬಿಡ ಸ್ಥಳವಾದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಟ್ರಾಫಿಕ್ ಅಸ್ತವ್ಯಸ್ತವಾಯಿತು. ನಡು ರಸ್ತೆಯಲ್ಲೇ ಹೊತ್ತಿ ಉರಿದ ಬಿಎಂಟಿಸಿ ಬಸ್‌ನಿಂದ ಮೇಲೆದ್ದ ಭಾರಿ ಪ್ರಮಾಣದ ಹೊಗೆ ಪಕ್ಕದಲ್ಲಿದ್ದ ಮೆಟ್ರೋ ನಿಲ್ದಾಣವನ್ನು ಸಹ ಆವರಿಸಿತು.
ಪೊಲೀಸ್‌ಗೆ ಚಾಕುವಿನಿಂದ ಇರಿದ ರೌಡಿಶೀಟರ್ ಕಾಲಿಗೆ ಗುಂಡು
ಶಿವಮೊಗ್ಗ: ಬೆಳ್ಳಂ ಬೆಳಗ್ಗೆ ಶಿವಮೊಗ್ಗದಲ್ಲಿ ರೌಡಿ ಶೀಟರ್ ಕಾಲಿಗೆ ಗುಂಡೇಟು ಹಾರಿಸಿ ಗಾಯಗೊಳಿಸಿ ಬಂಧಿಸಲಾಗಿದೆ. ಬಂಧಿಸಲು ಹೋದಾಗ ಈತ ಪೊಲೀಸ್ ಸಿಬ್ಬಂದಿ ಕಾಲಿಗೆ ಚಾಕುವಿನಿಂದ ಚುಚ್ಚಿ ಗಾಯಗೊಳಿಸಿದ್ದ.
ಶಿವಮೊಗ್ಗ ಜಿಲ್ಲೆಯ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತ್ಯಾಜ್ಯವಳ್ಳಿ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದೆ. ರಜಾಕ್ ಎಂಬಾತ ಬಂಧಿತ ರೌಡಿ. ರಜಾಕ್ ಮೇಲೆ ಕೊಲೆ ಯತ್ನ ಸೇರಿ ಐದಾರು ಗಂಭೀರ ಅಪರಾಧ ಪ್ರಕರಣಗಳು ದಾಖಲಾಗಿವೆ. ಹೊಳೆಹೊನ್ನೂರು ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಈತನ ಬಂಧನಕ್ಕೆ ತೆರಳಲಾಗಿತ್ತು.
ಈ ಸಂದರ್ಭದಲ್ಲಿ ಆರೋಪಿ ರಜಾಕ್ ಪೊಲೀಸ್ ಸಿಬ್ಬಂದಿ ಅರ್ಜುನ್ ಎಂಬವರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಈ ಸಂದರ್ಭದಲ್ಲಿ ಸಿಬ್ಬಂದಿಯನ್ನು ಪಾರು ಮಾಡಲು ಹಾಗೂ ಆತ್ಮರಕ್ಷಣೆಗಾಗಿ ಇನ್‌ಸ್ಪೆಕ್ಟರ್ ಲಕ್ಷ್ಮಿಪತಿ ರೌಡಿಶೀಟರ್ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಗೊಂಡಿರುವ ಆರೋಪಿ ರಜಾಕ್ ಹಾಗೂ ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿ ಮಾಲಿಕತ್ವದ ಪಬ್ ಮೇಲೆ ಎಫ್‌ಐಆರ್, ಅಲ್ಲೇನು ನಡೆದಿತ್ತು?