Site icon Vistara News

Road Accident : ಕಾರಿನ ಮೇಲೆ ಉರುಳಿ ಬಿದ್ದ ಟೊಮ್ಯಾಟೊ ತುಂಬಿದ ಲಾರಿ; ಮೂವರು ಸ್ಥಳದಲ್ಲೇ ದುರ್ಮರಣ

Road Accident

ಚಿಕ್ಕಬಳ್ಳಾಪುರದಲ್ಲಿ ಕಾರಿನ ಮೇಲೆ ಟೊಮ್ಯಾಟೊ ಲಾರಿ ಉರುಳಿ ಬಿದ್ದ (Road accident) ಪರಿಣಾಮ ಮೂವರ ದುರ್ಮರಣ ಹೊಂದಿದ್ದಾರೆ. ತಿರುಪತಿ ತಿಮ್ಮಪ್ಪನ ದರ್ಶನ ಮುಗಿಸಿ ವಾಪಸ್ಸಾಗುತಿದ್ದ ವೇಳೆ ಚಿತ್ತೂರು ತಿರುಪತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಕಾರು ಚಾಲಕ ರಮೇಶ್, ಮಂಜುನಾಥ್, ಮುನಿವೆಂಕಟರೆಡ್ಡಿ ಮೃತ ದುರ್ದೈವಿಗಳು. ರಸ್ತೆ ಬದಿಯಲ್ಲಿದ್ದ ಕಾರಿನ ಮೇಲೆ ಲಾರಿ ಉರುಳಿದೆ.

ಅದೃಷ್ಟವಶಾತ್ ಕಾರಿನಲ್ಲಿದ್ದ ಚಿಕ್ಕಬಳ್ಳಾಪುರ ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ತೇಜಸ್ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಲಾರಿ ಬಿದ್ದ ರಭಸಕ್ಕೆ ತೇಜಸ್‌ಗೂ ಗಾಯವಾಗಿದ್ದು, ಚಿಕ್ಕಬಳ್ಳಾಪುರದ ಜೀವನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಘಟನೆಯಿಂದಾಗಿ ಕೆಲಕಾಲ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಜಯಪುರದಲ್ಲಿ ಆಟೋ-ಕ್ಯಾಂಟರ್ ಡಿಕ್ಕಿ, ಓರ್ವ ಸಾವು

ಆಟೋ ಮತ್ತು ಕ್ಯಾಂಟರ್ ವಾಹನ ನಡುವೆ ಅಪಘಾತ ಸಂಭವಿಸಿದ್ದು, ಚವನಭಾವಿ ಗ್ರಾಮದ ಕರೆಪ್ಪ ನಾಲತವಾಡ (55) ಎಂಬುವವರು ಸ್ಥಳದಲ್ಲಿ ಮೃತಪಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ಅಡವಿ ಸೋಮನಾಳ ಕ್ರಾಸ್ ಹತ್ತಿರ ಅಪಘಾತ ನಡೆದಿದೆ. ಆಟೋ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುದ್ದೇಬಿಹಾಳ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Murder Case : ಹಾಸನದಲ್ಲಿ ಚಾಕುವಿನಿಂದ ಇರಿದು ವಾಟರ್‌ಮ್ಯಾನ್‌ನ ಬರ್ಬರವಾಗಿ ಕೊಂದ ರೌಡಿಶೀಟರ್‌

ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿ

ಕೋಲಾರದ ಪೂತಲಪಟ್ಟು ಬಂಗೂರಪಾಳ್ಯಂ ಮಂಡಲದ ಗಾಜುಲಪಲ್ಲಿಯಲ್ಲಿ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾರಿನ ಟೈರ್ ಪಂಕ್ಚರ್ ಆಗಿ ಡಿವೈಡರ್‌ಗೆ ಡಿಕ್ಕಿ ಹೊಡೆದು, ಪಲ್ಟಿಯಾಗಿದೆ. ಇದರಲ್ಲಿ ಒಂದು ಮಗು ಗಾಯಗೊಂಡಿದ್ದು, ಮೃತರು ಬೆಂಗಳೂರಿನವರು ಎಂದು ತಿಳಿದು ಬಂದಿದೆ. ಬೆಂಗಳೂರಿನಿಂದ ತಿರುಮಲ ಸ್ವಾಮಿಯ ದರ್ಶನಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಗಾಯಾಳುಗಳನ್ನು 108 ಮೂಲಕ ಚಿತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಬಂಗೂರಪಾಳ್ಯಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಮಗಳೂರಿನಲ್ಲಿ ಆಟೋಗೆ ಖಾಸಗಿ ಬಸ್ ಡಿಕ್ಕಿ

ಆಟೋಗೆ ಖಾಸಗಿ ಬಸ್‌ವೊಂದು ಡಿಕ್ಕಿ ಹೊಡೆದಿದ್ದು, ಓರ್ವ ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ನಗರದ ತೇಗೂರು ಸರ್ಕಲ್‌ನಲ್ಲಿ ಘಟನೆ ನಡೆದಿದೆ. ನಲ್ಲೂರು ಗ್ರಾಮದ ರಘು, ಮಲ್ಲೆದೇವರಹಳ್ಳಿ ಗ್ರಾಮದ ಮತ್ತೋರ್ವ ಮೃತ ದುರ್ದೈವಿ. ಕಳೆದ ರಾತ್ರಿ 1 ಗಂಟೆಗೆ ಅಪಘಾತ ನಡೆದಿದೆ. ರಸ್ತೆಯ ಬದಿಯ ಹೂವಿನ ಅಂಗಡಿ ಸಂಪೂರ್ಣ ಜಖಂಗೊಂಡಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version