Site icon Vistara News

BJP Karnataka: ಬಿಜೆಪಿಯಲ್ಲಿ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಇದೆ: ಖುಲ್ಲಂ ಖುಲ್ಲಾ ಒಪ್ಪಿಕೊಂಡ ರಾಷ್ಟ್ರೀಯ ಮುಖಂಡ!

bjp karnataka

ನವದೆಹಲಿ: ರಾಜ್ಯ ಬಿಜೆಪಿಯ ಅನೇಕ ನಾಯಕರು ವಿವಿಧ ಪಕ್ಷಗಳ ಜತೆಗೆ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಮಾಡುತ್ತಾರೆ ಎಂಬ ಆರೋಪಗಳನ್ನು ಇದೀಗ ಬಿಜೆಪಿ ಒಪ್ಪಿಕೊಂಡಿದೆ. ಬಿಜೆಪಿಯಲ್ಲಿ ಅಡ್ಜಸ್ಟ್‌ಮೆಂಟ್‌ ರಾಜಕಾರಣ ಇದೆ, ಅದರಿಂದಾಗಿಯೇ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒಪ್ಪಿದ್ದಾರೆ.

ಮಾಜಿ ಸಚಿವರೂ ಆದ ಸಿ.ಟಿ. ರವಿ ಅವರು ಕಾಂಗ್ರೆಸ್‌ನ ಎಚ್‌.ಡಿ. ತಮ್ಮಯ್ಯ ಅವರ ವಿರುದ್ಧ ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸೋತ ಕುರಿತು ಪ್ರತಿಕ್ರಿಯಿಸಿದ ಸಿ.ಟಿ. ರವಿ, ಬಿಜೆಪಿ ಸೋಲೋಕೇ ಕಾರಣ ನಮ್ಮದೇ ತಪ್ಪಿನಿಂದ ಎಂದಿದ್ದಾರೆ.

ನಾವು ಮಾಡಿದ ತಪ್ಪಿನಿಂದಲೇ ಇವತ್ತು ನಾವು ಅಧಿಕಾರ ಕಳೆದುಕೊಂಡಿದ್ದು. ನಮ್ಮಲ್ಲೂ ರಾಜಿ ರಾಜಕಾರಣ ಮಾಡಿ ತಪ್ಪು ಮಾಡಿದ್ದಾರೆ. ಕೆಲವರ ರಾಜಿ ರಾಜಕಾರಣದಿಂದ ಬಿಜೆಪಿ ಪಕ್ಷ ಅಧಿಕಾರ ಕಳೆದುಕೊಂಡಿತು. ಹೊಂದಾಣಿಕೆ ರಾಜಕಾರಣದಿಂದ ಬಿಜೆಪಿ ಸೋತಿದೆ. ಇವತ್ತು ಅಧಿಕಾರ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ.

ಯಾರು ಅಂತ ನಾನು ಹೆಸರು ಹೇಳೋದಿಲ್ಲ, ಆದ್ರೆ ಅಡ್ಜಸ್ಟ್ಮೆಂಟ್ ರಾಜಕೀಯ ಇದೆ. ಅಡ್ಜಸ್ಟ್‌ಮೆಂಟ್‌ ರಾಜಕೀಯದಿಂದಲೇ ನಮ್ಮ ಪಕ್ಷ ಸೋಲು ಅನುಭವಿಸಿದೆ ಎಂದು ತಮ್ಮ ಪಕ್ಷದ ನಾಯಕರ ವಿರುದ್ಧವೇ ಸಿ.ಟಿ‌ ರವಿ ಬಹಿರಂಗ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿರುವ ಕುರಿತು ಪ್ರತಿಕ್ರಿಯಿಸಿದ ಸಿ.ಟಿ. ರವಿ, ಕಾರ್ಲ್ ಮಾರ್ಕ್ಸ್ ಪಠ್ಯ ಓದಬಹುದು ಆರ್‌ಎಸ್‌ಎಸ್‌ ನಾಯಕರದ್ದು ಬೇಡವೇ? ಇವರ ನೆರವು ಇಲ್ಲದೆ ಸಂಘದ ಶಾಖೆಯ ಮೂಲಕವೇ ವಿಚಾರ ಬೆಳೆಯಲಿದೆ. ಪಠ್ಯದಿಂದ ಹೊರಹಾಕಬಹುದು, ಹೃದಯದಿಂದ ಹೊರಹಾಕಲು ಸಾಧ್ಯವಿಲ್ಲ.

ನೆಹರು, ಇಂದಿರಾ ಈ ಕೆಲಸ ಮಾಡಲು ಹೋಗಿ ಸೋತಿದ್ದಾರೆ. ಸುಳ್ಳು ಮತ್ತು ಕಾಂಗ್ರೆಸ್, ಒಂದೇ ನಾಣ್ಯದ ಎರಡು ಮುಖಗಳು. ಕಾಂಗ್ರೆಸ್ ನಾಯಕರು ಕುರ್ಚಿಗೆ ಅಂಗಲಾಚಿದ್ದರು. ಕಾಂಗ್ರೆಸ್‌ನವರನ್ನು ಯಾಕೆ‌ ಅಂಡಮಾನ್ ಜೈಲಿಗೆ ಹಾಕಲಿಲ್ಲ? ಕೇವಲ ಸಾವರ್ಕರ್ ರನ್ನ ಮಾತ್ರ ಯಾಕೆ ಜೈಲಿಗೆ ಹಾಕಿದ್ದು? ನೆಹರು ಅವ್ರನ್ನ ಯಾಕೆ ಅಲ್ಲಿಗೆ ಕಳ್ಸಿಲ್ಲ?

ಸೂಲಿಬೆಲೆ ಬೆಂಗಲಿಗರು ತುಂಬಾ ಜನರು ಇದ್ದಾರೆ. ದೇಶಭಕ್ತಿಯ ಕಾರಣಕ್ಕೆ ಸೂಲಿಬೆಲೆ ಪ್ರಖ್ಯಾತರಾಗಿದ್ದಾರೆ. ಅವರ ಪ್ರಖ್ಯಾತಿ ಕುಗ್ಗಿಸೋಕೆ ಆಗಲ್ಲ. ಕಾಂಗ್ರೆಸ್‌ನವರು ಮತ್ಸರ, ದ್ವೇಷ ಹೊರಹಾಕುತ್ತಿದ್ದಾರೆ. ಅಧಿಕಾರದ ಮದವನ್ನು ಜನರು ಇಳಿಸುತ್ತಾರೆ. ಸದ್ದಿದ್ದಲದೆ ವಿದ್ಯುತ್ ಬಿಲ್ ಏರಿಸುತ್ತಿದ್ದಾರೆ, ಹಾಲಿನ ದರ ಏರಿಸುತ್ತಿದ್ದಾರೆ. ಅತ್ತೆ ಆಸ್ತಿಯನ್ನು ಅಳಿಯ ದಾನ ಮಾಡಿದಂತೆ ಆಯ್ತು ಇವರ ಕಥೆ. KKRDB ಅಕ್ರಮ ಆಗಿದ್ರೆ ಕ್ರಮ ತೆಗೆದುಕೊಳ್ಳಿ. ಅರ್ಕಾವತಿ ಹಗರಣವನ್ನು ತನಿಖೆ ಮಾಡಿ. 8000 ಕೋಟಿ ರೂ. ನಷ್ಟದ ಬಗ್ಗೆಯೂ ತನಿಖೆ ಮಾಡಲಿ. ತೆರಿಗೆ ಕಟ್ಟುವವರ ಮೇಲೆ ಯಾಕೆ ಬರೆಹಾಕ್ತೀರಿ? ಸೋಲಾರ್ ಪವರ್ ಪ್ಲಾಂಟ್‌ನಲ್ಲಿರುವ ಅಕ್ರಮದ ಬಗ್ಗೆಯೂ ತನಿಖೆ ನಡೆಯಲಿ. ಇದರ ಹಿಂದೆ ಯಾರಿದ್ದಾರೆ ಅನ್ನೋದು ಗೊತ್ತಿಲ್ವಾ.? ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಭಯವೇ ಎಂದು ಸಿ.ಟಿ. ರವಿ ಪ್ರಶ್ನಿಸಿದರು.

ಇದನ್ನೂ ಓದಿ: Karnataka Govt: ಬಿಜೆಪಿ ಸರ್ಕಾರದ ಅವಧಿಯ ನೇಮಕಕ್ಕೆ ಗ್ರಹಣ: ಸರ್ಕಾರಿ ವಕೀಲರ ನೇಮಕ ಅಕ್ರಮ ತನಿಖೆ

Exit mobile version