ಬೆಂಗಳೂರು: ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿರುವಂತೆ ಬಿಜೆಪಿಯಲ್ಲಿ (BJP Karnataka) ಮುಸುಕಿನ ಗುದ್ದಾಟಗಳು ಹೆಚ್ಚಾಗಿ ಕಾಣಿಸುತ್ತಿದ್ದು, ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರು ತಮಗೆ ಟಿಕೆಟ್ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳುತ್ತಿದ್ದಾರೆ.
ವಿಜಯ ಸಂಕಲ್ಪ ಯಾತ್ರೆಯು ಗುರುವಾರ ಮೂಡಿಗೆರೆಯಲ್ಲಿ ಆಯೋಜನೆಯಾಗಿತ್ತು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಗಮಿಸಿದ್ದರಾದರೂ ಸ್ಥಳೀಯ ಕಾರ್ಯಕರ್ತರು ಎಂ.ಪಿ. ಕುಮಾರಸ್ವಾಮಿ ವಿರುದ್ಧ ಪ್ರತಿಭಟನೆ ಮಾಡಿದ್ದರು. ಸಿ.ಟಿ. ರವಿ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಜತೆಗೂ ಕಾರ್ಯಕರ್ತರು ವಾಗ್ವಾದ ನಡೆಸಿದ್ದರು.
ಇದರಿಂದ ಸಿಟ್ಟಾದ ಬಿ.ಎಸ್. ಯಡಿಯೂರಪ್ಪ, ಯಾತ್ರೆಯಲ್ಲಿ ಭಾಗವಹಿಸದೆ ತೆರಳಿದ್ದರು. ದಲಿತನಾದ ತಮ್ನನ್ನು ತುಳಿಯಲು ಕೆಲವರು ಪ್ರಯತ್ನಿಸುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದರು.
ಈ ಗೊಂದಲಕ್ಕೆ ಸಿ.ಟಿ. ರವಿ ಹಾಗೂ ಎಂ.ಕೆ. ಪ್ರಾಣೇಶ್ ಕಾರಣ ಎಂದು ಆರೋಪಿಸುತ್ತಿರುವ ಎಂ.ಪಿ. ಕುಮಾರಸ್ವಾಮಿ ಬೆಂಗಳೂರಿಗೆ ಆಗಮಿಸಿದ್ದಾರೆ. ಬೆಂಗಳೂರಿನಲ್ಲಿ ವಿವಿಧ ನಾಯಕರನ್ನು ಭೇಟಿ ಮಾಡುತ್ತಿರುವ ಕುಮಾರಸ್ವಾಮಿ ಈ ವಿಚಾರವನ್ನು ಪ್ರಸ್ತಾಪಿಸುತ್ತಿದ್ದಾರೆ.
ಎಂ.ಕೆ. ಪ್ರಾಣೇಶ್ ವಿಧಾನ ಪರಿಷತ್ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಗೆಲ್ಲಲು ಎಂ.ಪಿ. ಕುಮಾರಸ್ವಾಮಿ ಕೆಲಸ ಮಾಡದೆ ಇರುವುದೇ ಕಾರಣ ಎನ್ನುವುದು ಬೇಸರಕ್ಕೆ ಕಾರಣ ಎನ್ನಲಾಗಿದೆ. ಪ್ರಾಣೇಶ್ ಅವರನ್ನು ಸೋಲಿಸಬೇಕು ಎಂದು ಕುಮಾರಸ್ವಾಮಿ ಬಯಸಿದ್ದರು ಎಂಬ ಕಾರಣಕ್ಕೆ ಅವರಿಗೆ ಟಿಕೆಟ್ ತಪ್ಪಿಸಲು ಇಬ್ಬರೂ ಪ್ರಯತ್ನಿಸುತ್ತಿದ್ದಾರೆ. ಟಿಕೆಟ್ ನೀಡಿದರೆ ಜಯಿಸುವುದಾಗಿ ನಾಯಕರಿಗೆ ಕುಮಾರಸ್ವಾಮಿ ಭರವಸೆ ನೀಡುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Cheque bounce : ಚೆಕ್ ಬೌನ್ಸ್ ಕೇಸ್; ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿಗೆ 6 ತಿಂಗಳು ಜೈಲು ಶಿಕ್ಷೆ