ಚಿಕ್ಕಮಗಳೂರು: ವಿಧಾನ ಪರಿಷತ್ ಬಿ.ಕೆ. ಹರಿಪ್ರಸಾದ್ ರೀತಿ ನಾನು ಕೊತ್ವಾಲ್ ರಾಮಚಂದ್ರನ ಗ್ಯಾಂಗ್‌ಗೆ ಸೇರಿದವನಲ್ಲ, ಹಫ್ತಾ ವಸೂಲಿ ಮಾಡುತ್ತಿರಲಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
ಪಿಎಫ್‌ಐ ಬ್ಯಾನ್ ನಂತರ ಆರ್‌ಎಸ್‌ಎಸ್ ಹಾಗೂ ಇನ್ನಿತರ ವಿಚಾರಗಳ ಕುರಿತು ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂವಿಧಾನದಲ್ಲಿ ಕುಟುಂಬ ರಾಜಕಾರಣಕೆಕ ಒತ್ತು ಕೊಟ್ಟಿದೆಯೇ? ಸಂವಿಧಾನ ಪ್ರಜಾಪ್ರಭುತ್ವಕ್ಕೆ, ಸಮಾನ ಅವಕಾಶಕ್ಕೆ ಒತ್ತುಕೊಟ್ಟಿದೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಏನೆಲ್ಲ ಮಾಡಿಕೊಂಡು ಸಂವಿಧಾನದ ಬಗ್ಗೆ ಇವರು ಮಾಥನಾಡುತ್ತಾರೆ. ಹರಿಪ್ರಸಾದ್ ರೀತಿಯಲ್ಲಿ ನಾನು ಕೊತ್ವಾಲ್ ರಾಮಚಂದ್ರನ ಶಿಷ್ಯ ಅಲ್ಲ.
ನನಗೆ, ಹಫ್ತಾ ವಸೂಲಿ ಮಾಡಿದ ವ್ಯಕ್ತಿತ್ವ ಇಲ್ಲ. ಅವರಿಂದ ನನಗೆ ಪ್ರಮಾಣಪತ್ರ ಬೇಕಾಗಿಲ್ಲ. ನಾನೇನು ಎನ್ನುವುದು ಚಿಕ್ಕಮಗಳೂರು ಜನರಿಗೆ ಗೊತ್ತಿದೆ. ನನ್ನನ್ನು ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಇಲ್ಲಿವರೆಗೆ ಕಾರ್ಪೊರೇಷನ್‌ನಿಂದ ಪಾರ್ಲಿಮೆಂಟ್‌ವರೆಗೆ ಹರಿಪ್ರಸಾದ್ ಒಂದು ಚುನಾವಣೆಯನ್ನೂ ಗೆದ್ದಿಲ್ಲ. ಅವರ ಮುಖ ನೋಡಿದರೆ ಯಾರೂ ಓಟ್ ಹಾಕುವುದಿಲ್ಲ. ಒಂದು ಕಾಲದಲ್ಲಿ ಹಫ್ತಾ ವಸೂಲಿ ಗ್ಯಾಂಗ್‌ನಲ್ಲಿದ್ದವರು ಇವರೆಲ್ಲ. ಇವರು ಲೀಡರ್ ಎಂದು ಲೇಬಲ್ ಹಾಕಿಕೊಂಡರೆ ಲೀಡರ್ ಆಗಿಬಿಡುತ್ತಾರ? ಎಂದು ಪ್ರಶ್ನಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಸಿ.ಟಿ. ರವಿ, ಆರ್‌ಎಸ್‌ಎಸ್ ಬ್ಯಾನ್ ಮಾಡುವುದು ಎಂದರೆ ಏನೆಂದು ತಿಳಿದುಕೊಂಡಿದ್ದಾರೆ? ಮಾತನಾಡುವ ಮುಂಚೆ ಎಚ್ಚರಿಕೆ ವಹಿಸಿ ಮಾತನಾಡಿ. 1925ನೇ ಇಸವಿಯಿಂದಲೂ ಆರ್.ಎಸ್.ಎಸ್. ದೇಶಭಕ್ತ ಸಂಘಟನೆ. ಬಾಹ್ಯ ಅಕ್ರಮಣ ಮತ್ತು ಪ್ರಕೃತಿ ವಿಕೋಪಗಳಾದಾಗ ದೇಶದ ಜತೆ ನಿಂತಿದ್ದು ಆರ್‌ಎಸ್‌ಎಸ್. ಆರ್‌ಎಸ್‌ಎಸ್ ಸ್ವಯಂಸೇವಕನೇ ದೇಶದ ಪ್ರಧಾನಿಯಾಗಿದ್ದಾರೆ. ನಿಷೇಧ ಮಾಡಲು ಒಂದು ಕಾರಣ ಬೇಕಲ್ವಾ? ಎಂದು ಪ್ರಶ್ನಿಸಿದ್ದಾರೆ ದೇಶಭಕ್ತಿ ಹಾಗೂ ದೇಶದ್ರೋಹ ಎರಡರ ನಡುವಿನ ವ್ಯತ್ಯಾಸ ನಿಮಗೆ ಗೊತ್ತಿಲ್ಲವೇ? ಎಂದಿದ್ದಾರೆ.
ಅಲ್ಪಸಂಖ್ಯಾತರ ವೋಟಿಗೆ ಆಸೆ ಪಟ್ಟು ದೇಶದ್ರೋಹದ ಕೆಲಸಕ್ಕೆ ಕಾಂಗ್ರೆಸ್-ಜೆಡಿಎಸ್ ಕುಮ್ಮಕ್ಕು ನೀಡುತ್ತಿವೆ. ಬದುಕು, ಜೀವನ, ಅಧಿಕಾರಕ್ಕಿಂತ ದೇಶ ದೊಡ್ಡದು. ಆದರೆ, ಆದರೆ, ಅವರಿಗೆ ದೇಶ ಹಾಳಾದರೂ ಪರವಾಗಿಲ್ಲ ಅಧಿಕಾರ ಬೇಕು. ದೇಶದ್ರೋಹಿಗಳ ಜೊತೆ ಸೇರಿ ದೇಶಪ್ರೇಮಿಗಳನ್ನು ಅವಮಾನಿಸಿದರೆ ನೀವೂ ಉಳಿಯುವುದಿಲ್ಲ. ದೇಶದ್ರೋಹ ಮಾಡುವರನ್ನು ಹೊರ ಹಾಕಬೇಕು, ಬ್ಯಾನ್ ಮಾಡಬೇಕು. ದೇಶಪ್ರೇಮಿಗಳನ್ನು ಹೊರ ಹಾಕಿದರೆ ದೇಶವನ್ನು ಉಳಿಸಿಕೊಳ್ಳುವವರು ಯಾರು ಎಂದು ಕಾಂಗ್ರೆಸ್-ಜೆಡಿಎಸ್‍ಗೆ ತಿವಿದರು.
ಇದನ್ನೂ ಓದಿ | ಭಾರತ್ ಜೋಡೋ ಯಾತ್ರೆ | ರಾಹುಲ್ ಗಾಂಧಿಯೇ ಸೋತು ಸುಣ್ಣ ಆಗಿದ್ದಾರೆ, ಇನ್ನೆಂಥ ಹುರುಪು ತುಂಬ್ತಾರೋ ನೋಡೋಣ ಎಂದ ಸಿ.ಟಿ. ರವಿ