ಪ್ರವೀಣ್ ಕುಮಾರ್, ವಿಸ್ತಾರ ನ್ಯೂಸ್, ಚಿಕ್ಕಮಗಳೂರು
ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕಾಫಿನಾಡು ಚಿಕ್ಕಮಗಳೂರು ಕಳೆದೆರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿ ರೂಪುಗೊಂಡಿದೆ. ಈ ಚುನಾವಣೆಯಲ್ಲಿ (Karnataka Election 2023) ಬಿಜೆಪಿ ತನ್ನ ಭದ್ರಕೋಟೆಯನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರೆ ಇತ್ತ ಕಾಂಗ್ರೆಸ್ ತನ್ನ ವೈಭವದ ದಿನಗಳನ್ನು ನೆನಪಿಸಿಕೊಂಡು ಮರಳಿ ಜಿಲ್ಲೆಯನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ.
ಜಿಲ್ಲೆಯ ಐದು ಕ್ಷೇತ್ರಗಳಲ್ಲಿಯೂ ತ್ರಿಕೋನ ಸ್ಪರ್ಧೆ ನಡೆಯುತ್ತಿದ್ದು, ಜೆಡಿಎಸ್ ಕೂಡ ತನ್ನ ಪ್ರಾಬಲ್ಯವನ್ನು ಮರು ಸ್ಥಾಪಿಸಿಕೊಳ್ಳಲು ಹೆಣಗುತ್ತಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಗೆದ್ದು ಬೀಗಿತ್ತು. ಕೇವಲ ಒಂದು ಸ್ಥಾನದಲ್ಲಿ ಕಾಂಗ್ರೆಸ್ ಗೆಲ್ಲುವ ಮೂಲಕ ತೃಪ್ತಿ ಪಟ್ಟಿತ್ತು. ಈ ಬಾರಿ ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ ಕ್ಷೇತ್ರಗಳು ಜಿದ್ದಾಜಿದ್ದಿಗೆ ಕಾರಣವಾಗಿದ್ದು ತೀವ್ರ ಕುತೂಹಲ ಮೂಡಿಸಿವೆ.
ಕೂಡೂರಿನಲ್ಲಿ ಮಾಜಿ ಸಚಿವ ವೈಎಸ್‌ವಿ ದತ್ತಾ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರಾದರೂ ಅಲ್ಲಿ ಟಿಕೆಟ್ ಸಿಗದೇ ಮರಳಿ ಜೆಡಿಎಸ್‌ಗೆ ಬಂದು ಪಕ್ಷದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಕಡೂರಿನಲ್ಲಿ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಶಾಸಕ ಎಂಪಿ ಕುಮಾರಸ್ವಾಮಿ ಪಕ್ಷ ಬಿಟ್ಟು ಜೆಡಿಎಸ್ ಸೇರಿ ಆ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಇದನ್ನು ಬಿಟ್ಟರೆ ಬೇರೆ ಮಹತ್ವದ ರಾಜಕೀಯ ಬೆಳವಣಿಗೆಗಳು ಜಿಲ್ಲೆಯಲ್ಲಿ ಸಂಭವಿಸಿಲ್ಲ.
ಚಿಕ್ಕಮಗಳೂರು : ಬಿಜೆಪಿ
ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿ
ಕಳೆದ ನಾಲ್ಕು ಚುನಾವಣೆಗಳಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿರುವ ಮಾಜಿ ಸಚಿವ ಸಿ. ಟಿ. ರವಿ ಈ ಕ್ಷೇತ್ರವನ್ನು ಬಿಜೆಪಿಯ ಭದ್ರಕೋಟೆಯಾಗಿಸಿದ್ದಾರೆ. ಆದರೆ ಈ ಬಾರಿ ಕಾಂಗ್ರೆಸ್ ತೀವ್ರ ಸವಾಲೊಡ್ಡುತ್ತಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಬಿಜೆಪಿಯಿಂದ ಸಿಡಿದೆದ್ದು ಕಾಂಗ್ರೆಸ್ ಸೇರಿರುವ ಸಿ.ಟಿ.ರವಿ ಅವರ ಆಪ್ತ ಎಚ್ ಡಿ ತಮ್ಮಯ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಿಜೆಪಿಗೆ ಸಂಕಷ್ಟ ತಂದಿದ್ದಾರೆ.
ಜನತಾಪರಿವಾರದ ನೆಲೆ ಹೊಂದಿರುವ ಈ ಕ್ಷೇತ್ರದಲ್ಲಿ ಜೆಡಿಎಸ್ ನೆಪ ಮಾತ್ರಕ್ಕೆ ಸ್ಪರ್ಧೆ ಮಾಡುತ್ತಿದೆ. ಜೆಡಿಎಸ್ ಅಭ್ಯರ್ಥಿ ತಿಮ್ಮ ಶೆಟ್ಟಿ ಕಣದಲ್ಲಿ ಇದ್ದರಾದರೂ ಯಾವುದೇ ಪ್ರಚಾರ ನಡೆಸದೇ ದೂರ ಉಳಿದಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಒಂದಾಗಿ ಸಿ.ಟಿ. ರವಿಯನ್ನು ಈ ಬಾರಿ ಶತಾಯಗತಯಾ ಸೋಲಿಸಲು ರಣತಂತ್ರ ರೂಪಿಸಿವೆ.
ಸೋಲಿಲ್ಲದ ಸರದಾರ ಎಂದು ಬಿಂಬಿತವಾಗಿರುವ ಸಿ. ಟಿ. ರವಿ ಈ ಬಾರಿಯೂ ಗೆಲ್ಲುವ ಫೇವರೆಟ್ ಅಭ್ಯರ್ಥಿ ಎಂದೆ ಬಿಂಬಿತರಾಗಿದ್ದಾರೆ. ಆದರೂ ಕ್ಷೇತ್ರದಲ್ಲಿ ಹೆಚ್ಚಿರುವ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಎಚ್. ಡಿ. ತಮ್ಮ ಯ್ಯರನ್ನು ಕಣಕ್ಕಿಳಿಸಿ ಸಿ ಟಿ ರವಿ ಮಣಿಸಲು ಸಾಕಷ್ಟು ಪ್ರಯತ್ನನಡೆಸಿದೆ. ಮಾಜಿ ಸಿಎಂ ಕುಮಾರಸ್ವಾಮಿ ಆಪ್ತ ಎಸ್ ಎಲ್ ಭೋಜೇಗೌಡ ನೇರವಾಗಿ ಕಾಂಗ್ರೆಸ್ ಪರ ಪ್ರಚಾರ ನಡೆಸುತ್ತಿದ್ದು, ಕಾಂಗ್ರೆಸ್ ಗೆಲುವಿಗೆ ತಂತ್ರ ರೂಪಿಸುತ್ತಿದ್ದಾರೆ.
ಕಳೆದ ಚುನಾವಣೆಯ ಫಲಿತಾಂಶ ಏನು?
ಸಿ ಟಿ ರವಿ (ಬಿಜೆಪಿ) : 70,863 – ಬಿ ಎಲ್ ಶಂಕರ್ (ಕಾಂಗ್ರೆಸ್): 44,549- ಬಿ.ಎಚ್ ಹರೀಶ್ (ಜೆಡಿಎಸ್)- 38,317- ಗೆಲುವಿನ ಅಂತರ: 26,314
ತರೀಕೆರೆ : ಕಾಂಗ್ರೆಸ್‌ಗೆ
ಬಂಡಾಯದ ಬಿಸಿ
ಕಿಸಾನ್ ಮಜ್ದೂರ್ ಪ್ರಜಾ ಪಕ್ಷ, ಜನತಾ ಪಕ್ಷ, ಪ್ರಜಾ ಸಮಾಜವಾದಿ ಪಕ್ಷ ಹೀಗೆ ಇತರ ಪಕ್ಷಗಳ ಅಭ್ಯರ್ಥಿಗಳನ್ನೂ ಗೆಲ್ಲಿಸಿದ ಇತಿಹಾಸ ಹೊಂದಿರುವ ತರೀಕೆರೆಯಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಡಿ ಎಸ್ ಸುರೇಶ್ ಅನಾಯಾಸವಾಗಿ ಗೆದ್ದಿದ್ದರು. ಪಕ್ಷ ಈ ಬಾರಿಯೂ ಶಾಸಕ ಡಿ ಎಸ್ ಸುರೇಶ್ ಅವರಿಗೇ ಟಿಕೆಟ್ ನೀಡಿದೆ. ಕಳೆದ ನಾಲ್ಕು ಚುನಾವಣೆಗಳಲ್ಲಿ ಒಮ್ಮೆ ಗೆದ್ದವರು ಮತ್ತೆ ಇಲ್ಲಿ ಗೆದ್ದಿಲ್ಲ. ಹೀಗಾಗಿ ಈ ಬಾರಿ ಏನಾಗುತ್ತದೆ ಎಂಬುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಈ ಬಾರಿ ಕಾಂಗ್ರೆಸ್‌ನಲ್ಲಿ ಬರೋಬ್ಬರಿ 12ಕ್ಕೂ ಹೆಚ್ಚು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದರು. ಆದರೂ ಕಾಂಗ್ರೆಸ್ ಹೈಕಮಾಂಡ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತ ಜಿ ಎಸ್ ಶ್ರೀನಿವಾಸ್ ಗೆ ಟಿಕೆಟ್ ನೀಡಿದೆ. ಟಿಕೆಟ್ ಆಕಾಂಕ್ಷಿಯಾಗಿದ್ದ ಗೋಪಿಕೃಷ್ಣ ಟಿಕೆಟ್ ಸಿಗದೇ ಇದ್ದುದ್ದರಿಂದ ಬಂಡಾಯವೆದ್ದು, ಪಕ್ಷೇತರ ಅಭ್ಯರ್ಥಿಯಾಗಿ ತೊಡೆತಟ್ಟಿದ್ದಾರೆ. ಸತತ ಎರಡು ಚುನಾವಣೆಯಲ್ಲಿನ ಸೋತಿದ್ದಾರೆ ಎಂಬ ಅನುಕಂಪ ಗೋಪಿ ಕೃಷ್ಣ ಪರವಿದೆ. ಇವರಲ್ಲದೆ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ದೋರನಾಳು ಪರಮೇಶ್ ಕೂಡ ಕಣದಲ್ಲಿದ್ದಾರೆ. ಇವರಿಬ್ಬರ ಸ್ಪರ್ಧೆ ಕಾಂಗ್ರೆಸ್‌ಗೆ ದೊಡ್ಡ ಸವಾಲಾಗಿದೆ.
ಒಟ್ಟಾರೆಯಾಗಿ ಕಾಂಗ್ರೆಸ್, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಗೋಪಿಕೃಷ್ಣ ರ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಇಲ್ಲಿ ಜೆಡಿಎಸ್ ಅಭ್ಯರ್ಥಿ ಕಣದಲ್ಲಿದ್ದಾರೆಯಾದರೂ ಪೈಪೋಟಿಯಲ್ಲಿಲ್ಲ.
ಕಳೆದ ಚುನಾವಣೆಯ ಫಲಿತಾಂಶ ಏನು?
ಡಿ ಎಸ್ ಸುರೇಶ್ (ಬಿಜೆಪಿ): 44, 960- ಶ್ರೀನಿವಾಸ್ ಜಿ ಎಚ್ (ಪಕ್ಷೇತರ) :33, 253- ಗೋಪಿ ಕೃಷ್ಣ (ಪಕ್ಷೇತರ): 29, 663- ಎಸ್ ಎಂ ನಾಗರಾಜು (ಕಾಂಗ್ರೆಸ್):20, 406 -ಗೆಲುವಿನ ಅಂತರ: 11,707
ಕಡೂರು: ಈ ಬಾರಿಯೂ
ತ್ರಿಕೋನ ಸ್ಪರ್ಧೆ
ಕಡೂರು ವಿಧಾನಸಭಾ ಕ್ಷೇತ್ರ ಈ ಬಾರಿಯ ಹೈ ವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ಬೆಳ್ಳಿ ಪ್ರಕಾಶ್ ಹಾಗೂ ಜೆಡಿಎಸ್ ಅಭ್ಯರ್ಥಿ ವೈ ಎಸ್ ವಿ ದತ್ತಾ ನಡುವೆ ನೇರ ನೇರ ಪೈಪೋಟಿ ನಡೆಯುತ್ತಿದೆ ಎನಿಸಿದರೂ ಕಾಂಗ್ರೆಸ್ ಅಭ್ಯರ್ಥಿ ಕೆ ಎಸ್ ಆನಂದ್ ಕೂಡ ಸವಾಲೊಡ್ಡುತ್ತಿದ್ದಾರೆ.
ಕಳೆದ ಕೆಲವು ತಿಂಗಳ ಹಿಂದಷ್ಟೇ ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಹಾರಿದ್ದ ಮಾಜಿ ಸಚಿವ ವೈಎಸ್‌ವಿ ದತ್ತಾ, ಕಾಂಗ್ರೆಸ್ ಟಿಕೆಟ್ ಸಿಗದೇ ಇದ್ದುದ್ದರಿಂದ ಮರಳಿ ಜೆಡಿಎಸ್‌ಗೆ ಬಂದು ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಕಳೆದ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ಗೆದ್ದು ಬಿಗಿದ್ದ ಬಿಜೆಪಿ ಅಭ್ಯರ್ಥಿ ಹಾಲಿ ಶಾಸಕ ಬೆಳ್ಳಿ ಪ್ರಕಾಶ್ ಮತ್ತೊಮ್ಮೆ ಕಣದಲ್ಲಿದ್ದಾರೆ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮಾನಸ ಪುತ್ರ ದತ್ತಾ 2013ರ ವಿಜಯಮಾಲೆಯನ್ನು ಮತ್ತೆ ಧರಿಸಲು ಕ್ಷೇತ್ರದ ಪ್ರತಿ ಹಳ್ಳಿ ಹಳ್ಳಿಗಳಿಗೂ ಭೇಟಿ ನೀಡಿ ಮತದಾರರ ಓಲೈಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಜೆಡಿಎಸ್‌ನ ಸಾಂಪ್ರದಾಯಿಕ ಮತಗಳ ಜೊತೆಗೆ ಕಡೂರು ಕ್ಷೇತ್ರದಲ್ಲಿ ಹೆಚ್ಚಾಗಿರುವ ಲಿಂಗಾಯಿತ ಹಾಗೂ ಕುರುಬ ಮತಗಳನ್ನೂ ಸೆಳೆಯುವ ಪ್ರಯತ್ನ ನಡೆಸಿದ್ದಾರೆ. ಇನ್ನು ಬೆಳ್ಳಿ ಪ್ರಕಾಶ್ ಮತ್ತು ಕೆ.ಎಸ್. ಆನಂದ್ ಕೂಡ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಕಳೆದ ಚುನಾವಣೆಯ ಫಲಿತಾಂಶ ಏನು?
ಬೆಳ್ಳಿ ಪ್ರಕಾಶ್ (ಬಿಜೆಪಿ): 62,232- ವೈ ಎಸ್ ವಿ ದತ್ತಾ (ಜೆಡಿಎಸ್) : 46,860- ಕೆ.ಎಸ್ ಆನಂದ್ (ಕಾಂಗ್ರೆಸ್): 46,142- ಗೆಲುವಿನ ಅಂತರ: 15,372
ಶೃಂಗೇರಿ : ಕಾಂಗ್ರೆಸ್
ಬಿಜೆಪಿಗೆ ಜೆಡಿಎಸ್ ಸವಾಲು
ಶೃಂಗೇರಿ ವಿಧಾನಸಭಾ ಕ್ಷೇತ್ರವು ಈ ಬಾರಿಯೂ ಹಲವು ಕುತೂಹಲಗಳಿಗೆ ಸಾಕ್ಷಿಯಾಗಿದೆ. ಕಳೆದ ಬಾರಿ ಕೇವಲ 2 ಸಾವಿರ ಮತಗಳ ಅಂತರದಿಂದ ಸೋಲು ಕಂಡಿದ್ದ ಬಿಜೆಪಿ ಅಭ್ಯರ್ಥಿ ಡಿ ಎನ್ ಜೀವರಾಜ್ ಮತ್ತೆ ಈ ಬಾರಿ ಕಣದಲ್ಲಿದ್ದಾರೆ. ಹಾಲಿ ಶಾಸಕ ಟಿ. ಡಿ. ರಾಜೇಗೌಡ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಕೂಡ ಈ ಎರಡು ರಾಷ್ಟ್ರೀಯ ಪಕ್ಷಗಳಿಗೆ ಟಕ್ಕರ್ ಕೊಡಲು ಸಜ್ಜಾಗಿದ್ದಾರೆ.
ಹಿಂದೂ ಸಂಘಟನೆಗಳ ಕಡೆಗಡನೆ ಕಳೆದ ಬಾರಿ ಜೀವರಾಜ್ ಸೋಲಿಗೆ ಪ್ರಮುಖ ಕಾರಣವಾಗಿತ್ತು. ಆದರೆ ಈ ಬಾರಿ ಈ ಎಲ್ಲಾ ಸಮಸ್ಯೆಗಳನ್ನು ನಿವಾರಣೆ ಮಾಡಿಕೊಳ್ಳುವುದರತ್ತ ಅವರು ಪ್ರಯತ್ನ ನಡೆಸಿದ್ದಾರೆ. ಕ್ಷೇತ್ರದಾದ್ಯಂತ ಓಡಾಡಿ ಗೆಲುವಿಗೆ ಕಸರತ್ತು ನಡೆಸಿದ್ದಾರೆ.
ದಲಿತ, ಅಲ್ಪಸಂಖ್ಯಾತರ ಜೊತೆಗೆ ಒಕ್ಕಲಿಗ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್ ಬಿಜೆಪಿಯನ್ನು ಮತ್ತೆ ಮಣಿಸಲು ತೀವ್ರ ರಣತಂತ್ರ ರೂಪಿಸುತ್ತಿದೆ. ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದಿಟ್ಟುಕೊಂಡು ರಾಜೇಗೌಡ ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಕೂಡ ನಿರೀಕ್ಷೆಗೂ ಮೀರಿ ಸವಾಲೊಡ್ಡುತ್ತಿದ್ದಾರೆ. ಪಕ್ಷದ ಸಾಂಪ್ರದಾಯಿಕ ಮತಗಳ ಜತೆಗೆ ಕೂಲಿಕಾರ್ಮಿಕರ ಮತಗಳನ್ನೂ ಸೆಳೆಯುತ್ತಿರುವ ಅವರು ಎರಡೂ ಪಕ್ಷಗಳಿಗೆ ಸವಾಲಾಗಿದ್ದಾರೆ. ಹೀಗಾಗಿ ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ವಿಜಯಮಾಲೆ ಯಾರಿಗೆ ಅನ್ನೋದು ಫಲಿತಾಂಶದ ಬಳಿಕ ಗೊತ್ತಾಗಲಿದೆ.
ಕಳೆದ ಚುನಾವಣೆಯ ಫಲಿತಾಂಶ ಏನು?
ಟಿ. ಡಿ. ರಾಜೇಗೌಡ (ಕಾಂಗ್ರೆಸ್): 62, 780 -ಡಿ.ಎನ್. ಜೀವರಾಜ್ (ಬಿಜೆಪಿ) 60,791- ಎಚ್.ಜಿ ವೆಂಕಟೇಶ್ (ಜೆಡಿಎಸ್) 9,799-ಗೆಲುವಿನ ಅಂತರ: 1,989
ಮೂಡಿಗೆರೆ : ಕುತೂಹಲ
ಮೂಡಿಸಿದ ಪಕ್ಷಾಂತರ
ಮೂಡಿಗೆರೆ ವಿಧಾನಸಭಾ ಕ್ಷೇತ್ರ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಭರ್ಜರಿ ಗೆಲುವು ಸಾಧಿಸಿದ್ದ ಎಂಪಿ ಕುಮಾರಸ್ವಾಮಿ ಈ ಬಾರಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಬಿಜೆಪಿಯ ಅಚ್ಚರಿಯ ಬೆಳವಣಿಗೆಯಲ್ಲಿ ಹೊಸ ಮುಖಕ್ಕೆ ಮಣೆ ಹಾಕಿದ್ದು ದೀಪಕ್ ದೊಡ್ಡಯ್ಯ ಅವರಿಗೆ ಟಿಕೆಟ್ ನೀಡಿದೆ.
ಇನ್ನು ಕಾಂಗ್ರೆಸ್ ಮಾಜಿ ಸಚಿವೆ ಮೊಟ್ಟಮ್ಮ ಅವರ ಪುತ್ರಿ ನಯನ ಮೊಟ್ಟಮ್ಮಗೆ ಟಿಕೆಟ್ ನೀಡಿದೆ. ಶಾಸಕ ಕುಮಾರಸ್ವಾಮಿ ಬಿಜೆಪಿ ಟಿಕೆಟ್‌ಗಾಗಿ ಕೊನೆಗಳಿಗೆ ವರೆಗೂ ಕಾದು ಟಿಕೆಟ್ ಸಿಗದಿದ್ದಕ್ಕೆ ಜೆಡಿಎಸ್ ಸೇರಿ, ಪಕ್ಷದ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಮೊದಲೇ ಜೆಡಿಎಸ್ ಮಾಜಿ ಶಾಸಕ ಬಿ ಬಿ ನಿಂಗಯ್ಯ ಅವರಿಗೆ ಟಿಕೆಟ್ ಘೋಷಿಸಿತ್ತು. ಕೊನೆ ಗಳಿಗೆಯಲ್ಲಿ ಬದಲಾವಣೆ ಮಾಡಿತು. ಇದರಿಂದ ರೊಚ್ಚಿಗೆದ್ದ ಅವರು ಕಾಂಗ್ರೆಸ್ ಸೇರಿ ನಯನ ಮೋಟಮ್ಮ ಗೆಲುವಿಗೆ ಓಡಾಡುತ್ತಿದ್ದಾರೆ. ಇದು ಜೆಡಿಎಸ್ ಗೆ ತಲೆ ನೋವಾಗಿ ಪರಿಣಮಿಸಿದೆ.
ಇನ್ನು ಜೆಡಿಎಸ್ ಅಭ್ಯರ್ಥಿ ಎಂ. ಪಿ. ಕುಮಾರಸ್ವಾಮಿ ಜೆಡಿಎಸ್ ನ ಸಾಂಪ್ರದಾಯಿಕ ಮತ, ಒಕ್ಕಲಿಗ, ದಲಿತ ಬಲಗೈ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ. ಸದ್ಯ ಕ್ಷೇತ್ರದಲ್ಲಿ ಮೂರು ಪಕ್ಷಗಳ ನಡುವೆ ತೀವ್ರ ಸ್ಪರ್ಧೆ ನಡೆಯುತ್ತಿದೆ.
ಕಳೆದ ಚುನಾವಣೆಯ ಫಲಿತಾಂಶ ಏನು?
ಎಂ.ಪಿ ಕುಮಾರಸ್ವಾಮಿ (ಬಿಜೆಪಿ) : 58,783- ಮೋಟಮ್ಮ (ಕಾಂಗ್ರೆಸ್) : 46,721- ಬಿ ಬಿ ನಿಂಗಯ್ಯ : 22,063 (ಜೆಡಿಎಸ್)- ಗೆಲುವಿನ ಅಂತರ: 12,062
ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆ ಕ್ಷೇತ್ರ ಸಮೀಕ್ಷೆ : ಬಿಜೆಪಿಗೆ ಪ್ರಾಬಲ್ಯ ಉಳಿಸಿಕೊಳ್ಳುವ ಸವಾಲು