Site icon Vistara News

Black Magic: ಭದ್ರಾ ನದಿಯಲ್ಲಿ ತೇಲಿದ ರುಂಡ ಕತ್ತರಿಸಿದ ಕುರಿಗಳ ಶವ; ಕಳಸ ಬಳಿ ಭಾರಿ ವಾಮಾಚಾರ

black magic

ಚಿಕ್ಕಮಗಳೂರು: ಚಿಕ್ಕಮಗಳೂರು (chikkamagaluru news) ಜಿಲ್ಲೆಯ ಕಳಸ ಬಳಿ ಭದ್ರಾ ನದಿಯ (Bhadra river) ದಡದಲ್ಲಿ ಭಾರಿ ಪ್ರಮಾಣದ ವಾಮಾಚಾರ (Black Magic) ನಡೆದಿದ್ದು, ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

ಚಿಕ್ಕಮಗಳೂರಿನ ಕಳಸ ತಾಲೂಕಿನ ಭದ್ರಾ ನದಿ ಹೆಬ್ಬಾಳೆ ಸೇತುವೆ ಬಳಿ ಘಟನೆ ನಡೆದಿದೆ. ವಾಮಾಚಾರಕ್ಕೆ ಕಪ್ಪು ಬಣ್ಣದ ಕುರಿ ಮೇಕೆಗಳನ್ನು ಬಲಿ ಕೊಡಲಾಗಿದೆ. ರುಂಡ ಮುಂಡ ಬೇರ್ಪಡಿಸಿದ ಏಳೆಂಟು ಕುರಿ- ಮೇಕೆಗಳ ಶವಗಳು ನದಿಯಲ್ಲಿ ತೇಲುತ್ತಿದ್ದು, ಇದನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ.

ನದಿ ದಡದಲ್ಲಿ ವಾಮಾಚಾರಕ್ಕೆ ಬಳಸಿರುವ ವಸ್ತುಗಳು ಕಂಡುಬಂದಿವೆ. ಕೂದಲು, ಉಗುರು, ಮಣ್ಣಿನ ಬೊಂಬೆಗಳು, ರಕ್ತ, ನಿಂಬೆಹಣ್ಣು, ಕುಂಕುಮ ಇತ್ಯಾದಿ ವಾಮಾಚಾರಕ್ಕೆ ಬಳಸಿದ್ದು ಕಂಡುಬಂದಿದೆ. ತಡರಾತ್ರಿ ವೇಳೆ ಈ ಕೃತ್ಯ ನಡೆದಿದೆ. ಕಳಸ- ಹೊರನಾಡು ತೀರ್ಥಕ್ಷೇತ್ರಗಳಿಗೆ ಹೋಗುವ ಮುಖ್ಯರಸ್ತೆ ಬಳಿಯೇ ಕೃತ್ಯ ನಡೆದಿದ್ದು, ಯಾರ ಗಮನಕ್ಕೂ ಬಂದಿಲ್ಲ.

ಸ್ಥಳೀಯ ನಿವಾಸಿಗಳಲ್ಲಿ ವಾಮಾಚಾರದ ಬಗ್ಗೆ ಆತಂಕ ಮೂಡಿದ್ದು, ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ನದಿಯಿಂದ ಮೇಕೆಗಳ ಶವ ಹೊರಕ್ಕೆ ತೆಗೆದಿದ್ದಾರೆ. ವಾಮಾಚಾರದ ರಹಸ್ಯ ಭೇದಿಸಲು ಮುಂದಾಗಿದ್ದಾರೆ.

ಕಾಡಾನೆ ದಾಳಿ, ವೃದ್ಧೆಯ ಕಾಲು ಮುರಿತ

ಕೊಡಗು: ಕೊಡಗಿನಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಕಾಡಾನೆ ಅಟ್ಯಾಕ್‌ ಮಾಡಿದ್ದರಿಂದ ವೃದ್ಧೆಯ ಕಾಲು ಮುರಿದಿದೆ. ಚಿನ್ನೇನಹಳ್ಳಿಯ ವೆಂಕಟಮ್ಮ ಆನೆದಾಳಿಗೆ ಒಳಗಾದ ವಯೋವೃದ್ಧೆ.

ಕೊಡಗು ಜಿಲ್ಲೆ ಕುಶಾಲನಗರ ತಾಲ್ಲೂಕಿನ ಕಣಿವೆ ಸಮೀಪದ ಚಿನ್ನೇನಹಳ್ಳಿಯಲ್ಲಿ ಘಟನೆ ನಡೆದಿದೆ. ಇಂದು ಮುಂಜಾನೆ ವೆಂಕಟಮ್ಮ ಬಹಿರ್ದೆಸೆಗೆ ತೆರಳಿದಾಗ ಸಲಗ ದಿಢೀರನೆ ದಾಳಿ ನಡೆಸಿದೆ. ಗಾಯಾಳು ವೆಂಕಟಮ್ಮ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಚಿರತೆ ದಾಳಿ, ನಾಲ್ಕು ಜನರಿಗೆ ಗಾಯ

ಗದಗ: ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನಲ್ಲಿ ಚಿರತೆ ದಾಳಿ ಮುಂದುವರಿದಿದ್ದು, ನಾಲ್ಕು ಜನರ ಮೇಲೆ ಅಟ್ಯಾಕ್‌ ಮಾಡಿ ಗಾಯಗೊಳಿಸಿದೆ. ಜೀಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ.

ನಿನ್ನೆ ಬೆಳಿಗ್ಗೆಯಷ್ಟೇ ತೋಟದಲ್ಲಿ ಕೆಲಸ ಮಾಡುತ್ತಿದ್ದಾತನ‌ ಮೇಲೆ ದಾಳಿ ಮಾಡಿದ್ದ ಚಿರತೆ, ಸಂಜೆ ವೇಳೆ ಮತ್ತೆ‌ ನಾಲ್ಕು ಜನರ‌ ಮೇಲೆ ದಾಳಿ ನಡೆಸಿದೆ. ಅರಣ್ಯ ಸಿಬ್ಬಂದಿ ಸೇರಿದಂತೆ ಸ್ಥಳಿಯರ ಮೇಲೆ‌ ಎರಗಿದೆ. ದಾಳಿಗೊಳಗಾದವರು ಆಸ್ಪತ್ರೆಗೆ‌ ದಾಖಲಾಗಿದ್ದಾರೆ. ಅರಣ್ಯ‌ ಇಲಾಖೆ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದು, ಚಿರತೆ ಸೆರೆ ಹಿಡಿಯಲು‌ ಶತಾಯಗತಾಯ‌ ಪ್ರಯತ್ನ ನಡೆಸಿದ್ದಾರೆ. ಚಿರತೆ‌ ದಾಳಿಯಿಂದ ಸುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.

ಇದನ್ನೂ ಓದಿ: Sirsi News: ಹಳಿಯಾಳದ ಅಂಗಡಿ ಮುಂದೆ ಅನಾಮಧೇಯ ದಂಪತಿಗಳಿಂದ ವಾಮಾಚಾರ; ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ

Exit mobile version