ಚಿಕ್ಕಮಗಳೂರು: ಸರಳತೆಯಿಂದಲೇ ಗಮನ ಸೆಳೆಯುವ (Lok Sabha Election 2024) ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ (Chikkamagaluru Constituency) ಬಿಜೆಪಿ ಅಭ್ಯರ್ಥಿ (BJP Candidate) ಕೋಟ ಶ್ರೀನಿವಾಸ ಪೂಜಾರಿ (Kota Srinivasa Poojary) ಅವರಿಗೆ ವಿಶೇಷ ವ್ಯಕ್ತಿಯೊಬ್ಬರು ದೇಣಿಗೆ ನೀಡಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ಅವರ ಚುನಾವಣಾ ಖರ್ಚಿಗೆ ಚುರುಮುರಿ ವ್ಯಾಪಾರಿಯೊಬ್ಬರು (Churumuri Trader) 25,000 ರೂ ನೀಡುವ ಔದಾರ್ಯ ಮತ್ತು ಪ್ರೀತಿಯನ್ನು ತೋರಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಈ ಹಿಂದೆ ಸಚಿವರಾಗಿದ್ದ, ಮೇಲ್ಮನೆಯಲ್ಲಿ ಈಗಲೂ ವಿರೋಧ ಪಕ್ಷದ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಬಿಜೆಪಿ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಿದೆ. ಕೇಂದ್ರ ಸಚಿವರೂ ಆಗಿರುವ ಹಾಲಿ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಗೋ ಬ್ಯಾಕ್ ಅಭಿಯಾನ ಕೇಳಿಬಂದಾಗ ಹೈಕಮಾಂಡ್ ಅವರ ಬದಲು ಶ್ರೀನಿವಾಸ ಪೂಜಾರಿ ಅವರಿಗೆ ಟಿಕೆಟ್ ನೀಡಿದೆ. ಶ್ರೀನಿವಾಸ ಪೂಜಾರಿ ಅವರಿಗೆ ಕ್ಷೇತ್ರ ಪ್ರವಾಸದ ವೇಳೆ ಭಾರಿ ಉತ್ಸಾಹದ ಸ್ವಾಗತ ಕಂಡುಬರುತ್ತಿದೆ.
ಕೋಟ ಶ್ರೀನಿವಾಸ ಪೂಜಾರಿ ಅವರು ಶುಕ್ರವಾರ ಚಿಕ್ಕಮಗಳೂರಿನಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದು, ಎಲ್ಲರೂ ಆದರದಿಂದ ಬರಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ, ಚಿಕ್ಕಮಗಳೂರು ತಾಲೂಕಿನ ತೇಗೂರು ಸರ್ಕಲ್‌ನಲ್ಲಿ ಚುರುಮುರಿ ಅಂಗಡಿ ಇಟ್ಟುಕೊಂಡಿರುವ ವ್ಯಾಪಾರಿ ಲೋಕೇಶ್ ಬಾಬು ಎಂಬವರು ಕೋಟ ಅವರಿಗೆ 25 ಸಾವಿರ ರೂ. ಚುನಾವಣಾ ದೇಣಿಗೆ ನೀಡಿದ್ದಾರೆ.
ಶುಕ್ರವಾರ ಕೋಟ ಅವರು ಪ್ರಚಾರಕ್ಕೆಂದು ಹೋದಾಗ ಪ್ರೀತಿಯಿಂದ ಬರ ಮಾಡಿಕೊಂಡ ಲೋಕೇಶ್ ಅವರು, ಎಲೆ-ಅಡಿಕೆ-ಬಾಳೆಹಣ್ಣುಗಳ ತಾಂಬೂಲದ ಜತೆಗೆ ಹಣ ನೀಡಿ ಒಳ್ಳೆಯದಾಗಲಿ, ಗೆದ್ದು ಬನ್ನಿ ಎಂದು ಹಾರೈಸಿದರು.
ಕಾಂಗ್ರೆಸ್ ಅಭ್ಯರ್ಥಿ ಘೋಷಣೆಯಾಗುತ್ತಿದ್ದಂತೆಯೇ ಕೋಟ ಆಕ್ಟಿವ್
ಈ ನಡುವೆ, ಚಿಕ್ಕಮಗಳೂರು ಕ್ಷೇತ್ರಕ್ಕೆ ಕಾಂಗ್ರೆಸ್ ತನ್ನ ಅಭ್ಯರ್ಥಿಯಾಗಿ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಘೋಷಿಸಿದೆ. ಈ ಘೋಷಣೆಯ ಬೆನ್ನಿಗೇ ಬಿಜೆಪಿ ಅಭ್ಯರ್ಥಿಯಾಗಿರುವ ಕೋಟ ಅವರು ಆಕ್ಟಿವ್ ಪ್ರಚಾರದ ಕಣಕ್ಕೆ ಇಳಿದರು. ಇದುವರೆಗೆ ಉಡುಪಿ ಭಾಗದಲ್ಲಿ ಪ್ರಚಾರ ಮಾಡುತ್ತಿದ್ದ ಅವರು ಶುಕ್ರವಾರ ಬೆಳ್ಳಂ ಬೆಳಗ್ಗೆ ಜಿಲ್ಲಾ ಆಟದ ಮೈದಾನದಲ್ಲಿ ಪ್ರಚಾರ ನಡೆಸಿದರು. ವಾಕಿಂಗ್ ಬಂದವರ ಬಳಿ ಮತ ಯಾಚಿಸಿದರು. ಯೋಗ ಶಾಲೆಗೂ ಭೇಟಿ ನೀಡಿದರು.
Lok Sabha Election 2024 : ಸರಳ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ
ಸಾಮಾನ್ಯ ಛಾಯಾಗ್ರಾಹಕನಾಗಿ ವೃತ್ತಿ ಆರಂಭಿಸಿದ್ದ ಶ್ರೀನಿವಾಸ ಪೂಜಾರಿ ಅವರು ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನ ಪರಿಷತ್‌ಗೆ ಆಯ್ಕೆಯಾಗಿ ಹಲವು ಇಲಾಖೆಗಳಲ್ಲಿ ಸಚಿವರಾಗಿದ್ದಾರೆ . ಅವರೀಗ ಲೋಕ ಸಭಾ ಟಿಕೆಟ್ ಪಡೆದು ತಮ್ಮ ವ್ಯಾಪ್ತಿಯನ್ನು ರಾಷ್ಟ್ರೀಯ ರಾಜಕಾರಣದ ಮಟ್ಟಿಗೆ ವಿಸ್ತರಿಸಿಕೊಂಡಿದ್ದಾರೆ. ನೇರ ಮಾತು, ಒಲವು ನಿಲುವುಗಳಿಂದಲೇ ಸಾಧನೆಯ ಉತ್ತುಂಗಕ್ಕೇರಿ, ಬಿಜೆಪಿ ಪಕ್ಷದಲ್ಲಿಯೂ ಪ್ರಭಾವಿ ನಾಯಕನಾಗಿ ಬೆಳೆದಿದ್ದಾರೆ ಅವರು. ಆದರೆ, ಅವರ ಸರಳ ವ್ಯಕ್ತಿತ್ವ ಇಂದಿಗೂ ಬದಲಾಗಿಲ್ಲ. ಜನ ಸಾಮಾನ್ಯರು ಕೂಡಾ ಅವರ ಜತೆಗೆ ಆತ್ಮೀಯವಾಗಿ ಹರಟಬಹುದಾದಷ್ಟು ಸರಳತೆ ಹೊಂದಿದ್ದಾರೆ.