ಚಿಕ್ಕಮಗಳೂರು: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪೆನ್‌ಡ್ರೈವ್ ಪ್ರಕರಣವು (Hassan Pen Drive Case) ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವೆ ಭಾರಿ ವಾಕ್ಸಮರಕ್ಕೆ ಕಾರಣವಾಗಿದೆ. ಆರೋಪ – ಪ್ರತ್ಯಾರೋಪಗಳು ತಾರಕಕ್ಕೇರಿವೆ. ಮಂಗಳವಾರವಷ್ಟೇ ಸುದ್ದಿಗೋಷ್ಠಿ ನಡೆಸಿದ್ದ ಎಚ್‌ಡಿಕೆ, ಸಂಪುಟದಿಂದ ಡಿಕೆಶಿ ವಜಾಕ್ಕೆ ಆಗ್ರಹಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಅವರು “ಕಿಂಗ್ ಆಫ್ ಬ್ಲ್ಯಾಕ್‌ಮೇಲ್” ಎಂದು ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಎಚ್.ಡಿ. ಕುಮಾರಸ್ವಾಮಿ ಅವರ ಕೆಲಸ ಮುಗಿಸೋದೇ ಅಲ್ವಾ? ಅವರು ಕಿಂಗ್ ಆಫ್ ಬ್ಲ್ಯಾಕ್‌ಮೇಲ್. ಅಧಿಕಾರಿಗಳು, ರಾಜಕಾರಣಿಗಳನ್ನು ಹೆದರಿಸುತ್ತಿದ್ದಾರೆ. ಅವರದು ಇದೇ ಕೆಲಸವಾಗಿದೆ. ಈ ಎಲ್ಲ ವಿಷಯಗಳ ಬಗ್ಗೆ ಚರ್ಚೆ ಮಾಡಲು ಟೈಮ್ ಇದೆ. ಅಸೆಂಬ್ಲಿಯೂ ಇದೆ. ಎಲ್ಲವನ್ನೂ ತಗೊಂಡ್ ಬರ್ಲಿ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.
ಮೊದಲು ಅವರ ಹೆಸರು ಸ್ಟ್ಯಾಂಡ್ ಆಗಲಿ, ದೇವೇಗೌಡರು ನನ್ನ ಹೆಸರು ತೆಗೆದುಕೊಳ್ಳುವುದು ಬೇಡ ಅಂದರು. ಅವರದ್ದೇ ಬೇರೆ ಫ್ಯಾಮಿಲಿ, ನಮ್ಮದೇ ಬೇರೆ ಫ್ಯಾಮಿಲಿ ಎಂದಿದ್ದಾರೆ. ಉಪ್ಪು ತಿಂದವನು ನೀರು ಕುಡಿಯಬೇಕು ಎಂದವರು ಈಗ ಯಾಕೆ ಉರಿ ಮಾಡಿಕೊಳ್ಳುತ್ತಿದ್ದಾರೆ? ಎಂದು ಡಿ.ಕೆ. ಶಿವಕುಮಾರ್ ಪ್ರಶ್ನೆ ಮಾಡಿದರು.
ರೆಸ್ಟ್ ಮಾಡಲು ಬಂದಿದ್ದೇನೆ
ಚುನಾವಣೆ ಮುಗಿಯಿತು. ನಾನೀಗ ಸಿದ್ದಾರ್ಥ್ ಮನೆಗೆ ರೆಸ್ಟ್ ಮಾಡಲು ಬಂದಿದ್ದೇನೆ. ಪೆನ್‌ಡ್ರೈವ್ ವಿಚಾರ ಎಲ್ಲವೂ ಕುಮಾರಸ್ವಾಮಿಗೆ ಗೊತ್ತು. ಕುಮಾರಣ್ಣನಿಗೆ ನನ್ನ ರಾಜೀನಾಮೆ ಬೇಕಂತೆ. ಒಕ್ಕಲಿಗ ನಾಯಕರ ಪೈಪೋಟಿಯಂತೆ, ರಾಜೀನಾಮೆ ಬೇಕಂತೆ ಕೊಡೋಣ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಹೋಗಿ ವಾದ ಮಾಡಲಿ
ಇವರು ವಕೀಲರಾ? ನ್ಯಾಯಾಧೀಶರಾ? ಹೋಗಿ ವಾದ ಮಾಡಲಿ. ಶಿವಕುಮಾರ್, ಸಿದ್ದರಾಮಯ್ಯ, ಸುರ್ಜೆವಾಲ ಇನ್ವೆಸ್ಟಿಗೇಷನ್ ಟೀಮ್ ಎಂದು ಹೇಳುತ್ತಾರೆ. ಆದರೆ, ಈ ಪ್ರಕರಣದ ಕಥಾ ನಾಯಕ, ಡೈರೆಕ್ಟರ್, ಪ್ರೊಡ್ಯೂಸರ್ ಎಲ್ಲವೂ ಇವರೇ ಆಗಿದ್ದಾರೆ. ಎಲ್ಲವೂ ಗೊತ್ತಿದೆ. ಅವರ ಕಾರ್ಯಕರ್ತರು ಅಂತೆ, ಮರ್ಯಾದೆ ಇದ್ದರೆ ಹೋಗಿ ಧೈರ್ಯ ತುಂಬಲಿ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಮೋರ್ ಸ್ಟ್ರಾಂಗ್ ಮೋರ್ ಎನಿಮಿ
ನನ್ನ ಮೇಲೆ ಆರೋಪ ಮಾಡದಿದ್ದರೆ ಎಚ್.ಡಿ. ಕುಮಾರಸ್ವಾಮಿಗೆ ಮಾರ್ಕೆಟ್ ಓಡಲ್ಲ. ನನ್ನ ಹೆಸರು ಇರದಿದ್ದರೆ ನೀವು ಮಾಧ್ಯಮದಲ್ಲಿ ತೋರಿಸಲಲ್ಲ. ನನ್ನ ಹೆಸರು ಇಲ್ಲದಿದ್ರೆ ಪಾಪ ಅವರಿಗೆ ನಿದ್ದೆಯೇ ಬರಲ್ಲ. ಮೋರ್ ಸ್ಟ್ರಾಂಗ್ ಮೋರ್ ಎನಿಮಿ, ಲೆಸ್ ಸ್ಟ್ರಾಂಗ್ ಲೆಸ್ ಎನಿಮಿ ಎಂದು ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ನುಡಿದರು.