Site icon Vistara News

Rajyasabha Election : ಸೋಮಶೇಖರ್‌ ಮಾಡಿದ್ದು ರಾಜಕೀಯ ವ್ಯಭಿಚಾರ ಎಂದ ಸಿ.ಟಿ ರವಿ

Rajyasabha Election CT RAVI

ಚಿಕ್ಕಮಗಳೂರು: ರಾಜ್ಯಸಭೆ ಚುನಾವಣೆಯಲ್ಲಿ (Rajyasabha Election) ಯಶವಂತ ಪುರದ ಬಿಜೆಪಿ ಶಾಸಕ ಎಸ್.ಟಿ. ಸೋಮಶೇಖರ್ (ST Somashekhar) ಅವರು ಅಡ್ಡ ಮತದಾನ (Cross Voting) ಮಾಡಿದ್ದನ್ನು ರಾಜಕೀಯ ವ್ಯಭಿಚಾರ (Political Adultery) ಎಂದು ಮಾಜಿ ಶಾಸಕ ಸಿ.ಟಿ ರವಿ (CT Ravi) ವ್ಯಾಖ್ಯಾನಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಬಿಜೆಪಿಯ ಹಿರಿಯ ನಾಯಕ ಸಿ.ಟಿ. ರವಿ ಅವರು ಅಡ್ಡ ಮತದಾನ ರಾಜಕೀಯ ವ್ಯಭಿಚಾರಕ್ಕೆ ಸಮ ಎಂದು ಹೇಳಿದರು.

ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ಎಸ್.ಟಿ. ಸೋಮಶೇಖರ್‌ ಅವರು ಬಿಜೆಪಿ ಅಭ್ಯರ್ಥಿ ಪರವಾಗಿ ಮತ ಚಲಾಯಿಸುವ ಬದಲು ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿಗೆ ಮತ ಹಾಕುವ ಮೂಲಕ ವಿಪ್‌ ಉಲ್ಲಂಘನೆ ಮಾಡಿದ್ದರು. ಅದಕ್ಕಿಂತ ಮೊದಲು ಮಾತನಾಡಿದ್ದ ಅವರು, ನನ್ನ ಕ್ಷೇತ್ರಕ್ಕೆ ಯಾರು ಅನುದಾನ ಕೊಡುತ್ತಾರೋ ಅವರಿಗೆ ಮತ ಹಾಕುತ್ತೇನೆ, ವಿಪ್‌, ಶಿಸ್ತು ಕ್ರಮ ಯಾವುದೂ ಲೆಕ್ಕಕ್ಕಿಲ್ಲ ಎಂದು ಹೇಳಿದ್ದರು.

ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿ.ಟಿ. ರವಿ ಅವರು, ವ್ಯಕ್ತಿ ಸಂಬಂಧಕ್ಕೋಸ್ಕರ ರಾಜೀ ರಾಜಕಾರಣ ಒಳ್ಳೆಯದಲ್ಲ. ಅವಕಾಶವಾದಿಗಳಿಗೆ ಸಪೋರ್ಟ್ ಮಾಡೋದು ಅನೈತಿಕ ರಾಜಕಾರಣಕ್ಕೆ ವೇದಿಕೆ ಸೃಷ್ಟಿಸಿದಂತೆ ಎಂದು ಹೇಳಿದರು.

ವ್ಯಭಿಚಾರಿಗಳು ಎಲ್ಲ ಕಡೆಗೆ ಸಲ್ಲುತ್ತಾರೆ ಎಂದ ಸಿ.ಟಿ ರವಿ

ʻʻಪಕ್ಷ-ಪಕ್ಷ ಅನ್ನೋ ನಾವು ಪ್ರಶ್ನೆಗಳಿಗೆ ಒಳಗಾಗ್ತೀವಿ. ಆದರೆ, ರಾಜಕಾರಣದ ವ್ಯಭೀಚಾರ ಮಾಡೋರು ಎಲ್ಲಾ ಕಡೆ ಸಲ್ಲುತ್ತಾರೆ. ರಾಜಕೀಯ ವ್ಯಭಿಚಾರ ಮಾಡೋರು ಎಲ್ಲಾ ಕಡೆ ಹೋಗಿ ಸುಲಭವಾಗಿ ಸೆಟ್ ಆಗ್ತಾರೆ. ಹಾರ್ಡ್ ಕೋರ್, ಸಿದ್ಧಾಂತಕ್ಕಾಗಿ ರಾಜಕಾರಣ ಮಾಡೋರು ನಿಷ್ಠುರಕ್ಕೆ ಒಳಗಾಗುತ್ತಾರೆʼʼ ಎಂದು ಹೇಳಿದರು.

ಆದರೆ, ಹೊಂದಾಣಿಕೆ ಮಾಡಿಕೊಳ್ಳುವವರು ನಮ್ಮ ಪಕ್ಷದ ಸಿಎಂ ಮಾತ್ರವಲ್ಲ, ಬೇರೆ ಪಕ್ಷದ ಸಿಎಂ ಬಳಿಯೂ ಚೆನ್ನಾಗಿರ್ತಾರೆ ಎಂದು ಹೇಳಿದ ಅವರು, ವ್ಯಭಿಚಾರದ ರಾಜಕಾರಣಕ್ಕೆ ಯಾರೂ ಮಣೆ ಹಾಕಬಾರದು. ಅದರಲ್ಲೂ ಒಂದು ಪಕ್ಷದೊಳಗಿದ್ದು ರಾಜಕೀಯ ವ್ಯಭಿಚಾರ ಮಾಡೋದರ ಬಗ್ಗೆ ಸಹನೆ ಇರಲೇಬಾರದು ಎಂದು ಹೇಳಿದರು. ಈ ಮೂಲಕ ಅಡ್ಡ ಮತದಾನ ಮಾಡಿದ ಎಸ್.‌ಟಿ. ಸೋಮಶೇಖರ್‌ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯವನ್ನು ಪರೋಕ್ಷವಾಗಿ ಹೇಳಿದರು.

ಇದನ್ನೂ ಓದಿ : Rajya sabha Election: ಎಸ್‌.ಟಿ. ಸೋಮಶೇಖರ್‌ ಅಡ್ಡಮತ; ಬಿಜೆಪಿಯಿಂದ ಏನು ಕ್ರಮ? ಶಾಸಕತ್ವ ಉಳಿಯುತ್ತಾ?

ಎಚ್‌.ಡಿ ಕುಮಾರಸ್ವಾಮಿಯಿಂದಲೂ ವಾಗ್ದಾಳಿ

ಏಸ್.ಟಿ. ಸೋಮಶೇಖರ್‌ ಒಬ್ಬ ಅವಕಾಶವಾದಿ. ಮೂರು ವರ್ಷಗಳ ಹಿಂದೆ ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರಿ ಮಂತ್ರಿಯಾದ ಅವರು ಈಗ ತಿರುಗಿಬಿದ್ದು ಕಾಂಗ್ರೆಸ್‌ ಜತೆ ಸೇರಿಕೊಂಡಿದ್ದಾರೆ. ಇದು ಅವಕಾಶವಾದಿ ಧೋರಣೆ ಎಂದು ಎಚ್‌.ಡಿ ಕುಮಾರಸ್ವಾಮಿ ಅವರೂ ಕೂಡಾ ಕುಮಾರಸ್ವಾಮಿ ಮೇಲೆ ನೇರವಾಗಿ ದಾಳಿ ನಡೆಸಿದ್ದಾರೆ.

ಚುನಾವಣೆಯಲ್ಲಿ ಮತ ಹಾಕುವ ಮೊದಲು ಎಸ್‌.ಟಿ ಸೋಮಶೇಖರ್‌ ಅವರು ಬಹಿರಂಗವಾಗಿ ಮಾತನಾಡಿದ್ದರು. ಯಾರು ಕ್ಷೇತ್ರಕ್ಕೆ ಅನುದಾನ ಕೊಡುತ್ತೇನೆ ಎಂದು 100% ಗ್ಯಾರಂಟಿ ಕೊಡುತ್ತಾರೋ ಅವರಿಗೆ ಮತ ಹಾಕುತ್ತೇನೆ. ಹಿಂದೆ ಬಿಜೆಪಿಗೆ ಮತ ಹಾಕಿದ ಕೊಟ್ಟ ಭರವಸೆಗಳು ಯಾವುದೂ ಈಡೇರಿಲ್ಲ ಎಂದೆಲ್ಲ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ವಿಪ್‌ನ್ನು ಕೇರ್‌ ಮಾಡಲ್ಲ, ಶಿಸ್ತು ಕ್ರಮಕ್ಕೆ ಸೊಪ್ಪು ಹಾಕಲ್ಲ ಎಂದು ಹೇಳುವ ಮೂಲಕ ತಾನು ಕಾಂಗ್ರೆಸ್‌ಗೇ ಮತ ಹಾಕುವುದು ಎಂದು ಸ್ಪಷ್ಟಪಡಿಸಿದ್ದರು. ಇದನ್ನು ಗಮನಿಸಿಯೇ ಎಚ್‌.ಡಿ ಕುಮಾರಸ್ವಾಮಿ ಅವರು ಸಿಡಿದುಬಿದ್ದಿದ್ದರು.

Exit mobile version