ಚಿಕ್ಕಮಗಳೂರು: ಪೊಲೀಸ್ ಠಾಣೆಯ ಮೇಲೇರಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಪೊಲೀಸ್ ಠಾಣೆಯ ಚಾವಣಿ ಮೇಲೆ ಏರಿ ಜಿಗಿಯಲು ಯತ್ನಿಸಿದ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಹಳೇ ಮೂಡಿಗೆರೆ ಗ್ರಾಮದ ಶಿಲ್ಪ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಶಿಲ್ಪ ವಿರುದ್ಧ 2022ರಲ್ಲಿ ಮೂಡಿಗೆರೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಶಿಲ್ಪ ಮತ್ತು ಅಕ್ಕನ ನಡುವೆ ಗಲಾಟೆ ನಡೆದಿದ್ದು, ಠಾಣೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು ಎಂದು ದೂರು ದಾಖಲಾಗಿತ್ತು.
ಕಳೆದ ಒಂದು ವರ್ಷದಿಂದ ನ್ಯಾಯಾಲಯಕ್ಕೆ ಹಾಜರಾಗದ ಶಿಲ್ಪ ವಿರುದ್ಧ ಸಮನ್ಸ್ ಜಾರಿ ಮಾಡಲಾಗಿತ್ತು. ಕೋರ್ಟ್ ಸಮನ್ಸ್ ಹಿಡಿದು ಠಾಣೆಗೆ ಬಂದ ಶಿಲ್ಪ ಇದ್ದಕ್ಕಿದ್ದಂತೆ ಚಾವಣಿ ಏರಿ ಸಾಯಲು ಮುಂದಾಗಿದ್ದಾರೆ. ಕೂಡಲೇ ಮಹಿಳಾ ಪೊಲೀಸರು ಅವರನ್ನು ಹಿಡಿದುಕೊಂಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿರುವ ವಿಡಿಯೋ ವೈರಲ್ ಆಗಿದೆ.
ವಾಹನ ತಪಾಸಣೆ ವೇಳೆಯೇ ಧಗಧಗಿಸಿದ ಕಾರು
ಬಾಗಲಕೋಟೆ: ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ವೇಳೆ ನಿಲ್ಲಿಸಿದಾಗ ಕಾರು ಸಂಪೂರ್ಣ ಹೊತ್ತಿ ಉರಿದ ಘಟನೆ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಕಮತಗಿ ಕ್ರಾಸ್ ಬಳಿಯ ಚೆಕ್‌ಪೋಸ್ಟ್‌ನಲ್ಲಿ ನಡೆದಿದೆ.
ಬಾಗಲಕೋಟೆಯಿಂದ ಕಮತಗಿ ಮಾರ್ಗವಾಗಿ ಧನ್ನೂರ ಗ್ರಾಮದ ಕಡೆ ಹೊರಟಿದ್ದ ಕೆಎ 22 ಎನ್-3355 ವಿಸ್ತಾ ಕಾರನ್ನು ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ನಿಲ್ಲಿಸಿ ವಾಹನ ಚೆಕ್ ಮಾಡುವಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಕಾರು ಧಗಧಗಿಸಿ ಉರಿದಿದೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ತಪಾಸಣೆ ಸಂದರ್ಭ ಚಾಲಕ ಕೆಳಗಿಳಿದಿದ್ದರಿಂದ ಅಪಾಯವಾಗಿಲ್ಲ. ಅಮೀನಗಡ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Road accident : ತಿರುವಿನಲ್ಲಿ ಬೈಕ್‌ಗಳ ಮುಖಾಮುಖಿ ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ, ಸಿಸಿಟಿವಿಯಲ್ಲಿ ಭಯಾನಕ ದೃಶ್ಯ ಸೆರೆ