ಚಿಕ್ಕೋಡಿ: ಮಹಿಳೆಯೊಬ್ಬರು ವ್ಯಾಜ್ಯದ ಸಲುವಾಗಿ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಮಹಿಳಾ ಪಿಎಸ್‌ಐ ಜಾಡಿಸಿ ಒದ್ದು ಹಲ್ಲೆ (Assault Case) ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಖಡಕಲಾಟ ಠಾಣೆಯಲ್ಲಿ ಘಟನೆ ನಡೆದಿದೆ. ಮಹಿಳಾ ಪಿಎಸ್‌ಐ ಅನಿತಾ ರಾಠೋಡ ಎಂಬುವವರು ಮಹಿಳೆಯ ಹೊಟ್ಟೆಗೆ ಜಾಡಿಸಿ ಒದ್ದಿದ್ದಾರೆ. ನಿರ್ದಯಿ ಪೊಲೀಸ್ ಅಧಿಕಾರಿಯಿಂದ ಮಹಿಳೆಯ ಮೇಲೆ ಹಲ್ಲೆಗೆ ಕುಟುಂಬಸ್ಥರು ಕಿಡಿಕಾರಿದ್ದಾರೆ.
ಪೂನಂ ಮಾಯಣ್ಣವರ ಎಂಬಾಕೆ ಅಣ್ಣ-ತಮ್ಮಂದಿರ ವ್ಯಾಜ್ಯದ ಸಲುವಾಗಿ ಪೊಲೀಸ್ ಠಾಣೆಗೆ ತೆರಳಿದ್ದರು. ಈ ವೇಳೆ ಖಡಕಲಾಟ ಪಿಎಸ್‌ಐ ಅನಿತಾ ರಾಠೋಡ ಪೂನಂ ಮೇಲೆ ಹಲ್ಲೆ ಮಾಡಿದ್ದಾರೆ. ತೀವ್ರ ಅಸ್ವಸ್ಥಳಾಗಿದ್ದ ಪೂನಂ ಮಾಯಣ್ಣಳನ್ನು ಕುಟುಂಬಸ್ಥರು ಕೂಡಲೇ ನಿಪ್ಪಾಣಿ ತಾಲೂಕಾಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಪೂನಂ ನರಳಾಡುತ್ತಿದ್ದು, ಪಿಎಸ್‌ಐ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಇಷ್ಟಕ್ಕೂ ಠಾಣೆಗೆ ಬಂದ ಮಹಿಳೆಗೆ ಪಿಎಸ್‌ಐ ಅನಿತಾ ಹಲ್ಲೆ ಮಾಡಿದ್ದು ಯಾಕೆ ಎಂಬುದಕ್ಕೆ ಕಾರಣ ತಿಳಿದು ಬಂದಿಲ್ಲ.
ಇದನ್ನೂ ಓದಿ: Road Accident : ಕುಡಿದು ಕಾರು ಓಡಿಸಿ ಪ್ರಾಣ ಕಳೆದುಕೊಂಡ ಇಬ್ಬರು ಯುವಕರು ; ಕಾರ್ಕಳದಲ್ಲಿ ಸಿಲಿಂಡರ್ ಸ್ಫೋಟ
ಕೈ ಕಟ್ ಮಾಡಿದ ರೌಡಿಗಳ ಕಾಲಿಗೆ ಪೊಲೀಸರ ಗುಂಡೇಟು
ರಾಮನಗರ: ಬೆಳ್ಳಂಬೆಳಿಗ್ಗೆ ರೌಡಿಶೀಟರ್‌ಗಳ (Rowdysheeters) ಮೇಲೆ ಕನಕಪುರ ನಗರ ಪೊಲೀಸರು (Kanakapura Police) ಗುಂಡು ಹಾರಿಸಿ (Police Firing) ಬಂಧಿಸಿದ್ದಾರೆ. ವ್ಯಕ್ತಿಯೊಬ್ಬನ ಕೈ ಕತ್ತರಿಸಿ (Assault Case) ಪರಾರಿಯಾಗಿದ್ದ ರೌಡಿಗಳನ್ನು ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಕನಕಪುರ ಟೌನ್ ಸಿಪಿಐ ಮಿಥುನ್ ಶಿಲ್ಪಿ ಹಾಗೂ ಪಿಎಸ್ಐ ಮನೋಹರ್ ಅವರಿಂದ ಫೈರಿಂಗ್ ನಡೆದಿದೆ. ಹರ್ಷ ಅಲಿಯಾಸ್ ಕೈಮ, ಕರುಣೇಶ್ ಅಲಿಯಾಸ್ ಕಣ್ಣ ಗಾಯಗೊಂಡ ರೌಡಿಶೀಟರ್‌ಗಳು. ಕಗ್ಗಲೀಪುರದ ವ್ಯಾಲಿ ಸ್ಕೂಲ್ ರೋಡ್ ಬಳಿ ಪೊಲೀಸರಿಂದ ಫೈರಿಂಗ್ ನಡೆದಿದೆ.
ಕಳೆದ ವಾರ ಕನಕಪುರದ ಮಾಳಗಾಳು ಬಡಾವಣೆಯಲ್ಲಿ ಗಲಾಟೆ ನಡೆದಿತ್ತು. ಗಲಾಟೆ ವೇಳೆ ಒಬ್ಬ ವ್ಯಕ್ತಿ ಮೇಲೆ ಹಲ್ಲೆ ಮಾಡಿ ಕೈ ಕಟ್ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಆರೋಪಿಗಳನ್ನು ಬಂಧಿಸುವಂತೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇಂದು ಮುಂಜಾನೆ ಆರೋಪಿಗಳನ್ನು ಬಂಧಿಸಲು ಪೊಲೀಸರು ಹೋಗಿದ್ದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಈ ರೌಡಿಗಳು ಮುಂದಾಗಿದ್ದಾರೆ.
ಈ ಸಂದರ್ಭದಲ್ಲಿ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದು ಅವರನ್ನು ಬಂಧಿಸಿದ್ದಾರೆ. ಹಲ್ಲೆಯಲ್ಲಿ ಪೊಲೀಸ್ ಸಿಬ್ಬಂದಿ ರಾಜಶೇಖರ್, ಶಿವಕುಮಾರ್ ಎಂಬವರಿಗೂ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿದೆ.
ವಿಚ್ಛೇದಿತ ನರ್ಸ್ ಜೊತೆ ಲವ್ವಿ ಡವ್ವಿ; ಪೊಲೀಸಪ್ಪನಿಗೇ ಕಾನೂನು ರುಚಿ ತೋರಿಸಿದ ಪತ್ನಿ
ರಾಯಚೂರು: ವಿಚ್ಛೇದಿತ ನರ್ಸ್ ಒಬ್ಬಾಕೆಯೊಂದಿಗೆ ಲವ್ವಿ ಡವ್ವಿ (Illicit Relationship) ಹೊಂದಿದ್ದ ಪೊಲೀಸ್ ಕಾನ್‌ಸ್ಟೇಬಲ್ (Police constable) ಒಬ್ಬಾತನಿಗೆ ಆತನ ಪತ್ನಿ ಕಾನೂನು ಅಸ್ತ್ರದ ಮೂಲಕ ಪಾಠ ಕಲಿಸಲು ಮುಂದಾಗಿದ್ದಾರೆ. ಘಟನೆ ರಾಯಚೂರಿನ ದೇವದುರ್ಗದಲ್ಲಿ ನಡೆದಿದೆ.
ಸಿರವಾರ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಜ್ ಮಹಮ್ಮದ್ ಎಂಬಾತನ ಮೇಲೆ ಆತನ ಪತ್ನಿಯಿಂದ ಕೇಸು ಬಿದ್ದಿದೆ. ದೇವದುರ್ಗ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆ ಆಗಿರುವ ಪ್ಯಾರಿ ಬೇಗಂ ಎಂಬಾಕೆ ಈತನ ಪತ್ನಿ ಹಾಗೂ ದೂರು ಸಲ್ಲಿಸಿದವರು. ರಾಜ್ ಮಹಮ್ಮದ್ ಮತ್ತು ಪ್ಯಾರಿ ಬೇಗಂ ಪ್ರೀತಿಸಿ ಮದುವೆಯಾದವರು. ಆದರೆ ಇತ್ತೀಚೆಗೆ ರಾಜ್ ಮಹಮ್ಮದ್ ಇನ್ನೊಬ್ಬ ಮಹಿಳೆ ಜೊತೆಗೆ ಅಕ್ರಮ ಸಂಬಂಧ ಬೆಳೆಸಿಕೊಂಡಿದ್ದ.
ಕವಿತಾ ಆಸ್ಪತ್ರೆ ನರ್ಸ್ ಸರಳ ಎಂಬಾಕೆಯ ಜೊತೆ ಸುಮಾರು 4-5 ವರ್ಷಗಳಿಂದ ವಿವಾಹೇತರ ಸಂಬಂಧ ನಡೆಸಿದ್ದ. ಇವರಿಬ್ಬರನ್ನೂ ಮನೆಯೊಂದರಲ್ಲಿ ರೆಡ್ ಹ್ಯಾಂಡ್ ಆಗಿ ಪ್ಯಾರಿ ಬೇಗಂ ಹಿಡಿದಿದ್ದರು. ಬಳಿಕ ಪೊಲೀಸರಿಗೆ ಒಪ್ಪಿಸಿ ಪತಿ ವಿರುದ್ಧವೇ ಎಸ್ಪಿಗೆ ದೂರು ನೀಡಿದ್ದಾರೆ. ಎಸ್‌ಪಿಯನ್ನು ಭೇಟಿ ಮಾಡಿ, ಬಳಿಕ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ರಾಜ್ ಮಹಮ್ಮದ್, ರಿಜಿಯಾ ಬೇಗಂ, ಮೈಬೂಬ್ ಮತ್ತು ಸ್ಟಾಫ್ ನರ್ಸ್ ಸರಳ ವಿರುದ್ಧ ರಾಯಚೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗರ್ಭಪಾತ, ವರದಕ್ಷಿಣೆ ಕಿರುಕುಳ (Dowry harassment), ಕೊಲೆ ಯತ್ನ (Murder attempt) ಸೇರಿದಂತೆ ಹಲವು ಆರೋಪಗಳನ್ನು ಗಂಡನ ವಿರುದ್ಧ ಪ್ಯಾರಿ ಬೇಗಂ ನೀಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ