Site icon Vistara News

Congress Guarantee | ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಉಚಿತ ವಿದ್ಯುತ್‌: ಪ್ರಜಾಧ್ವನಿ ಯಾತ್ರೆಯಲ್ಲಿ ಮೊದಲನೆ ಘೋಷಣೆ

congress guarantee free electricity to tenents also says minister KJ George

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮನೆಗೂ ಉಚಿತ ವಿದ್ಯುತ್‌ ನೀಡುವುದಾಗಿ ಘೋಷಣೆ ಮಾಡಿದೆ.

ಚಿಕ್ಕೋಡಿಯಲ್ಲಿ ಬುಧವಾರ ಆರಂಭವಾದ ಮೊದಲ ಹಂತದ ʼಪ್ರಜಾಧ್ವನಿ ಯಾತ್ರೆʼಗೆ ಚಿಕ್ಕೋಡಿಯಲ್ಲಿ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ʼಕಾಂಗ್ರೆಸ್‌ ಗ್ಯಾರಂಟಿʼ ಸರಣಿಯ ಮೊದಲನೆ ಘೋಷಣೆಯನ್ನು ನಾಯಕರು ಮಾಡಿದರು.

ಈ ಕುರಿತ ಪೋಸ್ಟರ್‌ ಬಿಡುಗಡೆ ಮಾಡಿದ ಕೆಪಿಸಿಸಿ ಉಸ್ತಿವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತಿತರರು, “ರಾಜ್ಯದ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ಒದಗಿಸುವ ‘ಗೃಹಜ್ಯೋತಿ’ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಲಿದೆ. ನಿಮ್ಮ ವಿದ್ಯುತ್ ಬಿಲ್ ಇನ್ಮುಂದೆ ಕಾಂಗ್ರೆಸ್ ಜವಾಬ್ದಾರಿ. ಇದು ಕಾಂಗ್ರೆಸ್‌ ಗ್ಯಾರಂಟಿʼ ಎಂದರು.

ನಂತರ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಇದೊಂದು ಐತಿಹಾಸಿಕ ದಿನ. ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಸಮಸ್ಯೆ, ನೋವು, ಅಭಿಪ್ರಾಯವನ್ನು ಸಂಗ್ರಹಿಸಿ ಅದರ ಪ್ರತಿಧ್ವನಿಯಾಗಿ ನಿಮಗೆ ಶಕ್ತಿ ನೀಡಲು, ನಿಮ್ಮ ಬದುಕಿಗೆ ಬೆಳಕು ನೀಡಲು ನಾವು ಇಲ್ಲಿಗೆ ಬಂದಿದ್ದೇವೆ. ಜನರ ಸಂಕಷ್ಟ ಪರಿಹಾರ ಮಾಡುವುದೇ ಈ ಪ್ರಜಾಧ್ವನಿ ಯಾತ್ರೆಯ ಉದ್ದೇಶ.

ನಾವು ಈ ಯಾತ್ರೆಯನ್ನು ಬುದ್ಧ ಬಸವನು ಮನೆ ಬಿಟ್ಟ ಗಳಿಗೆಯಲ್ಲಿ, ಏಸು ಕ್ರಿಸ್ತನು ಶಿಲುಬೆಗೇರಿದ ಗಳಿಗೆಯಲ್ಲಿ, ಭೀಮಾಬಾಯಿ ಅವರು ಅಂಬೇಡ್ಕರ್ ಅವರಿಗೆ ಜನ್ಮ ಕೊಟ್ಟ ಗಳಿಗೆಯಲ್ಲಿ, ಮಹಾತ್ಮ ಗಾಂಧಿ ಅವರು ಕಾಂಗ್ರೆಸ್ ನಾಯಕತ್ವ ವಹಿಸಿದ ಗಳಿಗೆಯಲ್ಲಿ ಇಂತಹ ಪವಿತ್ರ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.

1924 ರಂದು ಬೆಳಗಾವಿಯಲ್ಲಿ ಗಾಂಧಿಜೀ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿ, ಬ್ರಿಟೀಷರನ್ನು ದೇಶದಿಂದ ತೊಲಗಿಸಿ ಜನರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಲು ಸಂಕಲ್ಪ ಮಾಡಿದರು. ಇಂದು ಅದೇ ಸ್ಥಳದಿಂದ ನಾವು ಈ ಯಾತ್ರೆಗೆ ನಾಂದಿ ಹಾಡಿದ್ದೇವೆ. ನಾಂದಿ ಎಂದರೆ ಯುದ್ಧದ ಆರಂಭ. ಹೆಜ್ಜೆ ಹಾಕಿ, ಪ್ರತಿಜ್ಞೆ ಮಾಡುತ್ತಿರುವ ಗಳಿಗೆ.

ನಾವು ಗಾಂಧಿ ಅವರ ಬಾವಿಯ ನೀರಿನಿಂದ ಬೆಳಗಾವಿಯಲ್ಲಿ ಬಿಜೆಪಿಯ ಕೊಳಕನ್ನು ತೊಳೆದು ಇಲ್ಲಿಗೆ ಬಂದಿದ್ದೇವೆ. ನಿಮ್ಮ ಜೀವನದಲ್ಲಿ ಜ್ಯೋತಿ ಬೆಳಗಬೇಕು. ನೀವು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದೀರಿ. ದಿನ ನಿತ್ಯ ನಿಮ್ಮ ಜೇಬಿಗೆ ಕತ್ತರಿ ಬೀಳುತ್ತಿದೆ. ಕಾಂಗ್ರೆಸ್ ಪಕ್ಷ ನಿಮಗೆ ಒಂದು ವಚನ ನೀಡಲು ಬದ್ಧವಾಗಿದೆ.

ತಮ್ಮೆಲ್ಲರಿಗೂ ಶುಭವಾಗಲಿ. ನಿಮ್ಮ ಮನೆಯಲ್ಲಿ ಕತ್ತಲು ಕಳೆದು ಬೆಳಕು ನೀಡಲು ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಸೇರಿ ಚರ್ಚೆ ಮಾಡಿ ಈ ಯಾತ್ರೆಯಲ್ಲಿ ಐದು ಭರವಸೆ ನೀಡುತ್ತಿದ್ದೇವೆ. ಅದರ ಪೈಕಿ ಮೊದಲ ಖಚಿತ ಭರವಸೆ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವುದು.

ಮಹಿಳೆಯರು, ಯುವಕರು, ರೈತರು 200 ಯುನಿಟ್ ವರೆಗೂ ವಿದ್ಯುತ್ ದರ ಕಟ್ಟುವಂತಿಲ್ಲ. ನಾವು ನುಡಿದಂತೆ ನಡೆದಿದ್ದೇವೆ. ನಡೆಯುತ್ತೇವೆ. ನಾಡಿನ ಜನರ ಭವಿಷ್ಯಕ್ಕಾಗಿ ನಾವು ಅನೇಕ ಯೋಜನೆ ಹಮ್ಮಿಕೊಂಡಿದ್ದೇವೆ.

ಈ ಸರ್ಕಾರ ಬಿ ರಿಪೋರ್ಟ್ ಸರ್ಕಾರ. ಮಂತ್ರಿಗಳು ಯಾವುದೇ ಪ್ರಕರಣದಲ್ಲಿ ಸಿಕ್ಕಿಬಿದ್ದರೂ ಅವರಿಗೆ ಬಿ ರಿಪೋರ್ಟ್ ಕೊಟ್ಟು, ಅವರು ಯಾವುದೇ ತಪ್ಪು ಕೆಲಸ ಮಾಡಿಲ್ಲ, ನಿರ್ದೇಷಿಯಾಗುತ್ತಾರೆ ಎಂದು ಮುಖ್ಯಮಂತ್ರಿಗಳು, ಗೃಹ ಸಚಿವರು ಸಂದೇಶ ನೀಡುತ್ತಾರೆ. ಈ ಸರ್ಕಾರ ಬೇಕಾ ಎಂದು ನೀವು ಆಲೋಚಿಸಿ.

ಈ 40% ಕಮಿಷನ್ ಸರ್ಕಾರ ಈ ರಾಜ್ಯದಲ್ಲಿ ಕೋಮು ದ್ವೇಷದ ವಿಷ ಬೀಜವನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಾರೆ. ಈ ಸರ್ಕಾರ ಹೊಟೇಲಿನಲ್ಲಿ ಮೆನು ಕಾರ್ಡ್ ಮಾದರಿಯಲ್ಲಿ ಭ್ರಷ್ಟಾಚಾರದ ರೇಟ್ ಕಾರ್ಡ್ ಹಾಕಿದ್ದಾರೆ. ಇದನ್ನು ಪತ್ರಿಕೆಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ, ಆಯುಕ್ತರಿಗೆ 15 ಕೋಟಿ, ಕೋವಿಡ್ ಪೂರೈಕೆಗೆ ಶೇ.75, ಪಿಡಬ್ಲ್ಯೂ ಕಾಮಗಾರಿಗೆ 40%, ಮಠಗಳ ಅನುದಾನಕ್ಕೆ 40%, ಮೊಟ್ಟೆ ಪೂರೈಕೆಗೆ 30% ಕಮಿಷನ್ ನಿಗದಿ ಮಾಡಿದ್ದಾರೆ. ಈ ಬಗ್ಗೆ 2 ಲಕ್ಷ ಸದಸ್ಯರಿರುವ ಗುತ್ತಿಗೆದಾರರ ಸಂಘದವರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಕಾಮಗಾರಿ ಮಾಡಿದ್ದು ನಿಜವಲ್ಲವೇ? ಆದರೂ ಸರ್ಕಾರ ದುಡ್ಡು ಕೊಡಲು ನಿರಾಕರಿಸಿದ್ದು ನಿಜವಲ್ಲವೇ? ಕಾಂಗ್ರೆಸ್ ನಾಯಕರು ಅವರ ಮನೆಗೆ ಹೋಗಿ ಕುಟುಂಬಕ್ಕೆ ಸಾಂತ್ವನ ಹೇಳಿದೆವು. ಈವರೆಗೂ ಆ ಕುಟುಂಬಕ್ಕೆ ಸರ್ಕಾರ ಬಿಲ್ ಪಾವತಿ ಮಾಡಿಲ್ಲ. ಕಳೆದ ಮೂರುವರೆ ವರ್ಷಗಳಿಂದ ಬಿಜೆಪಿಯ ಪಾಪದ ಕೊಡ ತುಂಬಿದೆ. ಈಗ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹೊಸ ವಚನಗಳ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಫೆಬ್ರವರಿ 17ರಂದು ಬಜೆಟ್ ಮಂಡಿಸಿ ಆಗ ಇನ್ನಷ್ಟು ಆಶ್ವಾಸನೆ ನೀಡಲು ಹೊರಟಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಜನರಿಗೆ ಕೊಡುಗೆ ನೀಡಲು ಆಗಿಲ್ಲ.

ಮೀಸಲಾತಿ ವಿಚಾರದಲ್ಲಿ ನಾಟಕವಾಡುತ್ತಾ, ಸುಳ್ಳು ಹೇಳುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸುತ್ತಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಸಮಸ್ಯೆಗೆ ಪರಿಹಾರ ನೀಡದೇ, ಜನರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ. ಬಿಜೆಪಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲು ಆಗಿಲ್ಲ. ನಾವು ನುಡಿದಂತೆ ನಡೆದಿದ್ದೇವೆ. ಸಿದ್ದರಾಮಯ್ಯ ಅವರ ಕಾಲದಲ್ಲಿ ನಾವು ಕೊಟ್ಟಿದ್ದ 165 ಭರವಸೆಗಳ ಪೈಕಿ 159 ಭರವಸೆ ಈಡೇರಿಸಿದ್ದೇವೆ.

ಬಸವಣ್ಣ, ಕುವೆಂಪು, ಕನಕದಾಸ, ಶಿಶುನಾಳ ಷರೀಫರ ಕರ್ನಾಟಕ ನಿರ್ಮಾಣವಾಗಬೇಕು. ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ. ಇದನ್ನು ಗಮನದಲ್ಲಿಟ್ಟುಕೊಂಡು ಆಶೀರ್ವಾದ ಮಾಡಬೇಕು. ನಿಮಗಾಗಿ ನಾವು ಕೆಲವು ಸಂಕಲ್ಪ ಮಾಡಿದ್ದೇವೆ. ಅದರ ಪೈಕಿ ಮೊದಲನೇ ಗ್ಯಾರೆಂಟಿ ಘೋಷಣೆಯನ್ನು ಪ್ರಕಟಿಸಿದ್ದೇವೆ. ನಿಮ್ಮ ಸೇವೆ ಮಾಡಲು, ನಿಮಗೆ ಬಲಿಷ್ಠ ಸರ್ಕಾರ ನೀಡಲು ಅಭಿವೃದ್ಧಿ ಕರ್ನಾಟಕ ನಿರ್ಮಾಣಕ್ಕೆ, ರಾಜ್ಯದ ಕಳಂಕ ತೊಳೆಯಲು ನೀವೆಲ್ಲರೂ ನಮಗೆ ಸಹಕಾರ ನೀಡಬೇಕು.

ಈ ತಿಂಗಳು 16 ರಂದು ರಾಷ್ಟ್ರೀಯ ನಾಯಕಿ ಪ್ರಿಯಾಂಕಾ ಗಾಂಧಿ ಅವರು ರಾಜ್ಯಕ್ಕೆ ಆಗಮಿಸಿ ರಾಜ್ಯದ ನಾಯಕಿಯರನ್ನು ಭೇಟಿ ಮಾಡುತ್ತಿದ್ದಾರೆ. ಹೆಣ್ಣು ಕುಟುಂಬದ ಕಣ್ಣು, ಹೆಣ್ಣು ದೇಶದ ಶಕ್ತಿ, ಆಸ್ತಿ ಎಂದು ನಾ ನಾಯಕಿ ಕಾರ್ಯಕ್ರಮ ಮಾಡುತ್ತಿದ್ದಾರೆ. ಪ್ರತಿ ಪಂಚಾಯ್ತಿಯಿಂದಲೂ ಮಹಳೆಯರು ಸಮಾವಶದಲ್ಲಿ ಭಾಗವಹಿಸಬೇಕು. ನಾವು ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ನೀಡಲು ಪ್ರಿಯಾಂಕ ಗಾಂಧಿ ಅವರು ಸೂಚಿಸಿದ್ದಾರೆ. ನೀವು ಅವರ ಕಾರ್ಯಕ್ರಮಕ್ಕೆ ಬಂದು ಕೈ ಜೋಡಿಸಬೇಕು ಎಂದು ಮನವಿ ಮಾಡುತ್ತೇನೆ.ʼ ಎಂದರು.

ಇದನ್ನೂ ಓದಿ | Prajadhwani Yatre | ಬಿಜೆಪಿಯವರು ಕಂಸ, ದುರ್ಯೋಧನಗಿಂತ ನಿರ್ದಯಿಗಳು: ರಣದೀಪ್‌ ಸಿಂಗ್‌ ಸುರ್ಜೆವಾಲ ವಾಗ್ದಾಳಿ

Exit mobile version