Site icon Vistara News

JP Nadda : ಪಾಕ್‌ ಬೆಂಬಲಿಗರನ್ನು ಭಾರತ ಮಾತೆ ಕ್ಷಮಿಸಲ್ಲ; ಕಾಂಗ್ರೆಸ್‌ಗೆ ನಡ್ಡಾ ಎಚ್ಚರಿಕೆ

JP Nadda

JP Nadda's stolen car recovered from Varanasi, two arrested

ಚಿಕ್ಕೋಡಿ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ (Rama Mandir) ನಿರ್ಮಾಣ, ಜಮ್ಮು- ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿ ರದ್ದು ಸೇರಿದಂತೆ ವಿವಿಧ ಭರವಸೆಗಳನ್ನು ಈಡೇರಿಸಿ ಬಿಜೆಪಿ ನುಡಿದಂತೆ ನಡೆದಿದೆ. ದೂರದೃಷ್ಟಿಯಿರುವ ಬಿಜೆಪಿಯನ್ನು ಜನತೆ ಬೆಂಬಲಿಸುವ ವಿಶ್ವಾಸವಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರು ತಿಳಿಸಿದರು.

ಚಿಕ್ಕೋಡಿಯಲ್ಲಿ ಮಂಗಳವಾರ ಬಿಜೆಪಿ ಬೂತ್ ಸಮಾವೇಶದಲ್ಲಿ (BJP Booth Samavesha) ಭಾಗವಹಿಸಿ ಮಾತನಾಡಿದ ಅವರು, ಪಾಕಿಸ್ತಾನದ ಪರ ಇರುವವರನ್ನು ಭಾರತ ಮಾತೆ ಎಂದೂ ಕ್ಷಮಿಸುವುದಿಲ್ಲ ಎಂದರು. ಪಾಕಿಸ್ತಾನ ಜಿಂದಾಬಾದ್ (Pakistan Zindabad) ಘೋಷಣೆ ಕೂಗುವ ರಾಜ್ಯಸಭಾ ಸದಸ್ಯರಿರುವ ಕಾಂಗ್ರೆಸ್ ಪಕ್ಷದವರನ್ನು ರಾಜ್ಯದ ಜನತೆ ಬೆಂಬಲಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಮ್ಮ ಸರಕಾರ ಇದ್ದಾಗ ಶಾಂತ ಪರಿಸ್ಥಿತಿ ನೆಲೆಸಿತ್ತು. ಈಗ ಬಾಂಬ್ ಸ್ಫೋಟಿಸುತ್ತಿದೆ ಎಂದು ಅವರು ಗಮನ ಸೆಳೆದರು.

JP Nadda : ಮುಸ್ಲಿಂ ಮಹಿಳೆಯರಿಗೆ ಅನ್ಯಾಯ ಆಗಲು ಬಿಡಲ್ಲ

ಬಡವರು, ಮಹಿಳೆಯರು (ನಾರಿಶಕ್ತಿ), ರೈತರು, ಯುವಜನತೆಯ ಆಶಯಗಳನ್ನು ಈಡೇರಿಸಿದ ಪಕ್ಷವಾಗಿ ಬಿಜೆಪಿ ಬೆಳೆದಿದೆ. ಬಿಜೆಪಿ ಸಿದ್ಧಾಂತ ಆಧರಿಸಿದ ಪಕ್ಷ. ಮುಸ್ಲಿಮ್ ಮಹಿಳೆಯರಿಗೆ ಅನ್ಯಾಯ ಆಗಲು ಬಿಡುವುದಿಲ್ಲ ಎಂದು ನಾವು ಹೇಳಿದ್ದೆವು. ತ್ರಿವಳಿ ತಲಾಖ್ ಪದ್ಧತಿಯನ್ನು ನಾವು ರದ್ದು ಮಾಡಿದ್ದೇವೆ. ಆದರೆ, ಕಾಂಗ್ರೆಸ್ ಪಕ್ಷ ತುಷ್ಟೀಕರಣದ ಕಾರಣಕ್ಕಾಗಿ ಈ ಕಡೆ ಗಮನ ಹರಿಸಿರಲಿಲ್ಲ ಎಂದು ವಿವರಿಸಿದರು.

ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷ ನಮ್ಮದು. ಅಣ್ಣಾಸಾಹೇಬ್ ಜೊಲ್ಲೆಯವರು ಸೇರಿ 303 ಸಂಸದರು ನಮ್ಮ ಪಕ್ಷದವರು ಲೋಕಸಭೆಯಲ್ಲಿದ್ದಾರೆ. ನಮ್ಮ ಯುವಜನರಿಗೆ ತರಬೇತಿ ನೀಡಿ ಪ್ರಧಾನಿ ಮೋದಿಯವರು ಆತ್ಮನಿರ್ಭರರನ್ನಾಗಿ ಮಾಡಿದ್ದಾರೆ ಎಂದು ತಿಳಿಸಿದರು.

ವಿಕಸಿತ ಭಾರತ ಸಂಕಲ್ಪದಲ್ಲಿ ತಮ್ಮನ್ನು ತೊಡಗಿಕೊಳ್ಳುವಂತೆ ಮೋದಿಜೀ ಅವರು ಯುವಜನರಿಗೆ ಪ್ರೋತ್ಸಾಹ ಕೊಟ್ಟಿದ್ದಾರೆ ಎಂದ ಅವರು, ಕಾಂಗ್ರೆಸ್ ಭ್ರಷ್ಟಾಚಾರ, ಕಮಿಷನ್, ಕೌಟುಂಬಿಕವಾದದ ಪಕ್ಷ. 10 ವರ್ಷಗಳ ಹಿಂದೆ ಭಾರತವನ್ನು ಅಸಮರ್ಪಕ ನೀತಿಯುಳ್ಳ ದೇಶವಾಗಿ ನೋಡಲಾಗುತ್ತಿತ್ತು. ಸಮರ್ಥ ನಿರ್ಧಾರ ತೆಗೆದುಕೊಳ್ಳಲಾಗದ ದೇಶ ಎಂದೇ ಭಾರತವನ್ನು ಬಿಂಬಿಸುವ ಸ್ಥಿತಿ ಹಿಂದೆ ಇತ್ತು. 2014ರ ಬಳಿಕ ಮೋದಿಯವರ ನೇತೃತ್ವದಲ್ಲಿ ಭಾರತವು ಆತ್ಮವಿಶ್ವಾಸ ಹೊಂದಿದ ವಿಶ್ವಕ್ಕೇ ದೂರದೃಷ್ಟಿ ಕೊಡುವ ದೇಶವಾಗಿ ಬೆಳೆದುನಿಂತಿದೆ ಎಂದು ನುಡಿದರು.

ಸ್ವಾವಲಂಬಿ, ವಿಶ್ವಾಸಯುಕ್ತ ಜನರಿರುವ ದೇಶವನ್ನಾಗಿ ಭಾರತವನ್ನು ಮೋದಿಯವರು ಪರಿವರ್ತಿಸಿದ್ದಾರೆ. ಆತ್ಮನಿರ್ಭರ ದೇಶವಾಗಿ ಅದು ಬದಲಾಗುತ್ತಿದೆ. ಪ್ರಧಾನಿಯವರು ದೇಶವನ್ನು ಆತ್ಮವಿಶ್ವಾಸವುಳ್ಳ ರಾಷ್ಟ್ರವಾಗಿ ಪರಿವರ್ತಿಸಿದ್ದನ್ನು ನಾವು ಜನತೆಯ ಮುಂದಿಡಬೇಕು ಎಂದು ಮನವಿ ಮಾಡಿದರು.

ಎಲ್ಲ 28 ಕ್ಷೇತ್ರಗಳನ್ನು ಗೆಲ್ಲುವ ಶಪಥದೊಂದಿಗೆ ಹೊರಟಿದ್ದೇನೆ ಎಂದ ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಲೋಕಸಭಾ ಚುನಾವಣೆಗೆ ಕೇವಲ 50-60 ದಿನಗಳು ಮಾತ್ರ ಬಾಕಿ ಇದೆ. ಬಿಜೆಪಿ- ಜೆಡಿಎಸ್ ಒಂದಾಗಿ ರಾಜ್ಯದ ಎಲ್ಲ 28 ಕ್ಷೇತ್ರಗಳನ್ನು ಗೆಲ್ಲಲು ಶಪಥ ಮಾಡಿ ಹೊರಟಿದ್ದೇನೆ. ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲೂ ದೊಡ್ಡ ಅಂತರದಲ್ಲಿ ಬಿಜೆಪಿ ಗೆಲ್ಲಿಸಲು ಮನವಿ ಮಾಡಿದರು. 28ಕ್ಕೆ 28 ಕ್ಷೇತ್ರಗಳನ್ನು ಗೆಲ್ಲಿಸಿಕೊಡುವ ಭರವಸೆಯನ್ನು ನಡ್ಡಾಜೀ ಅವರಿಗೆ ನೀಡುವುದಾಗಿ ವಿಶ್ವಾಸದಿಂದ ನುಡಿದರು.

ರೈತರ ಸಂಕಷ್ಟಕ್ಕೆ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ. ಆದರೆ, ಅಲ್ಪಸಂಖ್ಯಾತರ ಅಭಿವೃದ್ಧಿ ಕಾರ್ಯಕ್ಕೆ ಮುಖ್ಯಮಂತ್ರಿಗಳು 10 ಸಾವಿರ ಕೋಟಿ ಅನುದಾನವನ್ನು ಪ್ರಕಟಿಸಿದ್ದಾರೆ. ರೈತರಿಗೆ ಪರಿಹಾರ ನೀಡಲು ಕಾಂಗ್ರೆಸ್ ಸರಕಾರದ ಬಳಿ ಹಣ ಇಲ್ಲ. ಆದರೆ, ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಅದು ಮುಂದಾಗಿದೆ ಎಂದು ಟೀಕಿಸಿದರು.

ಚಿಕ್ಕೋಡಿಗೆ ಬಂದ ಜೆ.ಪಿ. ನಡ್ಡಾ ಅವರಿಗೆ ಬಿವೈ ವಿಜಯೇಂದ್ರ ಅವರಿಂದ ಸ್ವಾಗತ

ಹಿಂದೂಗಳ ದಾನದ ಜಾಗ ಮುಸ್ಲಿಮರಿಗೆ ದಾನ ನೀಡಿದ ಜಮೀರ್‌

ಹಿಂದೂಗಳು ದಾನವಾಗಿ ಕೊಟ್ಟ 2 ಎಕರೆ ಜಾಗದಲ್ಲಿ ಆರಂಭಿಸಿದ್ದ ಪಶು ಆಸ್ಪತ್ರೆಯನ್ನು ಜಮೀರ್ ಅಹ್ಮದ್ ಅವರು ಕಿತ್ತುಕೊಂಡು ಅಲ್ಪಸಂಖ್ಯಾತರಿಗೆ ಕೊಡುತ್ತಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ರಾಜಕೀಯಕ್ಕೆ ತಕ್ಕ ಉತ್ತರವನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾವು ಕೊಡಬೇಕಿದೆ ಎಂದು ಮನವಿ ವಿಜಯೇಂದ್ರ ಮಾಡಿದರು.

ರಾಜ್ಯಸಭಾ ಚುನಾವಣೆಯ ಬಳಿಕ ಗೆದ್ದ ಕಾಂಗ್ರೆಸ್ ಅಭ್ಯರ್ಥಿ ನಾಸೀರ್ ಹುಸೇನ್ ಬೆಂಬಲಿಗರು ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆ. ಬಿಜೆಪಿ ಹೋರಾಟದ ಬಳಿಕ ನಿನ್ನೆ ಮೂವರನ್ನು ಬಂಧಿಸಿದ್ದಾರೆ. ಕಾಂಗ್ರೆಸ್ ಸರಕಾರ, ಮುಖ್ಯಮಂತ್ರಿಗಳಿಗೆ ಕಿಂಚಿತ್ತಾದರೂ ದೇಶಪ್ರೇಮ ಇದ್ದರೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದವರಿಗೆ ಶಕ್ತಿ ನೀಡಿದ ರಾಜ್ಯಸಭಾ ಎಂ.ಪಿ. ನಾಸೀರ್ ಹುಸೇನ್ ವಿರುದ್ಧ ಕೂಡ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ : BY Vijayendra :‌ ನಾಸಿರ್‌ ಹುಸೇನ್‌ ಕೂಡಾ ಅಪರಾಧಿ, FIRನಲ್ಲಿ ಸೇರಿಸಿ; ವಿಜಯೇಂದ್ರ ಆಗ್ರಹ

ಬೂತ್ ಸಮಾವೇಶದಲ್ಲಿ ನಾಯಕರ ದಂಡು

ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ್ ಕೋರೆ, ಶಾಸಕ ರಮೇಶ್ ಕತ್ತಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತೀಶ್ ಅಪ್ಪಾಜಿಗೋಲ್, ಲೋಕಸಭಾ ಚುನಾವಣೆ ರಾಜ್ಯ ಉಸ್ತುವಾರಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾ ಮೋಹನ್ ದಾಸ್ ಅಗರ್‍ವಾಲ್, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಶಾಸಕ ಪಿ. ರಾಜೀವ್, ಶಾಸಕ ಮಹೇಶ್ ಟೆಂಗಿನಕಾಯಿ, ಮಾಜಿ ಶಾಸಕ ಅನಿಲ್ ಬೆನಕೆ, ನಿಕಟಪೂರ್ವ ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವಣಾಚೆ, ವಿಭಾಗ ಸಹ ಪ್ರಭಾರಿ ಬಸವರಾಜ ಯಂಕಂಚಿ, ಎಸ್‍ಟಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಹುಂದ್ರಿ, ವಿಧಾನಪರಿಷತ್ ಮಾಜಿ ಸದಸ್ಯ ಮಹಂತೇಶ್ ಕವಟಗಿಮಠ, ಮಾಜಿ ಶಾಸಕ ಅಭಯ್ ಪಾಟೀಲ್, ಶಾಸಕರಾದ ದುರ್ಯೋಧನ ಐಹೊಳೆ, ನಿಖಿಲ್ ಕತ್ತಿ, ಮಾಜಿ ಶಾಸಕ ಶ್ರೀಮಂತ ಪಾಟೀಲ್, ಮಾಜಿ ಶಾಸಕ ಮಹೇಶ್ ಕುಮಟ್ಟಳ್ಳಿ , ವಿಭಾಗ ಪ್ರಭಾರಿ ಚಂದ್ರಶೇಖರ್ ಕವಟಗಿ, ಶಾಸಕ ಅಭಯ್ ಪಾಟೀಲ್, ಮಾಜಿ ಸಚಿವ ಮತ್ತು ರಾಜ್ಯ ಉಪಾಧ್ಯಕ್ಷ ಹನುಮಂತ ನಿರಾಣಿ ಮತ್ತಿತರ ನಾಯಕರು, ಕಾರ್ಯಕರ್ತರು ಭಾಗವಹಿಸಿದ್ದರು.

Exit mobile version