ಚಿಕ್ಕೋಡಿ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಕ್ಕಳ ಕಳ್ಳತನದ ಸಂಬಂಧ ವಿವಿಧ ರೀತಿಯ ಸುದ್ದಿಗಳು ಹರಿದಾಡುತ್ತಿರುವ ಬೆನ್ನಲ್ಲೇ, ಅಥಣಿಯಲ್ಲಿ ಹುಟ್ಟಿದ ೧೧ ಗಂಟೆಯಲ್ಲಿಯೇ ಶಿಶುವೊಂದನ್ನು ತೂಕ ಮಾಡುವ ನೆಪದಲ್ಲಿ ಹೊತ್ತೊಯ್ದು ಅಪರಹಣ (Kidnapping) ಮಾಡಲಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆಸ್ಪತ್ರೆ ಸಿಬ್ಬಂದಿ ಸೋಗಿನಲ್ಲಿ ಬಂದಿದ್ದ ದುಷ್ಕರ್ಮಿಗಳು, ಶಿಶು ಕೊಡಿ ತೂಕ ಮಾಡಿಕೊಂಡು ಬರಬೇಕು ಎಂದು ಹೇಳಿದ್ದಾರೆ. ಅದನ್ನು ನಂಬಿದ ಪೋಷಕರು ಶಿಶುವನ್ನು ಅವರ ಕೈಗೆ ಕೊಟ್ಟಿದ್ದಾರೆ. ನೀವು ಇಲ್ಲೇ ಇರಿ ನಾವು ತೂಕ ಮಾಡಿಕೊಂಡು ತಂದು ಕೊಡುತ್ತೇವೆ ಎಂದು ಹೇಳಿ ಹೋದವರು ಎಷ್ಟು ಸಮಯವಾದರೂ ಪತ್ತೆ ಇರಲಿಲ್ಲ. ಅವರಿಗಾಗಿ ಕಾದು ಕಾದು ಸುಸ್ತಾದ ಪೋಷಕರಿಗೆ ಆತಂಕವಾಗಿ ಆಸ್ಪತ್ರೆಯ ಸಿಬ್ಬಂದಿಯನ್ನು ವಿಚಾರಿಸಿದಾಗಲೇ ಶಿಶುವನ್ನು ಅಪಹರಣ (Kidnapping) ಮಾಡಿರುವ ವಿಷಯ ಗೊತ್ತಾಗಿದೆ.
ಇಲ್ಲಿನ ಅಥಣಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ದುಷ್ಕರ್ಮಿಗಳು ಶಿಶು ಕಳ್ಳತನ ಮಾಡಿರುವ ಘಟನೆ ನಡೆದಿದೆ. ಅಂಬಿಕಾ ಹಾಗೂ ಅಮಿತ್ ಭೋವಿ ದಂಪತಿಯ ಶಿಶು ಇದಾಗಿದ್ದು, ಮಂಗಳವಾರ ರಾತ್ರಿ ಹನ್ನೊಂದು ಗಂಟೆಗೆ ಗಂಡು ಮಗು ಜನಿಸಿತ್ತು. ಈ ಖುಷಿ ಇವರಿಗೆ ಬಹಳ ಕಾಲ ಉಳಿಯಲೇ ಇಲ್ಲ.
ಬುಧವಾರ ಬೆಳಗಿನ ಜಾವ ಎಲ್ಲರೂ ಇರುವಾಗಲೇ ಸಿಬ್ಬಂದಿ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಶಿಶುವನ್ನು ತೂಕ ಮಾಡಿಸಬೇಕೆಂದು ವೈದ್ಯರು ತಿಳಿಸಿದ್ದಾರೆ ಎಂದು ಹೇಳಿ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಸೀದಾ ಪರಾರಿಯಾಗಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಗುವನ್ನು ಕಳೆದುಕೊಂಡಿರುವ ದುಃಖದಲ್ಲಿರುವ ಪೋಷಕರು, “ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಸಿಬ್ಬಂದಿ ಈ ಬಗ್ಗೆ ನಿಗಾವಹಿಸಬೇಕು, ಇಲ್ಲದಿದ್ದರೆ ಇಲ್ಲಿ ಮಕ್ಕಳನ್ನು ಹೇಗೆ ರಕ್ಷಣೆ ಮಾಡುತ್ತಾರೆ?” ಎಂದು ಪ್ರಶ್ನೆ ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಎಲ್ಲರೂ ಇರುವಾಗಲೇ ಶಿಶು ಕಳ್ಳತನ ನಡೆದಿರುವುದಕ್ಕೆ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ | ಕಿಮ್ಸ್ ಮಗು ಕಳ್ಳತನ ಪ್ರಕರಣ, ತಾಯಿಯೇ ವಿಲನ್!