ಬೆಂಗಳೂರು: ಅವಳಿಗೆ ಕೇವಲ ೧೪ ವರ್ಷ, ಅವನಿಗೆ ೪೫ ವರ್ಷ. ಅವನು ಅವಳನ್ನು ಯಾವ ಮಾಯಕದಲ್ಲಿ ಮೋಸ ಮಾಡಿದನೋ, ಅವಳ ಹೆತ್ತವರನ್ನು ಹೇಗೆಲ್ಲ ಪುಸಲಾಯಿಸಿದನೋ ಗೊತ್ತಿಲ್ಲ. ಮನೆಯವರು ಅವಳನ್ನು ಅವನಿಗೆ ಮದುವೆಯೇ ಮಾಡಿಕೊಟ್ಟಿದ್ದಾರೆ. ಬರೋಬ್ಬರಿ ೩೧ ವರ್ಷದ ಅಂತರವನ್ನು ಇಟ್ಟುಕೊಂಡು! ಈಗ ಪೊಲೀಸರು ಈ ಮದುಮಗನನ್ನು ಬಂಧಿಸಿದ್ದಾರೆ. ಜತೆಗೆ ಬಾಲಕಿಯ ಅಪ್ಪ ಮತ್ತು ಅಮ್ಮನನ್ನು!
೧೪ರ ಬಾಲಕಿಯನ್ನು ಮದುವೆಯಾದ ೪೫ರ ವ್ಯಕ್ತಿ ಯಾರೆಂದರೆ ಯಲಹಂಕದ ಗುರುಪ್ರಸಾದ್. ಮೊನ್ನೆ ಮೊನ್ನೆ ಅಂದರೆ ಸೆಪ್ಟೆಂಬರ್ ೭ರಂದು ಈ ಮದುವೆ ನಡೆದಿತ್ತು. ಬಾಲಕಿಗೆ ಇದು ಇಷ್ಟವಿರಲಿಲ್ಲ. ಹೀಗಾಗಿ ಆಕೆ ಧೈರ್ಯ ಮಾಡಿ ಯಾರೋ ಸಂಬಂಧಿಕರ ನೆರವಿನಿಂದ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಗುರುಪ್ರಸಾದ್ ಅಂದರ್ ಆಗಿದ್ದಾನೆ. ಬಾಲಕಿಯ ತಂದೆ-ತಾಯಿಯೂ ಸಿಕ್ಕಿಬಿದ್ದಿದ್ದಾರೆ.
ಹೇಗೆ ನಡೆಯಿತು ಮದುವೆ? ಏನಿವನ ಬಿಸಿನೆಸ್ಸು?
೪೫ರ ವರ್ಷದ ಗುರುಪ್ರಸಾದ್ ಸ್ವಂತ ಜೆಸಿಬಿ ಇಟ್ಕೊಂಡು ಬಿಸಿನೆಸ್ ಮಾಡಿಕೊಂಡಿದ್ದಾನೆ. ವ್ಯವಹಾರವೇನೋ ಚೆನ್ನಾಗಿದೆ. ಆದರೆ, ಉಳಿದ ಸಂಗತಿಗಳೇ ಸರಿ ಇಲ್ಲ. ಅವನಿಗೆ ಈ ಹಿಂದೆಯೇ ಮದುವೆಯಾಗಿದೆ. ಆದರೆ ಹೆಂಡತಿ ಜತೆ ಬಾಳಲಾಗದೆ ಕೆಲವು ವರ್ಷಗಳಿಂದ ದೂರವಾಗಿದ್ದ. ಅವನಿಗೆ ೧೭ ವರ್ಷದ ಮಗನಿದ್ದಾನೆ.
ಆದರೆ, ಮರು ಮದುವೆಯಾಗಬೇಕು ಎಂದಾಗ ಮಗನ ವಯಸ್ಸಿಗಿಂತಲೂ ಸಣ್ಣವಳಾಗಿರುವ ಈ ಬಾಲಕಿಯ ಮೇಲೆ ಕಣ್ಣು ಬಿದ್ದಿದೆ. ಆ ಹುಡುಗಿಯದು ಬಡ ಕುಟುಂಬ. ಹೀಗಾಗಿ ಆಕೆಯನ್ನು ತನಗೆ ಮದುವೆ ಮಾಡಿಕೊಡಿ ಎಂದು ಹೇಳುವುದು ಅವನಿಗೆ ಸುಲಭವಾಗಿದೆ. ಅವರೋ ಆಮಿಷಕ್ಕೆ ಒಳಗಾಗಿ, ಭಾರ ಇಳಿಯಿತು ಎಂಬ ಕಾರಣಕ್ಕಾಗಿಯೋ ಏನೋ ಮದುವೆಗೆ ಒಪ್ಪಿ ಬಿಟ್ಟಿದ್ದಾರೆ.
ಹಾಗಂತ ಬಾಲಕಿಗೆ ಈ ಮದುವೆ ಇಷ್ಟವೇ ಇರಲಿಲ್ಲ. ಆದರೆ, ಹೆತ್ತವರು ಆಮಿಷಕ್ಕೆ ಒಳಗಾಗಿ ಆಕೆಯನ್ನು ಬಲವಂತ ಮಾಡಿದ್ದರು. ವಿಪರೀತ ಹಣದಾಸೆ ತೋರಿಸಿದ್ದರಿಂದ, ಭಾವನಾತ್ಮಕವಾಗಿ ಮಾಡಿದ ಬ್ಲ್ಯಾಕ್‌ಮೇಲ್‌ಗೆ ಅವರೂ ಒಳಗಾಗಿದ್ದರು. ಅಂತೂ ಕೊನೆಗೆ ಕಳೆದ ಬುಧವಾರ ನಗರದ ಹೊರವಲಯಕ್ಕೆ ಹುಡುಗಿಯನ್ನು ಕರೆದುಕೊಂಡು ಮದುವೆಯಾಗಿದ್ದಾನೆ.
ಆದರೆ, ಈ ಮದುವೆಯನ್ನು ಬಾಲಕಿ ಸುತಾರಾಂ ಒಪ್ಪಿರಲೇ ಇಲ್ಲ. ಅವಳು ತನ್ನ ಪರಿಚಯಸ್ಥರಿಗೆ ತಿಳಿಸಿ ಏನು ಮಾಡಬಹುದು ಎಂದು ಸಲಹೆ ಪಡೆದಿದ್ದಳು. ಅದರಂತೆ, ಅವರ ನೆರವಿನೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಿರುವ ಯಲಹಂಕ ನ್ಯೂಟೌನ್ ಪೊಲೀಸರು ಬಾಲಕಿಯನ್ನು ಸರಕಾರ ರಿಮಾಂಡ್ ಹೋಮ್‌ಗೆ ಕಳುಹಿಸಿದ್ದಾರೆ.
ಇದನ್ನೂ ಓದಿ | ಹುಡುಗಿ ಒಂದು ವರ್ಷದಲ್ಲಿದ್ದಾಗ ಆಗಿದ್ದ ಮದುವೆಯನ್ನು 20 ವರ್ಷದ ಬಳಿಕ ರದ್ದುಗೊಳಿಸಿದ ನ್ಯಾಯಾಲಯ