Site icon Vistara News

Child theft rumour | ವಿಜಯನಗರ, ಧಾರವಾಡಕ್ಕೂ ಹಬ್ಬಿದ ಹಲ್ಲೆ ಹಾವಳಿ, ಇಬ್ಬರ ಮೇಲೆ ತೀವ್ರ ದಾಳಿ

Dharwad theft

ಧಾರವಾಡ/ವಿಜಯ ನಗರ: ಮಕ್ಕಳ ಕಳ್ಳರೆಂದು ಸಂಶಯಿಸಿ ಹಲ್ಲೆ ಮಾಡುವ ಘಟನೆಗಳು ಒಂದೇ ಸಮನೆ ಹೆಚ್ಚುತ್ತಿವೆ. ರಾಜ್ಯದ ಯಾವುದೇ ಭಾಗದಲ್ಲಿ ಮಕ್ಕಳ ಕಳವಿನ ಯಾವುದೇ ಪ್ರಕರಣ ವರದಿಯಾಗಿಲ್ಲ. ಆದರೆ, ವದಂತಿ ಮಾತ್ರ ಕಾಳ್ಗಿಚ್ಚಿನಂತೆ ಹರಡುತ್ತಿದ್ದು, ಜನ ಸಂಶಯದ ಆಧಾರದಲ್ಲಿ ಕಳ್ಳರೆಂದೇ ಭ್ರಮಿಸಿ ಹಲ್ಲೆ ಮಾಡುತ್ತಿದ್ದಾರೆ. ಬಾಗಲಕೋಟೆಯಲ್ಲಿ ಶುಕ್ರವಾರ ವಾಹನವೊಂದನ್ನು ಬೆನ್ನಟ್ಟಿ, ಅದು ಪಲ್ಟಿಯಾಗಿ ಮೂವರು ಗಾಯಗೊಂಡಿದ್ದರು. ಭಾನುವಾರ ಧಾರವಾಡ ಮತ್ತು ವಿಜಯನಗರದಲ್ಲಿ ಇಬ್ಬರ ಮೇಲೆ ತೀವ್ರ ದಾಳಿ ನಡೆದಿದೆ.

ಕಳ್ಳನೆಂದು ಕಟ್ಟಿಹಾಕಿರುವುದು.

ಧಾರವಾಡದಲ್ಲಿ ಏನಾಯಿತು?
ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮಕ್ಕಳ ಕಳ್ಳ ಎಂದು ಭಾವಿಸಿ ಗ್ರಾಮಸ್ಥರೇ ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಹಿಂದಿಯಲ್ಲಿ ಮಾತನಾಡುತ್ತಿದ್ದ ಈತನ ಜೇಬಿನಲ್ಲಿ ಮಕ್ಕಳ ಫೋಟೊ, ಗುರುತಿನ ಚೀಟಿ ಹಾಗೂ ಎಟಿಎಂ ಕಾರ್ಡ್‌ ಇದ್ದಿದ್ದನ್ನು ನೋಡಿದ ಗ್ರಾಮಸ್ಥರು ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಈ ವಿಷಯ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದಾರೆ. ಪೊಲೀಸರು ಬಂದರೂ ಆ ವ್ಯಕ್ತಿಯನ್ನು ಬಿಡದ ಗ್ರಾಮಸ್ಥರು ಪೊಲೀಸರ ಮುಂದೆಯೇ ಥಳಿಸಿದ್ದಾರೆ. ನಂತರ ಗ್ರಾಮಸ್ಥರನ್ನು ಬಿಡಿಸಿದ ಪೊಲೀಸರು, ಆ ವ್ಯಕ್ತಿಯನ್ನು ತಮ್ಮ ವಶಕ್ಕೆ ಪಡೆದು ಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಿಸಿದ್ದಾರೆ.

ವಿಜಯನಗರದಲ್ಲಿ ಮಹಿಳೆಗೆ ದಿಗ್ಬಂಧನ
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಾಪಿನಾಯಕನ ಹಳ್ಳಿಯಲ್ಲಿ ಮಕ್ಕಳ ಕಳ್ಳಿ ಎಂದು ಮಹಿಳೆಗೆ ದಿಗ್ಬಂಧನ ವಿಧಿಸಿದ್ದಾರೆ. ಮಹಿಳೆಯೊಬ್ಬಳನ್ನು ಸುತ್ತುವರೆದು ಅನುಮಾನ ಪಟ್ಟ ಜನರು ನಾನಾ ರೀತಿಯಲ್ಲಿ ಮಾತನಾಡಿದರು. ʻʻಆಕೆ ಮಕ್ಕಳ ಕಳ್ಳೀನೇ.. ಆಕೆಯ ಬಳಿ ಮತ್ತು ಬರೋ ಔಷಧ ಇದೆʼʼ ಎಂದೆಲ್ಲ ಹೇಳುತ್ತಿದ್ದಾರೆ.

ಮಹಿಳೆಗೆ ದಿಗ್ಬಂಧನ

ʻʻಎಲ್ಲಿಂದ ಬಂದಿದಿಯಾ, ಏನು ಮಾಡಲು ಬಂದಿದ್ದಿಯಾ? ಬಾಯಲ್ಲಿ ಏನೇನೋ ಹಾಕಿಕೊಂಡಿದ್ದೀಯಾ? ಅದೆಲ್ಲಾ ಏನು ಅಂತ ಹೇಳುʼʼ ಎಂದು ಜನರು ಪ್ರಶ್ನೆ ಮಾಡಿದರೆ, ಆಕೆ ಮಾತ್ರ ಯಾವುದಕ್ಕೂ ಉತ್ತರಿಸಲಿಲ್ಲ. ಆಕೆ ಮಾನಸಿಕ ಅಸ್ವಸ್ಥಳಂತೆ ಕಾಣುತ್ತಿದ್ದಳು. ಹೊಸಪೇಟೆ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ಮಾಡಿದ್ದಾರೆ.

ಇದನ್ನೂ ಓದಿ| child theft | ಮಕ್ಕಳ ಕಳ್ಳರೆಂದು ಭ್ರಮಿಸಿ ಬೆನ್ನಟ್ಟಿದರು, ಇನ್ನೋವಾ ವಾಹನ ಪಲ್ಟಿಯಾಗಿ ಮೂವರಿಗೆ ಗಾಯ

Exit mobile version