ಮೈಸೂರು: ಚಿತ್ರದುರ್ಗ ಮುರುಘಾಮಠದ ಪೀಠಾಧಿಪತಿ ಶ್ರೀ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ಸಂತ್ರಸ್ತ ಇಬ್ಬರು ವಿದ್ಯಾರ್ಥಿನಿಯರನ್ನು ವೈದ್ಯಕೀಯ ಪರೀಕ್ಷೆಗೆ ಕರೆದೊಯ್ಯಲಾಗಿದೆ.
ಒಡನಾಡಿ ಸಂಸ್ಥೆ ಸಿಬ್ಬಂದಿ ಜತೆಗೆ ಬಾಲಕಿಯರನ್ನು ವೈದ್ಯಕೀಯ ಪರೀಕ್ಷೆಗಾಗಿ ಪೊಲೀಸರು ಕರೆದೊಯ್ದಿದ್ದಾರೆ. ತನಿಖೆ ಕೈಗೊಂಡಿರುವ ಪೊಲೀಸರು ಬಾಲಕಿಯರಿಂದ ಹೇಳಿಕೆ ಪಡೆದುಕೊಂಡಿದ್ದು, ಸಾಕ್ಷ್ಯಾಧಾರಗಳನ್ನು ಕಲೆಹಾಕಲು ಮುಂದಾಗಿದ್ದಾರೆ.
ನ್ಯಾಯಾಂಗ ತನಿಖೆಗೆ ವಹಿಸಿ
ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಸ್ಟ್ಯಾನ್ಲಿ, “ಬೇಲಿಯೇ ಎದ್ದು ಹೊಲ ಮೇಯ್ದರೆ ಎಲ್ಲಿಗೆ ಹೋಗುವುದು? ಹಾಸ್ಟೆಲ್‌ನಲ್ಲಿ ಮಕ್ಕಳನ್ನು ಸ್ವಾಮೀಜಿಯೇ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಅಪ್ಪ, ತಂದೆ, ಅಣ್ಣ ಅನ್ನಿಸಿಕೊಂಡವರೇ ಹೀಗೆ ಮಾಡಿದರೆ ಪರಿಸ್ಥಿತಿ ಏನಾಗಲಿದೆ? ಮಕ್ಕಳಿಗೆ ನಾವು ರಕ್ಷಣೆ ನೀಡಿದ್ದೇವೆ. ಕಾನೂನು ಹೋರಾಟ ಆರಂಭವಾಗಿದೆ. ಈ ಪ್ರಕರಣ ಸಂಬಂಧ ಮೈಸೂರಿನ ನಜರ್‌ಬಾದ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದೇವೆ. ಆರೋಪಿ ಸ್ಥಾನದಲ್ಲಿ ಇರುವವರು ಸಮಾಜದ ಗಣ್ಯ ವ್ಯಕ್ತಿಯಾಗಿದ್ದಾರೆ. ಹೀಗಾಗಿ ಪಾರದರ್ಶಕ ತನಿಖೆಯಾಗಬೇಕೆಂದರೆ ನ್ಯಾಯಾಂಗ ತನಿಖೆಯನ್ನು ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ | ಚಿತ್ರದುರ್ಗ ಮಠದ ಮುರುಘಾಶರಣರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ: ಇಬ್ಬರು ವಿದ್ಯಾರ್ಥಿನಿಯರಿಂದ ದೂರು
ಏನಿದು ಲೈಂಗಿಕ ಕಿರುಕುಳ ಪ್ರಕರಣ?
ಚಿತ್ರದುರ್ಗ ಜಿಲ್ಲೆಯ ಮಠದ ಮೂಲಕ ನಡೆಸಲಾಗುವ ಪ್ರೌಢ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸುತ್ತಾ, ವಸತಿ ಶಾಲೆಯಲ್ಲಿ ವಾಸ ಮಾಡುತ್ತಿರುವ ವಿದ್ಯಾರ್ಥಿನಿಯರ ಮೇಲೆ ಸ್ವಾಮೀಜಿ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದು, ಇದಕ್ಕೆ ಅಲ್ಲಿನ ವಾರ್ಡನ್ ಸೇರಿ ಹಲವರು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ. ಒಬ್ಬ ವಿದ್ಯಾರ್ಥಿನಿ ಮೇಲೆ ಮೂರು ವರ್ಷದಿಂದ ಇನ್ನೊಬ್ಬ ವಿದ್ಯಾರ್ಥಿನಿ ಮೇಲೆ ಒಂದೂವರೆ ವರ್ಷದಿಂದ ದೌರ್ಜನ್ಯ ನಡೆಯುತ್ತಿದೆ ಎನ್ನಲಾಗಿದೆ. ಅವರಿಬ್ಬರು ಮಹಿಳಾ ರಕ್ಷಣಾ ಸಮಿತಿ ಮತ್ತು ಸಾಂತ್ವನ ಕೇಂದ್ರವಾದ ಮೈಸೂರಿನ ಒಡನಾಡಿ ಸಂಸ್ಥೆಗೆ ದೂರು ನೀಡಿದ್ದರು. ಸಂಸ್ಥೆಯು ಅವರಿಬ್ಬರನ್ನೂ ಕರೆಸಿಕೊಂಡು ಆಪ್ತ ಸಮಾಲೋಚನೆಯ ಮೂಲಕ ದೌರ್ಜನ್ಯದ ವಿವರಗಳನ್ನು ಪಡೆದುಕೊಂಡು ಇದೀಗ ಚಂದ್ರಕುಮಾರ್ ಎಂಬುವರ ಮೂಲಕ ಪೊಲೀಸರಿಗೆ ದೂರು ನೀಡಿದೆ.
ಹೇಗೆ ದೌರ್ಜನ್ಯ, ಯಾರೆಲ್ಲ ಭಾಗಿಗಳು?
ಡಾ. ಶಿವಮೂರ್ತಿ ಮುರುಘಾಶರಣರಲ್ಲದೆ, ಅವರಿಗೆ ಸಹಕಾರ ನೀಡಿದ ಆರೋಪದಲ್ಲಿ ವಸತಿ ಶಾಲೆಯ ವಾರ್ಡನ್ ಆಗಿರುವ ರಶ್ಮಿ, ಮಠಕ್ಕೆ ಸಂಬಂಧಿಸಿದ ಬಸವಾದಿತ್ಯ, ಲಾಯರ್ ಗಂಗಾಧರ್ ಮತ್ತು ಲೀಡರ್ ಪರಮಶಿವಯ್ಯ ಅವರ ವಿರುದ್ಧ ದೂರು ದಾಖಲಾಗಿದೆ.
ಈ ಇಬ್ಬರು ವಿದ್ಯಾರ್ಥಿನಿಯರನ್ನು ಒತ್ತಾಯಪೂರ್ವಕವಾಗಿ ಸ್ವಾಮೀಜಿಗಳ ಬಳಿಗೆ ಕಳುಹಿಸಲಾಗುತ್ತಿತ್ತು ಎಂದು ಆರೋಪಿಸಲಾಗಿದೆ. ಸ್ವಾಮೀಜಿ ಬಳಿಗೆ ಹೋಗಲು ಒಪ್ಪದಿದ್ದರೆ ಹಾಸ್ಟೆಲ್ ಸಿಬ್ಬಂದಿಯೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು ಎನ್ನಲಾಗಿದೆ. ಅದಕ್ಕಿಂತಲೂ ಗಂಭೀರವಾದ ಇನ್ನೊಂದು ಆರೋಪವೆಂದರೆ ವಿದ್ಯಾರ್ಥಿನಿಯರನ್ನು ಹೀಗೆ ಲೈಂಗಿಕವಾಗಿ ಬಳಸಿಕೊಳ್ಳುವ ಮುನ್ನ ಕುಟುಂಬಸ್ಥರಿಗೆ ಸಹಾಯ ಹಸ್ತ ನೀಡಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ.
ಲೈಂಗಿಕ ಕ್ರಿಯೆಗೆ ಒಪ್ಪದಿದ್ದರೆ ಹಣ್ಣು, ಸಿಹಿಯಲ್ಲಿ ಮತ್ತು ಬರಿಸುವ ಔಷಧ ಬೆರೆಸಿ ಅತ್ಯಾಚಾರ ನಡೆಸುತ್ತಾರೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ. ಕಿರುಕುಳವನ್ನು ಪ್ರಶ್ನಿಸಿದ ಕಾರಣಕ್ಕೆ ಈ ವಿದ್ಯಾರ್ಥಿನಿಯರನ್ನು ಹಾಸ್ಟೆಲ್‌ನಿಂದ ಹೊರ ಹಾಕಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ | ಧಾರವಾಡ ವಿಶ್ವೇಶ್ವರಯ್ಯ ಕಾಲೇಜಿನ ಲೈಂಗಿಕ ಕಿರುಕುಳ ಆರೋಪ; ಕಾಲೇಜು ಅಧ್ಯಕ್ಷನ ಬಂಧನ