ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಚಿತ್ರದುರ್ಗದ ಮುರುಘಾ ಮಠಕ್ಕೆ ಬುಧವಾರ ಭೇಟಿ ನೀಡಿದರು. ಹುಬ್ಬಳ್ಳಿಯಲ್ಲಿ ಮಂಗಳವಾರ ವಾಸ್ತವ್ಯ ಹೂಡಿದ್ದ ರಾಹುಲ್ ಬೆಳಗ್ಗೆ ಹೊರಟು ಚಿತ್ರದುರ್ಗಕ್ಕೆ ಆಗಮಿಸಿದರು.
ಮುರುಘಾ ಮಠದಲ್ಲಿ ಮುರುಘಾ ಶ್ರೀಗಳ ಜತೆ ಕೆಲಕಾಲ ಮಾತುಕತೆ ನಡೆಸಿದರು. ಬಸವೇಶ್ವರರ ತತ್ವ, ಸಿದ್ಧಾಂತಗಳ ಕುರಿತು ಮುರುಘಾ ಶರಣರು ಕೆಲಹೊತ್ತು ಮಾತನಾಡಿದರು. ಮಠಕ್ಕೆ ಚಿತ್ರದುರ್ಗ ಸುತ್ತಮುತ್ತಲಿನ ವಿವಿಧ ಸಮುದಾಯಗಳ 30ಕ್ಕೂ ಹೆಚ್ಚು ಸ್ವಾಮೀಜಿಗಳು ಆಗಮಿಸಿದ್ದರು.
ನಂತರ ರಾಹುಲ್ ಗಾಂಧಿ ಅವರ ಕೈಗೆ ಇಷ್ಟಲಿಂಗ ನೀಡಿದರು. ಇಷ್ಟಲಿಂಗದ ವಿಶೇಷತೆ, ಅದನ್ನು ಪೂಜಿಸುವ ಕುರಿತು ವಿವರಣೆ ನೀಡಿದರು. ನಂತರ ಇಷ್ಟಲಿಂಗವನ್ನು ಕೊರಳಿಗೆ ತೊಡಿಸಿದರು. ಹಣೆಗೆ ವಿಭೂತಿ ಹಚ್ಚಿದರು. ಮಾತುಕತೆ ಮುಕ್ತಾಯದ ನಂತರ ಶಾಲು ಹೊದಿಸಿ, ಬಸವೇಶ್ವರರ ಭಾವಚಿತ್ರವನ್ನು ನೀಡಿ ಸನ್ಮಾನಿಸಲಾಯಿತು.
ಮಾತುಕತೆಯ ನಂತರ ರಾಹುಲ್ ಗಾಂಧಿಯವರು ಸಿದ್ದರಾಮೋತ್ಸವದಲ್ಲಿ ಭಾಗವಹಿಸಲು ದಾವಣಗೆರೆಯತ್ತ ನಿರ್ಗಮಿಸಿದರು. ಮದ್ಯಾಹ್ನ ಒಂದು ಗಂಟೆ ಸುಮಾರಿಗೆ ಸಿದ್ದರಾಮೋತ್ಸವದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ | ರಾಹುಲ್ ಗಾಂಧಿ ಫಿಟ್‌ನೆಸ್: ಸಿದ್ದರಾಮೋತ್ಸವಕ್ಕೂ ಮುನ್ನ 52 ವರ್ಷದ ನಾಯಕನ ವರ್ಕೌಟ್