ಚಿತ್ರದುರ್ಗ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರನ ಜತೆ ಸೇರಿ ಪಾಪಿ ಪತ್ನಿ ಗಂಡನ (Murder Case) ಹತ್ಯೆಗೈದಿದ್ದಾಳೆ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಯಾದಲಗಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ರಾಘವೇಂದ್ರ (35) ಕೊಲೆಯಾದವನು.
ಪತ್ನಿ ದಿವ್ಯ, ಆಕೆಯ ಚಿಕ್ಕಪ್ಪ ಮಾರಣ್ಣ ಹಾಗೂ ಪ್ರಿಯಕರ ರಾಜಣ್ಣ ಜತೆ ಸೇರಿ ಪತಿ ರಾಘವೇಂದ್ರನನ್ನು ಕೊಂದಿದ್ದಾರೆ. ರಾಘವೇಂದ್ರನಿಗೆ ಮೊದಲಿಗೆ ನಿದ್ರೆ ಮಾತ್ರೆ ನೀಡಿ ಮಲಗಿಸಿದ್ದಾರೆ. ಬಳಿಕ ನಿದ್ರೆಗೆ ಜಾರುತ್ತಿದ್ದಂತೆ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ. ಪತಿಯನ್ನು ಕೊಂದು ಹೊಟ್ಟೆ ಉರಿಯಿಂದ ಸತ್ತಿದ್ದಾನೆ ಎಂದು ದಿವ್ಯ ನಾಟಕವಾಡಿದ್ದಳು.
ಮೊದಲು ಯುಡಿಆರ್ ದಾಖಲಿಸಿಕೊಂಡಿದ್ದ ಪೊಲೀಸರಿಗೆ ತನಿಖೆಯಲ್ಲಿ ಕೊಲೆ ಸತ್ಯ ಬಯಲಾಗಿದೆ. ಮರಣೋತ್ತರ ಪರೀಕ್ಷೆ ವೇಳೆ ಇದು ಕೊಲೆ ಎಂದು ತಿಳಿದು ಬಂದಿದೆ. ಕುಟುಂಬಸ್ಥರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಕೂಡಲೇ ದಿವ್ಯ, ಮಾರಣ್ಣ, ರಾಜಣ್ಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಪಿಐ ಹನುಮಂತಪ್ಪ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ. ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:Murder Case : ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯನ್ನು ಕೊಂದಿದ್ಯಾರು? ನಿಗೂಢ ಸಾವಿನ ಬೆನ್ನಟ್ಟಿದ ಪೊಲೀಸರು
ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆ
ಯಾದಗಿರಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿಯ ಹಳ್ಳದಲ್ಲಿ ಯುವಕನ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ರವಿ ಹಿರೇಮಠ (28) ಮೃತ ದುರ್ದೈವಿ. ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಕಡಕೋಳ ಗ್ರಾಮದ ರವಿ ಬ್ಯಾಂಕ್ ಲೋನ್ ಮಾಡಿಸುವುದಾಗಿ ಮನೆಯಲ್ಲಿ ಹೇಳಿ ಬಂದಿದ್ದ. ಆದರೆ ಸಂಜೆಯಾದರೂ ಮನೆಗೆ ಬಂದಿರಲಿಲ್ಲ.
ರವಿ ಕಾಣದೆ ಇದ್ದಾಗ ಕಂಗಲಾದ ಪೋಷಕರು ನಾಪತ್ತೆ ಕೇಸ್ ದಾಖಲಿಸಿದ್ದರು. ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು ಆತನ ಸ್ನೇಹಿತರಿಗೆ ಫೋನ್ ಮಾಡಿ ವಿಚಾರಿಸಿದ್ದಾರೆ. ಸುನಿಲ್ ಎಂಬಾತ ಈ ವೇಳೆ ರವಿ ಅಲ್ಲಿದ್ದಾನೆ, ಇಲ್ಲಿದ್ದಾನೆ ಎಂದು ಸುಳ್ಳು ಹೇಳಿ ಸತಾಯಿಸಿದ್ದ. ಈ ನಡುವೆ ರವಿ ಪೋಷಕರಿಗೆ ಹಣ ಫೋನ್ ಪೇ ಮಾಡಿ ನಿಮ್ಮ ಮಗನ ತೋರಿಸುತ್ತೇನೆ ಎಂದಿದ್ದ. ಹಣ ಹಾಕಿದ ಬಳಿಕ ನಾನು ನಿಮ್ಮ ಮಗನನ್ನೇ ನೋಡಿಲ್ಲ ಎಂದಿದ್ದ. ಈಗ ಹಣಕಾಸಿನ ವಿಚಾರಕ್ಕಾಗಿ ಸುನಿಲ್ ಎಂಬಾತನೆ ಕೊಲೆ ಮಾಡಿರುವ ಶಂಕೆ ಇದೆ. ತಮ್ಮ ಮಗನನ್ನು ಸುನಿಲ್ ಕೊಲೆ ಮಾಡಿರುವುದಾಗಿ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಆರೋಪಿ ಪತ್ತೆಗೆ ಕೆಂಭಾವಿ ಪೊಲೀಸರು ಜಾಲ ಬೀಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ