Site icon Vistara News

Hanuman Flag: ಮಂಡ್ಯ ಹನುಮ ಧ್ವಜ ಪ್ರಕರಣ; ತ್ರಿವರ್ಣ ಧ್ವಜ ಬಿಟ್ಟು ಭಗವಾಧ್ವಜ ಹಾರಿಸಿದ್ದು ಸರಿಯಲ್ಲ: ಸಿದ್ದರಾಮಯ್ಯ

CM Siddaramaiah talking on mandya Hanuman Flag issue

ಚಿತ್ರದುರ್ಗ: ಮಂಡ್ಯದ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಹಾರಾಟ (Hanuman Flag) ವಿಚಾರಕ್ಕೆ ಸಂಬಂಧಿಸಿದಂತೆ ಭಾರಿ ಗಲಾಟೆ ನಡೆಯುತ್ತಿದೆ. ಪೊಲೀಸರ ನೇತೃತ್ವದಲ್ಲಿ ಧ್ವಜವನ್ನು ಇಳಿಸುವ ನಿರ್ಧಾರಕ್ಕೆ ಬಂದಿರುವ ಸರ್ಕಾರದ ಕ್ರಮವನ್ನು ಗ್ರಾಮಸ್ಥರು ಹಾಗೂ ಹಿಂದುಪರ ಸಂಘಟನೆಗಳು ಖಂಡಿಸಿವೆ. ಪ್ರತಿಭಟನೆಯನ್ನೂ ನಡೆಸಲಾಗಿದ್ದು, ಪ್ರಾಣ ಬೇಕಾದರೂ ಬಿಟ್ಟೇವು, ಧ್ವಜ ಇಳಿಸಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತಿದ್ದಾರೆ. ಆದರೆ, ಇದರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಪ್ರತಿಕ್ರಿಯೆ ನೀಡಿದ್ದು, ಆಕ್ರೋಶವನ್ನು ಹೊರಹಾಕಿದ್ದಾರೆ. ಮಂಡ್ಯದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು (Tricolour Flag) ಹಾರಿಸುವುದು ಬಿಟ್ಟು ಭಗವಾಧ್ವಜ ಹಾರಿಸಿದ್ದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಭಾನುವಾರ ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಏನೇ ಇದ್ದರೂ ದೇಶದ ಬಾವುಟವನು ಹಾರಿಸಬೇಕು ಎಂದು ಹೇಳಿದರು. ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ಕಿತ್ತುಹಾಕಿರುವುದಕ್ಕೆ ಬಿಜೆಪಿ ಕಿಡಿಕಾರಿದ್ದು, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭೇಟಿ ನೀಡುತ್ತಿರುವ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಸಿಎಂ ಸಿದ್ದರಾಮಯ್ಯ ಈ ಉತ್ತರ ನೀಡಿದರು.

ಇದನ್ನೂ ಓದಿ: BS Yediyurappa: ರೆಡ್ಡಿ, ಆಯನೂರು ಸೇರಿ ಪಕ್ಷ ಬಿಟ್ಟವರು ವಾಪಸ್‌ ಬರ್ತಾರೆ: ಬಿ.ಎಸ್.‌ ಯಡಿಯೂರಪ್ಪ

ಕಾಂಗ್ರೆಸ್‌ ಶಾಸಕ ಶಾಮನೂರು ಶಿವಶಂಕರಪ್ಪ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗದಲ್ಲಿ ಬಿ.ವೈ. ರಾಘವೇಂದ್ರ ಅವರೇ ಗೆಲ್ಲಲಿ ಎಂದು ಹೇಳಿಕೆ ನೀಡಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನನಗೆ ಗೊತ್ತಿಲ್ಲ, ಅವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು.

15- 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ

ಲೋಕಸಭಾ ಚುನಾವಣೆಯಲ್ಲಿ 15- 20 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ನಮಗಿದೆ. ಬಿಜೆಪಿಯವರಂತೆ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಸುಳ್ಳು ಹೇಳುವುದಿಲ್ಲ. ಈ ಬಗ್ಗೆ ನಾವು ಚುನಾವಣಾ ಸಮೀಕ್ಷೆಯನ್ನು ಮಾಡಿಸಿದ್ದೇವೆ. ಅಲ್ಲಿ ಕಾಂಗ್ರೆಸ್‌ ಪರವಾದ ಅಲೆಯಿರುವುದು ಗೊತ್ತಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಚಿವ ಸಂಪುಟದಲ್ಲಿ ಚರ್ಚೆ

ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಜಾರಿ ಮಾಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ವರಿಷ್ಠರು ತೀರ್ಮಾನಿಸುತ್ತಾರೆ

ಇಂಡಿಯಾ ಒಕ್ಕೂಟದಿಂದ ಹಲವು ಪಕ್ಷಗಳು ಬಿಟ್ಟು ಹೋಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಈ ವಿಷಯವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವರಿಷ್ಠ ನಾಯಕರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರು ಈ ಬಗ್ಗೆ ನಿರ್ಧಾರ ಮಾಡುತ್ತಾರೆ. ನಾನು ಈ ಬಗ್ಗೆ ಮಾತನಾಡುವುದಿಲ್ಲ ಎಂದರು.

ಇದನ್ನೂ ಓದಿ: Janardhana Reddy: ಜನಾರ್ದನ ರೆಡ್ಡಿ ಪಕ್ಷ ಬಿಜೆಪಿಯಲ್ಲಿ ವಿಲೀನ; ವರಿಷ್ಠರ ಜತೆ ಚರ್ಚಿಸಿ ತೀರ್ಮಾನ: ವಿಜಯೇಂದ್ರ

ಜಾತಿ ಗಣತಿ ವರದಿ ನನ್ನ ಕೈ ಸೇರಿಲ್ಲ

ಜಾತಿವಾರು ಜನಗಣತಿ ವರದಿಯನ್ನು ಸಲ್ಲಿಸಿದರೆ ವರದಿಯನ್ನು ಸ್ವೀಕಾರ ಮಾಡುತ್ತೇನೆ. ಕಳೆದ ಬಾರಿ ನಾನು ಅಧಿಕಾರದಲ್ಲಿದ್ದಾಗ ವರದಿ ನನ್ನ ಕೈ ಸೇರಿರಲಿಲ್ಲ. ಈಗ ಒಂದಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಆದರೆ, ಈ ವರದಿ ನನ್ನ ಕೈ ಸೇರಿಲ್ಲ. ಹೀಗಾಗಿ ಆ ವರದಿಯಲ್ಲಿ ಏನಿದೆ ಎಂಬುದನ್ನು ಸಲ್ಲಿಕೆಯಾದ ಮೇಲೆ ಚರ್ಚೆ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

Exit mobile version