ಮೈಸೂರು: ಚಿತ್ರದುರ್ಗದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ವಿಚಾರಣೆ ಆರಂಭದಿಂದಲೇ ದಾರಿತಪ್ಪುತ್ತಿದೆ ಎಂದು ದೂರುದಾರ ಸಂಸ್ಥೆ ಆರೋಪಿಸಿದೆ.
ಈ ಕುರಿತು ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಪರಶುರಾಮ್ ಹಾಗೂ ಸ್ಟ್ಯಾನ್ಲಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಬಾಲಕಿಯರ ಜತೆಗೆ ಸಂಸ್ಥೆಯಿಂದ ಆಪ್ತ ಸಮಾಲೋಚಕಿ ಸರಸ್ವತಿ ಅವರನ್ನು ಕಳಿಸಿಕೊಡಲಾಗಿದೆ. ಈ ವೇಳೆಗೆ ಮಕ್ಕಳಿಂದ ಹೇಳಿಕೆಯನ್ನು ದಾಖಲಿಸಿಕೊಳ್ಳಬೇಕಿತ್ತು. ವಿಚಾರಣೆ ವೇಳೆ ಆಪ್ತ ಸಮಾಲೋಚಕರನ್ನು ದೂರ ಇರಿಸಲಾಗಿದೆ. ಇದರಿಂದ ಮಕ್ಕಳಿಗೆ ನ್ಯಾಯ ಸಿಗುವ ಭರವಸೆ ಕಡಿಮೆ ಆಗುತ್ತಿದೆ. ಕಾನೂನು ಪರಿಪಾಲನೆ ಸರಿಯಾಗಿ ನಡೆಯುತ್ತಿಲ್ಲ. ಮಕ್ಕಳಿಗೆ ಧೈರ್ಯವನ್ನು ವೃದ್ಧಿಸುವ ವಾತಾವರಣ ಇಲ್ಲವಾಗುತ್ತಿದೆ ಎಂದಿದ್ದಾರೆ.
ಪೋಕ್ಸೊ ಕಾನೂನಿನ ಪ್ರಕಾರ, ಹೇಳಿಕೆ ಪಡೆಯುವ ವೇಳೆ ಮಕ್ಕಳ ವಿಶ್ವಾಸದ ವ್ಯಕ್ತಿ ಜತೆಗಿರಬೇಕು. ಆದರೆ ಅಂತಹ ವ್ಯಕ್ತಿಯನ್ನೇ ಹೊರಗೆ ಇರಿಸಿ, ಮಕ್ಕಳಿಗೆ ಆಘಾತ ನೀಡಲು ಮುಂದಾಗಿದ್ದಾರೆ. ಸಿಡಬ್ಲ್ಯೂಸಿ ನಡೆ ಸರಿಯಾದ ಬೆಳವಣಿಗೆಯಲ್ಲ ಎಂಬುದು ನಮ್ಮ ಅಭಿಪ್ರಾಯ. ಈ ಸಂಬಂಧ ಮುಖ್ಯ ನ್ಯಾಯಾಧೀಶರಿಗೆ, ಸರ್ವೋಚ್ಚ ನ್ಯಾಯಾಲಯದ ಕದ ತಟ್ಟುತ್ತೇವೆ. ನಿಜ ಸಂಗತಿಗಳ ಕುರಿತು ಪ್ರಕರಣ ಈಗ ದಾಖಲಾಗಬೇಕಿತ್ತು. ಸಿಡಬ್ಲ್ಯೂಸಿ ಮುಖ್ಯಸ್ಥರನ್ನು ಹೊರಗೆ ಇಡಬೇಕು. ನಮಗೆ ನ್ಯಾಯಾಲಯದ ಮೇಲೆ ವಿಶ್ವಾಸವಿದೆ, ಆದರೆ ಸಿಡಬ್ಲ್ಯೂಸಿ ಮುಖ್ಯಸ್ಥರ ಮೇಲೆ ವಿಶ್ವಾಸವಿಲ್ಲ ಎಂದಿದ್ದಾರೆ.
ಮಕ್ಕಳು ವಾಪಸ್ ಬರುವ ಇಚ್ಛೆ ಇದ್ದರೆ ಖಂಡಿತ ಬರಬಹುದು, ಆ ಮಕ್ಕಳಿಗೆ ನಾವು ಎಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | ಬಹಿರಂಗವಾಗಿ ಕಾಣಿಸಿಕೊಂಡ ಮುರುಘಾ ಶ್ರೀಗಳು: ಸಿಎಂ ಬೊಮ್ಮಾಯಿ ಮೊದಲ ಪ್ರತಿಕ್ರಿಯೆ