ಚಿತ್ರದುರ್ಗ: ಇಬ್ಬರು ಬಾಲಕಿಯರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರಘಾ ಶರಣರನ್ನು ಮಠಕ್ಕೆ ಕರೆತಂದಿರುವ ಪೊಲೀಸರು ಮಹಜರು ನಡೆಸಿದ್ದಾರೆ. ಸೋಮವಾರಕ್ಕೆ ಸ್ವಾಮೀಜಿಯ ಪೊಲೀಸ್ ಕಸ್ಟಡಿ ಮುಕ್ತಾಯವಾಗಲಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.
ಬೆಳಗ್ಗೆ 11.30ರ ಸುಮಾರಿಗೆ ಮುರುಘಾ ಶರಣರನ್ನು ಮಠಕ್ಕೆ ಪೊಲೀಸರು ಕರೆತಂದರು. ಮಾಧ್ಯಮದವರಿಗೆ ಒಳಗಿನ ದೃಶ್ಯಗಳು ಕಾಣದಂತೆ ಪೊಲೀಸ್ ವಾಹನದೊಳಗೆ ಬಟ್ಟೆಯಿಂದ ಸಂಪೂರ್ಣ ಮುಚ್ಚಲಾಗಿತ್ತು. ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ಆಗಮಿಸಿದ ಪೊಲೀಸರು, ಬಾಲಕಿಯರು ಹೇಳಿಕೆಯಲ್ಲಿ ತಿಳಿಸಿರುವ ಸ್ಥಳಗಳನ್ನು ತಪಾಸಣೆ ಮಾಡಿದರು.
ಮಠಕ್ಕೆ ಆಗಮಿಸಿದ ಕೂಡಲೆ ಹಿಂದಿನ ಶ್ರೀಗಳ ಗದ್ದುಗೆ ದರ್ಶನ ಪಡೆದ ಮುರುಘಾ ಶರಣರು, ಮೌನವಾಗಿದ್ದರು. ಈಗಾಗಲೇ ಶರಣರು ವಾಸಿಸುವ ಖಾಸಗಿ ಕೊಠಡಿ, ಸ್ನಾನದ ಗೃಹದ ಮಹಜರು ಪೂರ್ಣಗೊಳಿಸಲಾಯಿತು. ದರ್ಬಾರ್ ಹಾಲ್ ಮಹಜರು ಪೂರ್ಣಗೊಂಡಿದ್ದು, ಇದೀಗ ಶ್ರೀಗಳ ಖಾಸಗಿ ಕೊಠಡಿಯಲ್ಲಿ ತಪಾಸಣೆ ನಡೆಯಿತು.
ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿದ್ದ ಬಾಲಕಿಯರು, ಪೊಲೀಸರ ಎದುರು ನೀಡಿದ್ದ ಹೇಳಿಕೆಯನ್ನೇ ನ್ಯಾಯಾಧೀಶರ ಎದುರೂ ಪುನರುಚ್ಛರಿಸಿದ್ದರು. ಒಬ್ಬ ಬಾಲಕಿ ಮೂರೂವರೆ ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಯುತ್ತಿತ್ತು ಎಂದರೆ ಮತ್ತೊಬ್ಬ ಬಾಲಕಿ ಕಳೆದ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯ ನಡೆಯುತ್ತಿತ್ತು ಎಂದಿದ್ದಳು. ಶ್ರೀಗಳ ಖಾಸಗಿ ಕೊಠಡಿಯಲ್ಲೇ ದೌರ್ಜನ್ಯ ನಡೆಯುತ್ತಿತ್ತು ಎಂದಿದ್ದರಿಂದ ಆ ಕೊಠಡಿಯನ್ನು ಪೊಲೀಸರು ಮಹಜರು ಮಾಡಿದರು.
ಖಾಸಗಿ ಕೊಠಡಿ ಜತೆಗೆ ಸ್ನಾನದ ಗೃಹದ ಮಹಜರು ಸಹ ನಡೆಯಿತು. ಬಾಲಕಿಯರು ಹೇಳಿಕೆ ನೀಡಿರುವಲ್ಲಿ ವಿವರಿಸಿರುವಂತೆಯೇ ಸ್ಥಳ ಇದೆಯೇ ಎಂದು ಪೊಲೀಸರು ಮಹಜರ್ ಮಾಡುತ್ತಾರೆ. ಹೇಳಿಕೆಗೂ ಸ್ಥಳಕ್ಕೂ ತಾಳೆ ಆಗಬೇಕಿರುವುದು ಪ್ರಕರಣದ ದೃಷ್ಟಿಯಿಂದ ಅತ್ಯಂತ ಮಹತ್ವದ ವಿಚಾರ. ಮಹಜರ್ ಮುಗಿದ ನಂತರ ಮತ್ತೆ ಡಿವೈಎಸ್‌ಪಿ ಕಚೇರಿಗೆ ಕೊಂಡೊಯ್ಯಲಾಯಿತು.
ಇಂದು ಜಾಮೀನು ಅರ್ಜಿ ವಿಚಾರಣೆ
ಸ್ವಾಮೀಜಿಯವರ ಪೊಲೀಸ್ ಕಸ್ಟಡಿ ಸೋಮವಾರಕ್ಕೆ ಮುಕ್ತಾಯವಾಗಲಿದೆ. ಇದೇ ವೇಳೆ ಸ್ವಾಮೀಜಿ ಸಲ್ಲಿಸಿರುವ ಜಾಮೀನು ಅರ್ಜಿಯೂ ವಿಚಾರಣೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆಯಿದ್ದು, ಜಾಮೀನು ದೊರೆಯುವ ಸಾಧ್ಯತೆ ಬಹಳ ಕಡಿಮೆ ಎಲ್ಲನಾಗಿದೆ. ಪೊಲೀಸರು ಮತ್ತಷ್ಟು ದಿನ ಕಸ್ಟಡಿಗೆ ಕೇಳಬಹುದಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆಗಳೂ ಇವೆ.
ಮುರುಘಾ ಶರಣರ ಜಾಮೀನು ಅರ್ಜಿ ಜತೆಗೇ, ನಾಲ್ಕನೇ ಆರೋಪಿ ಪರಮಶಿವಯ್ಯ ಹಾಗೂ ಐದನೇ ಆರೋಪಿ ಗಂಗಾಧರಯ್ಯ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯೂ ಸೋಮವಾರ ನಡೆಯಲಿದೆ.
ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಏನಿದು ಪುರುಷತ್ವ ಪರೀಕ್ಷೆ? ಯಾಕೆ ಮಾಡ್ತಾರೆ? ಈ ಟೆಸ್ಟ್‌ನಿಂದ ರೇಪ್ ಸಾಬೀತಾಗುತ್ತದೆಯೇ?