Site icon Vistara News

Chittapur Election Results: ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ ಖರ್ಗೆಗೆ ಒಲಿದ ವಿಜಯ

priyank kharge

ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಿಯಾಂಕ ಖರ್ಗೆ 72,683 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ಮಣಿಕಂಠ ರಾಠೋಡ್‌ 55,715 ಮತ ಗಳಿಸಿ ಖರ್ಗೆ ಅವರಿಗಿಂತ ಭಾರಿ ಹಿಂದುಳಿದರು.

ಈ ಬಾರಿ ಚಿತ್ತಾಪುರ ಕ್ಷೇತ್ರ ಹೆಚ್ಚು ಸದ್ದು ಮಾಡಿತ್ತು. ಕಾಂಗ್ರೆಸ್‌ನಿಂದ ಸಚಿವ, ಎಐಸಿಸಿ ಅಧ್ಯಕ್ಷರ ಪುತ್ರ ಪ್ರಿಯಾಂಕ ಖರ್ಗೆ ನಿಂತಿದ್ದರು. ಕಳೆದೆರಡು ಬಾರಿ ಅವರು ಭರ್ಜರಿ ಅಂತರದಿಂದ ಗೆಲುವು ದಾಖಲಿಸಿದ್ದರು. ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ಪ್ರಧಾನಿ ಮೋದಿ ಅವರಿಗೆ ʼನಾಲಾಯಕ್‌ʼ ಎಂದದ್ದು ಸುದ್ದಿ ಮಾಡಿತ್ತು.

ಅದಕ್ಕಿಂತ ಹೆಚ್ಚಾಗಿ, ಪ್ರಿಯಾಂಕ್‌ ಎದುರು ಬಿಜೆಪಿ ನಿಲ್ಲಿಸಿದ್ದ ಅಭ್ಯರ್ಥಿಯ ಇತಿವೃತ್ತ ಹೆಚ್ಚು ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್‌ ಅವರ ಮೇಲೆ 40ಕ್ಕೂ ಅಧಿಕ ಕ್ರಿಮಿನಲ್‌ ಕೇಸುಗಳಿವೆ. ʼʼಖರ್ಗೆ ಕುಟುಂಬವನ್ನು ಮುಗಿಸಿಬಿಡುತ್ತೇನೆʼʼ ಎಂದು ಅವರು ಹೇಳಿದ್ದಾರೆ ಎನ್ನಲಾದ ಆಡಿಯೋವನ್ನು ಕಾಂಗ್ರೆಸ್‌ ಬಿಡುಗಡೆ ಮಾಡಿದ್ದಲ್ಲದೆ, ರಾಠೋಡ್‌ ರಿವಾಲ್ವರ್‌ ತಿರುಗಿಸುತ್ತಿರುವ ವಿಡಿಯೋ ಕೂಡ ವೈರಲ್‌ ಆಗಿತ್ತು.

2008ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯ ನಂತರ ಚಿತ್ತಾಪುರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ. ನಂತರ ಚಿತ್ತಾಪುರ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಗೆದ್ದಿದ್ದರು. ಅವರು ಲೋಕಸಭೆಗೆ ಹೋದ ಬಳಿಕ ಮಗ ಪ್ರಿಯಾಂಕ್‌ ಸ್ಪರ್ಧಿಸುತ್ತಿದ್ದಾರೆ. 2013ರಲ್ಲಿ ಪ್ರಿಯಾಂಕ್ ಖರ್ಗೆ ದೊಡ್ಡ ಮತಗಳ ಅಂತರದಿಂದ ಬೃಹತ್ ಜಯಭೇರಿ ಬಾರಿಸಿದ್ದರು. 2018ರಲ್ಲಿಯೂ ಜಯ ಗಳಿಸಿದ್ದರು. ಬಿಜೆಪಿಯ ವಾಲ್ಮೀಕಿ ನಾಯಕ್ 4,393 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.

1989ರಿಂದಲೂ ಕಾಂಗ್ರೆಸ್ ಭದ್ರಕೋಟೆಯಾಗಿರುವ ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕೈ- ಕಮಲದ ನಡುವೆಯೇ ಪೈಪೋಟಿ. 2009ರ ಉಪಚುನಾವಣೆಯಲ್ಲಿ ಮಾತ್ರ ಬಿಜೆಪಿ ಗೆದ್ದಿತ್ತು. ಉಳಿದಂತೆ ಜೆಡಿಎಸ್‌ನಿಂದ ಸುಭಾಷ್‌ಚಂದ್ರ ರಾಠೋಡ್‌, ಆಪ್‌ನಿಂದ ಜಗದೀಶ್‌ ಸಾಗರ್‌ ಸ್ಪರ್ಧಿಸಿದ್ದರು. ಇಲ್ಲಿ ಇರುವ ಒಟ್ಟು ಮತಗಳು 2,28,618. 1,14,714 ಪುರುಷ ಹಾಗೂ 1,13,872 ಸ್ತ್ರೀಯರು.

Exit mobile version