Site icon Vistara News

CI ನಂದೀಶ್‌ ಸಾವು| ಎಂಟಿಬಿ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ: ಗಂಭೀರವಾಗಿ ಪರಿಗಣಿಸುತ್ತೇವೆ ಎಂದ ಸಿ.ಟಿ. ರವಿ

nandish

ಬೆಂಗಳೂರು: ಬೆಂಗಳೂರಿನ K.R​.ಪುರ ಠಾಣೆ ಇನ್ಸ್​ಪೆಕ್ಟರ್​ ನಂದೀಶ್​ ಅವರ ಸಾವು ಮತ್ತು ಸಚಿವ ಎಂ.ಟಿ.ಬಿ ನಾಗರಾಜ್‌ ಅವರ ವಿವಾದಾತ್ಮಕ ಹೇಳಿಕೆಯಿಂದ ರಾಜ್ಯ ಸರ್ಕಾರ ತೀವ್ರ ಮುಜುಗರ ಉಂಟಾಗಿದೆ. ಇದರ ಬಗ್ಗೆ ಸರಕಾರ ಮತ್ತು ಪಕ್ಷದ ಮಟ್ಟದಲ್ಲಿ ಗಂಭೀರವಾದ ಚರ್ಚೆಗಳು ಆರಂಭಗೊಂಡಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಾ ಈ ವಿಚಾರದಲ್ಲಿ ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರ ಜತೆಗೂ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಜತೆಗೆ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.

ಎಂ.ಟಿ.ಬಿ. ಹೇಳಿದ್ದೇನು?
ಸರ್ಕಲ್‌ ಇನ್ಸ್‌ಪೆಕ್ಟರ್‌ ನಂದೀಶ್‌ ಅವರು ಹೃದಯಾಘಾತಗೊಂಡು ಪ್ರಾಣ ಕಳೆದುಕೊಳ್ಳಲು ಅವರನ್ನು ಕಮಿಷನರ್‌ ಪ್ರತಾಪ್‌ ರೆಡ್ಡಿ ಅವರು ಅಮಾನತು ಮಾಡಿದ್ದೇ ಕಾರಣ ಎನ್ನುವುದು ಸಚಿವ ಎಂ.ಟಿ.ಬಿ ನಾಗರಾಜ್‌ ಅವರ ಪ್ರಧಾನ ಆಕ್ಷೇಪವಾಗಿತ್ತು. ಅವಧಿ ಮೀರಿ ಪಬ್​ ನಡೆಸಲು ಅವಕಾಶ ನೀಡಿದ್ದಕ್ಕೆ ಅಮಾನತು ಮಾಡಿ ಕಮಿಷನರ್ ಪ್ರತಾಪ್ ರೆಡ್ಡಿ ಆದೇಶಿಸಿದ್ದರು. ಆದರೆ, ಇದೆಲ್ಲ ನೋಟಿಸ್‌ ಕೊಟ್ಟು ಮುಗಿಸಬಹುದಾದ ಕೆಲಸ. ಅಮಾನತು ಮಾಡಬೇಕಾಗಿರಲಿಲ್ಲ ಎಂದಿದ್ದರು ಸಚಿವ ಎಂಟಿಬಿ. ಆದರೆ, ಅದರ ಜತೆಗೆ ಅವರು ಆಡಿದ ಮತ್ತೊಂದು ಮಾತು ಭಾರಿ ಸದ್ದು ಮಾಡಿದೆ. ʻʻ೬೦-೭೦ ಲಕ್ಷ ಕೊಟ್ಟು ಬರ್ತಾರೆ. ಹೃದಯಾಘಾತ ಆಗದೆ ಇರುತ್ತಾʼʼ ಎಂದು ಅವರು ಕೇಳಿದ್ದರು. ನಂದೀಶ್‌ ಅವರು ಈ ಹುದ್ದೆಗೆ ಬರಲು ಇಷ್ಟೊಂದು ದೊಡ್ಡ ಮೊತ್ತದ ಲಂಚ ನೀಡಿದ್ದಾರೆ ಎಂಬ ಹಾಗೆ ಅವರ ಮಾತಿನ ಧಾಟಿ ಇತ್ತು. ಇದು ಆಳುವ ಪಕ್ಷಕ್ಕೆ ಮುಜುಗರ ತಂದರೆ ಪ್ರತಿಪಕ್ಷಗಳಿಗೆ ಒಂದು ಅಸ್ತ್ರವಾಗಿದೆ. ಜೆಡಿಎಸ್‌ ನಾಯಕ, ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಎಂ.ಬಿ ಪಾಟೀಲ್‌ ಅವರು ಇದರ ಬಗ್ಗೆ ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ. ಈ ನಡುವೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಮಾತನಾಡಿದ್ದಾರೆ.

ಸಿ.ಟಿ. ರವಿ ಅವರು ಹೇಳಿದ್ದೇನು?
ʻʻಸಚಿವ ಎಂಟಿಬಿ ನಾಗರಾಜ್ ಅವರು ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಪಕ್ಷ ಇಂತಹ ವಿಷಯಗಳನ್ನ ಲಘುವಾಗಿ ಪರಿಗಣಿಸುವುದಿಲ್ಲ. ನಾನು ರಾಜ್ಯಾಧ್ಯಕ್ಷರ ಜತೆ ಸಹ ಚರ್ಚೆ ಮಾಡ್ತೀನಿ. ಎಂ.ಟಿ.ಬಿ ನಾಗರಾಜ್‌ ಅವರ ಬಳಿ ಯಾವುದಾದರೂ ಮಾಹಿತಿ ಇದ್ದರೆ ಕೊಡಲಿ. ಇಲ್ಲದೇ ಇದ್ದರೆ ಇದು ಸರ್ಕಾರಕ್ಕೆ ಮತ್ತು ಪಕ್ಷಕ್ಕೆ ಡ್ಯಾಮೇಜ್ ಮಾಡಿದಂತಾಗುತ್ತದೆ. ಹೀಗಾಗಿ ಸರ್ಕಾರ ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕುʼʼ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ಮೀಸಲಾತಿ ಕ್ರೆಡಿಟ್‌ ಆಡಳಿತ ಪಕ್ಷಕ್ಕೇ
ಮೀಸಲಾತಿ ವಿಚಾರದಲ್ಲಿ ನಮಗೂ ಕ್ರೆಡಿಟ್ ಬರಬೇಕು ಎಂಬ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಚ್‌.ಡಿ.ಕೆ ಅವರು, ಕುಮಾರಸ್ವಾಮಿ ಅವರ ಕಾಲದಲ್ಲಿ ಮಾಡಿದ್ರೆ ಅವರನ್ನೂ ಹೊಗಳ್ತಿದ್ರು. ಕೊಟ್ಟಾಗ ಕ್ರೆಡಿಟ್ ಬರೋದು ಕೂಡ ಆಡಳಿತ ಪಕ್ಷಕ್ಕೆ ಎಂದರು.

ʻʻಸಾಲ ಮನ್ನಾ ವಿಚಾರದಲ್ಲಿ ನಾನು ಮಾಡಿದ್ದು ಅಂತ ಕುಮಾರಸ್ವಾಮಿ ಅವರು ಕ್ರೆಡಿಟ್ ತಗೋಳ್ತಾರೆ. ಈಗ ಹಲವು ಸ್ವಾಮೀಜಿಗಳು ಮೀಸಲಾತಿ ಕೇಳ್ತಿದ್ದಾರಲ್ವಾ? ಈಗ ಕ್ರೆಡಿಟ್ ಬಯಸೋರು, ಮತ್ತೊಂದರಲ್ಲೂ ಕ್ರೆಡಿಟ್ ಪಾಲುದಾರರಾಗಿʼʼ ಎಂದು ಕಾಲೆಳೆದರು.

ಇದನ್ನೂ ಓದಿ | ಅಮಾನತುಗೊಂಡಿದ್ದ ಎಸ್‌ಐ ನಂದೀಶ್‌ ಹೃದಯಾಘಾತದಿಂದ ಸಾವು, ಆಯುಕ್ತರ ಮೇಲೆ ಸಚಿವ ಎಂಟಿಬಿ ನಾಗರಾಜ್ ಗರಂ

Exit mobile version